Saturday, December 18, 2010

ನೈಟ್ ಶಿಫ್ಟ್ ನ ಅದೇ ಹಳೇ ರಾಗ...

ಕತ್ತಲ ನೀರವ ಮೌನದಲ್ಲಿ,
ಕನಸುಗಳಿಗೆ ರೆಕ್ಕೆ ಬಿಚ್ಚಿ ಹಾರುವ ಸಮಯ;
ಎಲ್ಲೋ ಕೆಲವರ,
ಮುಗಿಯದ ರಾತ್ರಿಯ ಎಣ್ಣೆಯ ದೀಪಗಳು,
ಈಗ ಇನ್ನೇನು ಆರಿ,
ಮನಸು ದೇಹದ ಜೊತೆ ಮರೆತು ಮಲಗೋ ಆಸೆ!
ನಗು,ಅಳು,ಕೋಪ,ದುಃಖ;
ಯಾವುದೂ ಈಗ ಬೇಕಿಲ್ಲ!
ಬರಿಯ ನಿದ್ದೆ, ಮತ್ತು ಅದರ ಬರುವಿಕೆಯ ಕಾತರ!
ಕನಸೊಂದು ಮೂಡುವ ಗಳಿಗೆಯಲ್ಲಿ, ರಿಲೀವರ್ ನ ಕರೆ;
ಯಾವ ಕ್ಷಣ ಏನಾಗುವುದೋ ಎಂಬ ಆತಂಕ ಮತ್ತು ಏನೂ ಆಗುವುದಿಲ್ಲ ಎಂಬ ಭರವಸೆ,
ಇಲ್ಲಿ ರಾತ್ರಿಗಳು ಬೇಗನೆ ಮುಗಿಯುವುದಿಲ್ಲ;
ಏಕೆಂದರೆ ಕತ್ತಲ ದಾರಿ ದೂರ...

Monday, December 13, 2010

ಹೀಗಿದೆ ಈಗ ಕಥೆ...

ನಿನ್ನೆಯ ನೆನಪು; ನಾಳೆಯ ಕನಸುಗಳ ನಡುವೆ,
ಇಂದಿನ ಬದುಕಿನ ಜೋಕಾಲಿ.
ಜೀಕಿದಂತೆಲ್ಲ ಅತ್ತ ಕೊಂಚ, ಇತ್ತ ಕೊಂಚ,
ಕನವರಿಕೆಗಳ ಮೇಲಾಟ.
ಆಸೆ ಎಂಬ ಹಾಯಿ ದೋಣಿಗೆ ನಿರೀಕ್ಷೆಗಳ ಭಾರ,
ಗಾಳಿ ಬೀಸಿದತ್ತ ಚಿತ್ತ;
ಕನಸುಗಳ ಕ್ಯಾನ್ವಾಸ್ ತುಂಬಾ ಕರಗಿದ ಬಣ್ಣಗಳ ಚಿತ್ತಾರ,
ಇರದ ಕೇಂದ್ರವ ಹುಡುಕುತ್ತಾ ಪರಿಧಿಯಲಿ ಅಲೆದಾಟ,
ಅದೇ ಸಂಜೆ, ಅದೇ ಕಾತರ;
ಎದೆಗೂಡಲ್ಲಿ ಅದೇ ಭಾವಗಳು,
ಹೆಸರು ಮಾತ್ರ ಬೇರೆ!
ಈ ಕ್ಷಣದ ಈ ತವಕ, ಈ ತಲ್ಲಣ;
ಮುಗಿದಾಗಿನ ನಿರಾಶೆ ಮತ್ತು ಮೌನ...

ನಾವು ಯುವಕರು...

ನಾವು ಯುವಕರು,
ಉಕ್ಕುವ ಬಿಸಿನೆತ್ತರನ್ನೆದುರಿಸಲಾರದೆ ಸೋತು ಶರಣಾದವರು,
ಪ್ರತಿಯೊಂದೂ ನಮ್ಮಿಂದಲೇ, ನಾವೇ ಅದಕ್ಕೆ ಕಾರಣ ಎಂದು ನಂಬಿದವರು,
ಅಸಾಧ್ಯದ ಅರ್ಥವೇ ತಿಳಿಯದಂತೆ ಆಡುವವರು,
ವ್ಯವಸ್ಥೆಯ ವಿರುದ್ಧ ಬಂಡಾಯ ಹೂಡಿದವರು,
ಕಾಲ ಕೆಳಗಿನ ಭೂಮಿಯ ಬಿಟ್ಟು, ಆಕಾಶ ನೋಡುತ್ತಾ ನಡೆವವರು,
ಮುಂದಿನ ಪೀಳಿಗೆಯ ಪಾಲಿಗೆ ಸ್ಪೂರ್ತಿಯ ಚಿಲುಮೆಗಳು,
ಇತಿಹಾಸದಿಂದ ಪಾಠ ಕಲಿಯದವರು,
ವಿಶ್ವದ ಪರಿಧಿಯಲ್ಲಿ ಇಲ್ಲದ ಕೇಂದ್ರವನ್ನು ಹುಡುಕುತ್ತಾ ಅಲೆದವರು,
ದೇವರ ತೆಗಳುತ್ತಾ, ನಾಸ್ತಿಕತೆಯ ದಾರಿಯಲ್ಲಿ ದೇವಸ್ಥಾನಕ್ಕೆ ಹೋದವರು,
ಹೊಸ ಹೊಸ ಸಂಬಂಧಗಳಿಗೆ, ನಿರಂತರ ಜೀವನೋತ್ಸಾಹಕ್ಕೆ ತುಡಿವವರು,
ಬ್ರಹ್ಮಚಾರಿಗಳಾಗಿಯೂ, ಅತ್ತಲೇ ಕಣ್ಣುಗಳನ್ನು ನೆಟ್ಟವರು,
ಎಲ್ಲದರಲ್ಲೂ ಸೋತು, ಮತ್ತದೇ ಸಂಪ್ರದಾಯದ ಶೃಂಖಲೆಗಳಿಗೆ ಜೋತು ಬಿದ್ದವರು,
ಮತ್ತೆ ಈಗ,
ಕಿರಿಯರ ಬಂಧಿಸಲು ಕೋಳ ಹಿಡಿದು ಕಾಯುತ್ತಿರುವ ಹಿರಿಯರು!
ಹಿಸ್ಟರಿ ರಿಪೀಟ್ಸ್!!

ಅಮ್ಮ ...

ಹುಡುಕುತ್ತಿದ್ದೇನೆ ಭೂತಕಾಲದಲ್ಲಿ,
ಹಳೆಯ ನೆನಪುಗಳ ಗೋರಿಗಳ ಆಳದಲ್ಲಿ,
ಅತ್ತಾಗ, ಹಟ ಮಾಡಿದಾಗ ಎತ್ತಿಕೊಂಡಾಗಿನ ಅಪ್ಪುಗೆಯ ಬಿಸಿ;
ಎಡವಿ ಬಿದ್ದು, ಗಾಯ ಮಾಡಿಕೊಂಡಾಗ ಸಂತೈಸಿದ ಆ ದನಿ,
ತುಟಿಗಳ ಮೇಲಿಂದ ಇನ್ನೂ ಆರಿರದ ಆ ಎದೆಹಾಲಿನ ತೇವ;
ಹೆಗಲ ಮೇಲೇ ನಿದ್ದೆ ಹೋದಾಗ ಸುರಿಸಿದ ಜೊಲ್ಲು,
ಎಲ್ಲ ಮಂಪರು, ಎಲ್ಲ ಮಸುಕು,ಮಸುಕು,
ಅಸ್ಪಷ್ಟ!

ಇಲ್ಲ, ನಾನು ಬೆಳೆದಿದ್ದೇನೆ,
ಈಗ ಮುಟ್ಟಿದರೆ ಕೊಸರಿಕೊಳ್ಳುತ್ತೇನೆ,
ನಾಚುತ್ತೇನೆ;
ಪ್ರೀತಿಯಿಂದ ಕರೆದರೆ ಗದರುತ್ತೇನೆ..

ಕೆಲವೊಮ್ಮೆ ಸೆಳೆಯುತ್ತದೆ;
ಯಾವುದೋ ದುಃಖದ ಕ್ಷಣಗಳಲ್ಲಿ,
ಯಾವುದೋ ಪರೀಕ್ಷೆಯಲ್ಲಿ ಸೋತಾಗ,
ಆ ಸಂತೈಸುವಿಕೆಗೆ ಕಾದಿರುತ್ತೇನೆ;
ಆದರೆ ಅದು ಸಿಗುವುದಿಲ್ಲ!
ಆಗ,
ಚಿಕ್ಕವನಾಗಿದ್ದಂತೆ ಅಳಲು ಯತ್ನಿಸುತ್ತೇನೆ;
ಹಟ ಮಾಡಲು ಪ್ರಯತ್ನಿಸುತ್ತೇನೆ,
ಯಾವ ಸಂತೈಸುವಿಕೆಯ ದನಿಯೂ ಕೇಳುವುದಿಲ್ಲ..
 ನನಗೆ ಅದು ಬೇಕು,
ಆದರೆ ಅದು ಸಿಗುವುದಿಲ್ಲ.

ಯಾಕೆಂದರೆ ನಾನು ದೊಡ್ಡವನಾಗಿದ್ದೇನೆ!

ನನಗೊಬ್ಬಳು ಪುಟ್ಟ ತಂಗಿಯಿದ್ದರೆ...

ನನಗೊಬ್ಬಳು ಪುಟ್ಟ ತಂಗಿಯಿದ್ದರೆ?
ಅವಳು ಇನ್ನೂ ಚಿಕ್ಕ ಕೂಸುಮರಿಯಾಗಿದ್ದರೆ?
ಪುಟ ಪುಟನೆ ನಡೆವಾಗ ಕೂತು ನೋಡುತ್ತಿದ್ದೆ,
"ಅಣ್ಣಾ, ಅದೆಂತದ್ದು? ಅಣ್ಣಾ, ಇದೆಂತದ್ದು?" ಪ್ರಶ್ನೆಗಳ ಧಾಳಿಯನ್ನು,
 ಖುಷಿಯಿಂದಲೇ ಎದುರಿಸುತ್ತಿದ್ದೆ.
ನನ್ನ ಕಿರುಬೆರಳ, ತನ್ನ ಮುಷ್ಟಿಯಲ್ಲಿ,
ಬಿಟ್ಟರೆ ಎಲ್ಲಿ ಪ್ರಪಂಚವೇ ಮುಳುಗುತ್ತದೋ ಎಂಬಂತೆ ಗಟ್ಟಿಯಾಗಿ
ಹಿಡಕೊಂಡು ನಡೆವಾಗ, ಆ ಧಾವಂತವೇ ಚಂದ,
ಕತೆ ಹೇಳೆಂದು ಪೀಡಿಸಿ, ಮುಗಿಸುವ ಮುನ್ನವೇ ನಿದ್ರೆಗೆ ಜಾರುವ ಆ ಮುಗ್ಧ ಮುಖ;
"ಅಣ್ಣಾ, ನಾನು ನಿನ್ನಷ್ಟುದ್ದ ಎಂದು ಬೆಳೆದೇನು?" ಎಂದು ಕೇಳಿದಾಗಿನ ಆ ಮೋರೆ,
"ಅಮ್ಮಾ, ಅಣ್ಣ ಹೀಗಂದ, ಅಮ್ಮಾ, ಅಣ್ಣ ಹಾಗೆ ಮಾಡಿದ"
ಮಾತಿನ ಧಾರೆಯಲ್ಲಿ ಹಾಗೇ ನೆನೆಯಬೇಕು;
ಜಗಳವಾಡಿದಾಗಲೆಲ್ಲಾ ಊದಿಸಿಕೊಂಡ ಕೋಪದ ಆ ಮುಖ ಹೇಗಿರುತ್ತಿತ್ತು?
ಅಮ್ಮ ಹೊಡೆದರೆ, ಕೈಯೊಳಗೆ ಮುಖ ಮುಚ್ಚಿಕೊಂಡು ಅಳುವಾಗ,
ನಡುವೆ ಎರಡು ಬೆರಳುಗಳ ನಡುವಿನ ಬಿರುಕಿನಿಂದ,
"ಅಣ್ಣ ಬಂದು ಸಮಾಧಾನ ಮಾಡ್ತಾನಾ?" ಎಂಬ ಕಾತರ,
ಹೊಸ ಪ್ರಪಂಚವೊಂದರತ್ತ ಕರೆದೊಯ್ಯುವುದು;
ಛೇ!!
ನನಗೊಬ್ಬಳು ಪುಟ್ಟ ತಂಗಿಯಿರಬೇಕಿತ್ತು!!
ಕನಸಿನಲ್ಲೂ, ಅವಳ ಗೆಜ್ಜೆಯ ನಾದ;
ಹೃದಯದೊಳಗೆಲ್ಲೋ ಅನುರುಣಿಸುತ್ತಾ ಇದೆ...

Friday, December 10, 2010

ಹೀಂಗೆ ಒಂದು ರಜೆಯ ದಿನ... (ಹವ್ಯಕ ಭಾಷೆಯ ಬರಹ)

                                                     ಹೀಂಗೆ ಒಂದು ರಜೆಯ ದಿನ...                                                                     ಹೀಂಗೆ ಒಂದು ರಜೆಯ ದಿನ ಉದಿಯಪ್ಪಗ ಎಲ್ಲಾ ಫ಼್ರೆಂಡ್ಸ್ ಗಳ ಒಟ್ಟಿಂಗೆ ತಿಂಡಿ ತಿಂದುಗೊಂಡಿಪ್ಪಗ, ಒಬ್ಬನ ತಲೇಲಿ ಕೆಟ್ಟ ಆಲೋಚನೆ ಬಂತು; 'ಹೇ,ನಾವೆಲ್ಲಾ ಎಲ್ಲಿಗಾದರು ಪಿಕ್ ನಿಕ್ ಹೋಪನಾ' ಹೇಳಿ! ಪ್ಲೇಟಿಲ್ಲಿತ್ತ ವಡೆಲಿಪ್ಪ ಮೆಣಸಿನ ತಿಂಬದಾ ಬಿಡುದಾ ಹೇಳಿ ಗಂಭೀರವಾಗಿ ಚಿಂತಿಸಿಗೊಂಡಿತ್ತ ಆನು, ಇವಂಗೆ ಈ ಹೋಟ್ಲಿನ ತಿಂಡಿ ತಿಂದ ಕಾರಣ ಹೆಚ್ಚೂ ಕಡಮ್ಮೆ ಆಯಿದು ಹೇಳಿ ಗ್ರೇಶಿದೆ,ಅಲ್ಲದೆ ಮತ್ತೆಂತ? ರಜೆ ದಿನ ಸುಮ್ಮನೆ ಕಾಲು ಕುತ್ತ ಮಾಡಿ ಹಾಸಿಗೆಲಿ ಮನುಕ್ಕೊಂಡು ಟಿ.ವಿ. ನೋಡಿಗೊಂಡು ಕಳೆವ ಅಮೂಲ್ಯ ಸಮಯವ ಹಾಳು ಮಾಡುದಾ? ಅದೇ ಸಮಯಕ್ಕೆ ಸರಿಯಾಗಿ ಇನ್ನೊಬ್ಬಂದೇ ರಾಗ ಎಳೆದ 'ಅಪ್ಪು ಮಾರಾಯ,ಈ ಜೀವನವೇ ಬೇಡ ಹೇಳಿ ಕಾಣುತ್ತು. ಅದೇ ಕೆಲಸ,ಅದೇ ಶಿಫ್ಟ್, ಅದೇ ಜನ' ಹೇಳಿ; ಸನ್ನಿ ಹಿಡಿದವರಾಂಗೆ ಎಲ್ಲರೂ 'ಅಪ್ಪು,ಅಪ್ಪು' ಹೇಳಿ ಬೊಬ್ಬೆ ಹೊಡವಲೆ ಶುರು ಮಾಡಿದವು. ತನ್ನ ಹೋಟ್ಲಿನ ತಿಂಡಿಯ ಯಾವತ್ತಿಂಗೂ ರುಚಿ ನೋಡದ್ದ ಮತ್ತು ಆ ಕಾರಣಕ್ಕೇ ಆರೋಗ್ಯವಾಗಿದ್ದ ಹೋಟ್ಲಿನ ಓನರ್ ಬಂದು 'ಬೇರೆಂತಾದರು ಬೇಕಾ?' ಹೇಳಿ ಕೇಳಿತ್ತು; ಇದರ ಕರ್ಮ! ಇದು ಕೊಟ್ಟದ್ದನ್ನೇ ಮುಗುಶುಲೆ ಎಡಿಯದ್ದೆ, ಅದರ ಪರಿಣಾಮ ಪಿಕ್ ನಿಕ್ ಹೇಳಿ,ತಲೇಲಿ ಹುಳು ಬಿಟ್ಟ ಕಾರಣ, ಎನ್ನ ಸುಖವಾದ ರಜೆ ನಾಶವಾಗಿ ಹೋಪ ಸ್ಥಿತಿಲಿತ್ತು. ಆನು 'ಎಂಥ ಬೇಡ' ಹೇಳುಲೆ ಬಾಯ್ಯಿ ತೆಗವ ಮೊದಲೇ ಈ ಮಂಗಂಗೊ ಆರ್ಡರ್ ಮಾಡ್ಲೆ ಸುರು ಮಾಡಿದವು.. ಹಾಂಗಾರೆ ಇಂದು ರಜೆ ಸರ್ವನಾಶ ಆತು ಹೇಳಿ ಎನಗೆ ಗಟ್ಟಿಯಾತು.
'ಸರಿ,ಎಲ್ಲಿಗೆ ಹೋಪ?' ಕೇಳಿದೆ; ಹೋಪ ಹೇಳಿ ಸುರು ಮಾಡಿದ ಮನುಷ್ಯ ಇನ್ನು ಎನಗೂ ಈ ವಿಷಯಕ್ಕೂ ಸಂಬಂಧವೇ ಇಲ್ಲೆ ಹೇಳುವಾಂಗೆ ತಿಂದುಗೊಂಡಿತ್ತು. ಹತ್ತರೆ ಯಾವುದಾದರು ಜಾಗೆ ಇದ್ದ ಹೇಳಿ ಯೋಚಿಸಿದೆ. ಬೇಗ ಹೋಗಿ, ಬೇಗ ಬಂದರೆ ಲಾಯ್ಖಲ್ಲಿ ರೂಮಿಲ್ಲಿ ಬಿದ್ದುಗೊಂಬಲಕ್ಕಲ್ದ ಹೇಳಿ; ಹತ್ತರೆ ಮಧೂರಿಂಗೆ ಹೋಪ ಹೇಳಿದ ಒಬ್ಬ. ಇವನ ತಲೆ! ಇಲ್ಲಿಂದ ೫೦-೬೦ ಕಿಲೋ ಮೀಟರ್ ಹೋಗಿ ಬಪ್ಪದ ಸೊಂಟದ ಕಥೆ ಎಂತ ಅಕ್ಕು, ಅವನ ಬೈಯೆಕ್ಕು ಹೇಳಿ ಬಾಯಿ ತೆಗವಗ ಮತ್ತೊಬ್ಬ 'ಕನ್ಯಾಕುಮಾರಿ' ಹೇಳಿದ; ಎನಗೆ ಕಾಲಡಿಂದ ಉರಿ ತಲೆಗೆ ಹತ್ತಿತ್ತು. 'ಅಲ್ಲ ಮಾರಾಯ,ನಿನಗೆ ತಲೆ ಸರಿ ಇದ್ದ? ಇಪ್ಪದು ಒಂದು ದಿನ ರಜೆ. ಈಗಲೇ ಗಂಟೆ ೯ ಆತು, ಹನುಮಂತನಾಂಗೆ ಹಾರಿಗೊಂಡು ಹೋದರೂ ಅಲ್ಲಿಗೆ ಮುಟ್ಟುಲೆಡಿಗಾ? ನಾಳೆ ಡ್ಯ್ಯೂಟಿ ಮಾಡ್ಲೆ ನಿನ್ನ ಅಪ್ಪನ ಕರ್ಕೊಂಡು ಬತ್ತೆಯಾ?' ಹೇಳಿ ಬೈದೆ. 'ರಜೆ ಮಾಡಿಗೊಂಡು ಹೋಪ' ಹೇಳಿದ ಅವ. ಆ ಬುದ್ದಿವಂತನ ತಲೆಗೆ ಬಡುದು,' ಇನ್ನಾರೂ ಸಲಹೆ ಕೊಡೆಡಿ, ಸೀದಾ ಪಿಲಿಕುಳಕ್ಕೆ ಹೋಪ,ಅಲ್ಲಿ ಬೋಟಿಂಗ್ ಎಲ್ಲಾ ಇದ್ದಡ,ಹಾಂಗೆ ಇಂದು ರಜೆ ಅಲ್ಲದ, ಕೂಸುಗಳೂ ಇಕ್ಕು' ಹೇಳಿದೆ. ಆ ಕೊನೇ ಮಾತಿಂಗೆ ಅಪೀಲೇ ಇಲ್ಲೆ..ಎಲ್ಲರ ಕೆಮಿ ಕುತ್ತ ಆಗಿ, 'ಹೋಪ, ಹೋಪ' ಹೇಳಿ ಬೇಗ ಬೇಗ ತಿಂದು ಮುಗುಶಿದವು. ಬಿಲ್ ಕೊಡುವಾಗ ಮಾತ್ರ ,ಬದುಕ್ಕುದು ಎಷ್ಟು ಖರ್ಚಿನ ಕೆಲಸ ಅಲ್ಲದ ಹೇಳಿ ಬೇಜಾರಾತು!
ಸರಿ, ಹೇರಡುವ ಪ್ರೋಗ್ರಾಮ್ ಸುರು ಆತು. ಮೀವಂತಹ ಪುಣ್ಯ ಕಾರ್ಯ ಮತ್ತೆ ಬಂದಿಕ್ಕಿ ಮಾಡುವ ಹೇಳಿ ಸೆಂಟ್ ಹಾಕಿಗೊಂಡು, ಎಂಗಳ ಮೂಗಿನ ತಾಕತ್ತು ಪರೀಕ್ಷಿಸುವ ಕೆಲಸವೂ ಆತು, ದಾರಿಯಿಡೀ ಧೂಳು ಎಂತಕೆ ಸುಮ್ಮನೆ ಹೇಳಿ ಕೆಲವು ಜನ ಮೋರೆ ತೊಳವ ಪಾಪ ಕಾರ್ಯವೂ ಮಾಡಿದ್ದವಿಲ್ಲೆ. ಹಾಂಗೂ ಹೀಂಗೂ ಇವರ ಹೆರಡಾಣ ಮುಗಿವಗ ಹೊತ್ತು ಸುಮಾರಾಗಿತ್ತು. ಆದರೆ ಎಲ್ಲರೂ ಮಾನಿಯಂಗಳೇ ಆದ ಕಾರಣ ನಮ್ಮ ಹೆಮ್ಮಕ್ಕಳ ರೇಂಜಿಂಗೆ ಬೈಂದಿಲ್ಲೆ! ಬಸ್ಸಿಲ್ಲಿ ಆರಾಮಲ್ಲಿ ಹೋಗಿ ಬಪ್ಪ ಹೇಳಿ (ಒರಗುಲಕ್ಕಲ್ಲದ ಬಸ್ಸಿಲ್ಲಿ) ಆನು ಹೇಳುಲೆ ಹೆರಡುವಾಗ, ಹೇಳಿದ ಒಬ್ಬ ಸುಂದರಾಂಗ, 'ಯೇ, ನಾವು ಬೈಕಿಲ್ಲಿ ಹೋಪನ? ಆರಾರು ಚೆಂದದ ಕೂಸುಗೊ ಸಿಕ್ಕಿರೆ ನಮ್ಮ ನೊಡುಗು' ಹೇಳಿ; ಅವನ ಮೂಲೆಗೆ ಕರ್ಕೊಂಡು ಹೋಗಿ ಸರ್‍ಈ ಬಡಿಯೆಕ್ಕು ಹೇಳಿ ಆದರೂ ತಡಕ್ಕೊಂಡು, 'ಮಾರಾಯ, ನೀನು ಹೆಲ್ಮೆಟ್ ಹಾಕಿದ ಮೇಲೆ ನಿನ್ನ ಮೋರೆ ನೋಡಿದರೂ ಒಂದೇ, ನೋಡದ್ರೂ ಒಂದೇ; ಮತ್ತೆ ಈ ಧೂಳಿಲ್ಲಿ ನೀನು ಬೂದಿ ಮೆತ್ತಿದ ನಾಯಿ ಹಾಂಗೆ ಕಾಂಬೆ. ಬೇಕಾ ಅದು?' ಹೇಳಿ ನೋಡಿದೆ. ಎಂಗಯ್ಳ ಗ್ರೂಪಿಲ್ಲಿ ಒಬ್ಬಂಗೆ ಎಂಥಾದರು ಆಲೋಚನೆ ಬಂದರೆ, ಅದು ಸರಿಯೋ ತಪ್ಪೋ ನೋಡದ್ದೆ ಎಲ್ಲಾರೂ ಅದರ ಅನುಸರುಸುದು ಮಾಮಲಾದ ಕಾರಣ, ಎಂಗೊ ಲಾಸ್ಟಿಂಗೆ ಬೈಕ್ಕಿಲ್ಲೆ ಹೋದೆಯೊ.
 ಆ ಸುರತ್ಕಲ್ಲಿಂದ ಮಂಗಳೂರಿಂಗೆ ಹೋಪಗಾಣ ಕಥೆ ಹೇಳಿ ಪ್ರಯೋಜನ ಇಲ್ಲೆ; ಬೈಕ್ಕಿನ ತಳ್ಳಿಗೊಂಡು ಹೋಪಾಂಗಿಪ್ಪ ಟ್ರಾಫಿಕ್; ದಾರಿ ಎಲ್ಲಿ,ಜನಂಗೊ ಹೋಪದು ಹೇಳಿ ಗೊಂತಾಗದ್ದ ರೋಡ್; ಓವರ್ ಟೇಕ್ ಮಾಡ್ರೆ ಗುದ್ದುತ್ತೆ ಹೇಳುವ ಬಸ್, ಲಾರಿಗೊ; ಧೂಳು..ಶಿವ,ಶಿವ ಎಂತಗಾದರೂ ಬೈಕ್ಕಿಲ್ಲಿ ಹೆರಟೆಯೊ ಹೇಳಿ ಆತು. ಹಾಂಗೂ ಹೀಂಗೂ ಸೊಂಟ ಬೇನೆ ಬರಿಸಿಗೊಂಡು ಪಿಲಿಕುಳ ಮುಟ್ಟಿದೆಯೊ.
ಫಸ್ಟಿಂಗೆ ಅಲ್ಲಿಪ್ಪ ಪ್ರಾಣಿ,ಪಕ್ಷಿಗಳ ನೋಡುವ ಹೇಳಿ ನೋಡುವಾಗ ಒಬ್ಬ, 'ಎಂಥ ಇದ್ದ ಇಲ್ಲಿ? ನಾಲ್ಕು ಕುರೆ ಪ್ರಾಣಿಗೊ,ಚಿರಿ ಚಿರಿ ಪಕ್ಷಿಗೊ..ನಾವು ಪಾರ್ಕಿಂಗೆ ಹೋಪ' ಹೇಳಿದ. 'ಈಗ ಆರೂ ಅಲ್ಲಿ ಇರ್ತವಿಲ್ಲೆ,ಕೂಸುಗೊಕ್ಕೆ ಪ್ರಾಣಿ,ಪಕ್ಷಿಗೊ ಹೇಳಿರೆ ಇಷ್ಟ ಅಲ್ಲದ.ಹಾಂಗೆ ಎಲ್ಲ ಇಲ್ಲೇ ಇಕ್ಕು' ಹೇಳಿ ಅವನ ಮಂಕಾಡಿಸಿ ಒಳಾಂಗೆ ಕರ್ಕೊಂಡು ಹೋದೆ, ಒಳ ಯಾವ ಕಡೆಂದ ನೋಡ್ಲೆ ಸುರು ಮಾಡುದು ಹೇಳಿ ಗೊಂತಾಗದ್ದೆ, ಮಂಗಂಗಳ ಹಾಂಗೆ ಅತ್ಲಾಗಿ ಇತ್ಲಾಗಿ ನೋಡುವಾಗ, ಇವ ಒಬ್ಬ ' ಹೇ, ನೋಡ ಅಲ್ಲಿ ಜೋಡಿ ಹಕ್ಕಿ' ಹೇಳಿ ಎನನ ಚೂಂಟಿದ, ಅವ ಹೇಳಿದ ಕಡೆ ಎಷ್ಟು ನೋಡಿರೂ ಒಂದು ಕಾಕೆಯೂ ಕಾಣದ್ದೆ, ಅವನ ತಲೆಗೆ ಬಡುದು ,'ಎಲ್ಲಿಯಾ?' ಹೇಳಿ ಕೇಳಿದರೆ 'ಅಲ್ಲಿ...' ಹೇಳಿ ಕೈ ತೋರ್ಸಿದ..ಅವ ಹೇಳಿದ ಕಡೆ ಒಂದು ಕೂಸೂ,ಮಾಣಿಯೂ ಇತ್ತವು. ಇವನ ಅಜ್ಜಿ! ಹೇಳಿ ಬೈಕೊಂಡು,ಅವನ ಎಳಕೊಂಡು ಹಾಂಗೆ ಇಡೀ ಜಾಗೆ ಸುತ್ತಿದೆಯೊ.. ಯಾವ ಯಾವುದೋ ಹೆಸರಿನ ಪಕ್ಷಿಗೊ,ನರಿ,ಹುಲಿ,ಆನೆ,ಚಿರತೆ ಎಲ್ಲಾ ಇತ್ತು; ಹುಲಿಯ ನೋಡಿ ಒಬ್ಬ,'ಎನಗೆ ಹುಲಿಯೊಟ್ಟಿಂಗೆ ಫೋಟೊ ತೆಗೆಯೆಕ್ಕು' ಹೇಳಿ ಹೇಳಿದ..ಅದಕ್ಕೆ ಮತ್ತೊಬ್ಬ ' ಫೋಟೊ ಏಲ್ಲಾ ತೆಗವಲಕ್ಕು, ಆದರೆ ಆಮೇಲೆ ನಿನ್ನ ಅದೇ ಫೋಟೊಕ್ಕೆ ಫ಼್ರೇಮ್ ಹಾಕಿ ಮನೇಲಿ ನೇತಾಡ್ಸುಲಕ್ಕು' ಹೇಳಿದ.. ಎಂಗಳ ಮುಖ್ಯ ಕಾರ್ಯಕ್ರಮವಾದ ಕೂಸು ವೀಕ್ಷಣೆ ಅಲ್ಲಿ ನಡದ್ದೇ ಇಲ್ಲೆ. ಸುಮ್ಮನೆ ಅಲ್ಲಿಂದ ಹೆರ ಬಪ್ಪಗ ಪಾಪದ ಮಕ್ಕೊಗೆ ಹಶು ಅಪ್ಪಲೆ ಶುರುವಾತು!
  ಅಲ್ಲಿ ಇಲ್ಲಿ ವಿಚಾರಿಸಿದಪ್ಪಗ ,ಬೋಟಿಂಗ್ ಇಪ್ಪ ಜಾಗೆ ಹತ್ರೆ ಒಂದು ರೆಸ್ಟೋರೆಂಟ್ ಇದ್ದು ಹೇಳಿ ಗೊಂತಾತು,ಅಲ್ಲಿಗೆ ಹೇಂಗೊ ಹೋಗಿ,'ಎಂತರ ತಿಂಬದಪ್ಪ' ಹೇಳಿ ಗಂಭೀರವಾಗಿ ಚರ್ಚೆ ಮಾಡುವಾಗ, ಸಪ್ಲಯರ್ ಬಂದು ಒಂದೂವರೆ ಕಿಲೋ ಮೀಟರ್ ಉದ್ದದ ಮೆನು ಕಾರ್ಡ್ ಕೊಟ್ಟಿಕ್ಕಿ ಹೋತು. ಅದರಲ್ಲಿಪ್ಪ ಐಟಮ್ ಓದುತ್ತಾ ಹೋದಾಂಗೆ ಬಾಯಿಲ್ಲಿ ಮಳೆ ಬಪ್ಪಲೆ ಶುರು ಆತು; ಆನೊಂದು ವೆಜ್ ಬಿರಿಯಾನಿ ಆರ್ಡರ್ ಮಾಡಿದೆ..ಫ಼್ರೆಂಡುಗೊ ಆರ್ಡರ್ ಮಾಡುವ ಕೆಲಸ ಮತ್ತೆ ಕಾಲು ಗಂಟೆ ನಡತ್ತು,ಬೇಗ ಹೇಳಿದ ಕಾರಣ ಎನಗೆ ಬೇಗ ಬಂತು.. ಒಂದು ಚೂರು ತೆಗದು ಬಾಯಿಗೆ ಮಡುಗಿದನೋ ಇಲ್ಲೆಯೋ ಎನಗೆ ದೇವರ ಮೇಲೆ ನಂಬಿಕೆಯೇ ಹೋತು! ಅದರ ಖಾರಕ್ಕೆ ಎನ್ನ ಮೆದುಳು ತಲೆಂದ ಆಚೆ ಬಂದು ಡ್ಯಾನ್ಸ್ ಮಾಡ್ಲೆ ಶುರು ಮಾಡಿತ್ತು, ಕಣ್ಣು,ಮೂಗಿಲ್ಲೆಲ್ಲ ಪ್ರವಾಹ; 'ಎಂಥದಾ ತೊಂದರೆ ಇಲ್ಲೆ,ಎಂಗೊಗೂ ಈಗ ಬತ್ತು ಊಟ.ಎಂಗಳ ಬಿಟ್ಟಿಕ್ಕಿ ತಿಂಬದು ಹೇಳಿ ನೀನು ಕೂಗುದು ಬೇಡ' ಹೇಳಿದ ಒಬ್ಬ. 'ಇಲ್ಲೆಯಾ, ಅವಂಗೆ ಜೋರು ಹಶು ಆಗಿತ್ತು..ಊಟ ಬಂತು ಹೇಳಿ ಪಾಪ ಖುಷಿ' ಮತ್ತೊಬ್ಬನ ಕಮೆಂಟ್. ಆನು ಚಂದ್ರಲೋಕಕ್ಕೆ ಹೋಗಿ ವಾಪಾಸ್ ಬತ್ತಾ ಇದ್ದ ಕಾರಣ ಎಂತ ಹೇಳುವ ಸ್ಥಿತಿಲಿ ಇತ್ತಿಲ್ಲೆ! ಆ ಹೋಟ್ಲಿನವಂಗೆ ಎಂಥ ದ್ವೇಷ ಇತ್ತೊ ಎಂಗಳ ಮೇಲೆ; ಅವನನ್ನೂ, ಅವನ ವಂಶವನ್ನೂ ಬೈಕೊಂಡು ಹೇಂಗೊ ಅಲ್ಲಿಂದ ಬದುಕಿ ಹೆರ ಬಂದೆಯೊ.
  ಪಾರ್ಕಿನ ಒಳ ಹೋಪ ಮೊದಲು ಎಂಗಳ ಸೊಟ್ಟ ಪಟ್ಟ ಮೋರೆಯ ಸರಿ ಮಾಡಿಗೊಂಡೆಯೊ.. ಒಬ್ಬರನೊಬ್ಬರು ನೋಡಿಗೊಳ್ಳುತ್ತಾ, ಅವಂಗಿಂತ ಆನೇ ಚಂದ ಹೇಳಿ ಮನಸಿಲ್ಲೇ ಹೆಮ್ಮೆ ಪಟ್ಟುಗೊಳ್ಳುತ್ತಾ ಒಳ ಹೋದರೆ... ಒಂದೇ ಒಂದು ಕೂಸುಗೊ ಇಲ್ಲೆ! ಇದ್ದ ನಾಲ್ಕಾರುದೇ ಎಂಗೇಜ್ಡ್; ಆತಲ್ದ.. ಎಂಗಳ ದುರದೃಷ್ಟವ ಬೈಕ್ಕೊಳ್ತಾ ಆ ಜೋಡಿಗಳ ಎದುರು ಕ್ಯಾಟ್ ವಾಕ್ ಮಾಡಿರೂ,ಅವು ಈ ಹುಲುಮನುಷ್ಯರ ಕಡೆ ತಿರುಗಿ ಕೂಡ ನೋಡಿದ್ದವಿಲ್ಲೆ, 'ಹಾಳಾಗಿ ಹೋಗಲಿ' ಹೇಳಿ ಬೋಟಿಂಗ್ ನ ಕಡೆ ಹೋದೆಯೊ; ' ಇಬ್ಬರಿಂಗೆ ಒಂದು ಬೋಟ್, ಪೆಡಲ್ ತೊಳ್ಕೊಂಡು ಬೇಕು,ಲೈಫ಼್ ಜಾಕೆಟ್ ಹಾಕೆಕ್ಕು, ಆಚ ಕಡೆ ರೆಸ್ಟ್ರಿಕ್ಡೆಡ್ ಏರಿಯ ಹೋಪಲಾಗ' ಹೇಳಿ ಎಲ್ಲಾ ಕೇಳುವಾಗ ಹೋಪದು ಬೇಕಾ ಹೇಳಿ ಎನಗೆ ಹೆದರಿಕೆ ಆತು. ಆದರೆ ತೋರ್ಸಿಗೊಂಬಲೆಡಿಗಾ? ಆತು, ಹತ್ತಿ ಕೂದೆ; ಇನ್ನೊಬ್ಬ ಶತ್ರುದೆ ಹತ್ತಿ ಕೂದ! ಒಂಚೂರು ದೂರ ಹೋಗಿ,ಖುಷೀಲಿ ಅತ್ಲಾಗಿ ಇತ್ಲಾಗಿ ನೋಡುತ್ತಾ ಇಪ್ಪಗ ಅವ ಎನ್ನ ಹತ್ತರೆ ' ಇಲ್ಲೇ ಅಲ್ಲದ ಅಂದು ನಾಲ್ಕು ಜನ ಸತ್ತದು' ಹೇಳಿ ಕೇಳಿದ. ಎನ್ನ ಕಥೆಯೋ ದೇವರಿಂಗೇ ಪ್ರೀತಿ! ಬೇಗ ದಡ ಸೇರುವ ಹೇಳಿ ಆನು ಪೆಡಲ್ ತುಳುದೆ. ಅವ ಡೈರೆಕ್ಷನ್ ಚೇಂಜ್ ಮಾಡಿ, ನಡೂಕಂಗೆ ಕರ್ಕೊಂಡು ಹೋದ. ಆನು ಸೀರಿಯಸ್ಸಾಗಿ ಕೇಳಿದೆ ' ಮಾರಾಯ ನಿನಗೆ ಎನ್ನ ಕಂಡರೆ ದ್ವೇಷವಾ? ಆನು ನಿನಗೆ ಎಂಥ ಅಪಕಾರ ಮಾಡಿದ್ದೆ?'. ನೆಗೆ ಮಾಡಿದ, ಪಾಪಿ! ಹಾಂಗೂ ಹೀಂಗೂ ದಡ ಮುಟ್ಟಿದಪ್ಪಗ ಪುನಹ ಬದುಕಿ ಬಂದಾಗಾತು. ಇಡೀ ಪಾರ್ಕಿಂಗೆ ನಾಲ್ಕು ಸುತ್ತು ಹಾಕಿದರೂ ಎಂಥದ್ದೂ ಆಯಿದಿಲ್ಲೆ.. ಕೂಸುಗಳ ವಂಶವ ಬೈಕೊಂಡು 'ಬಂದ ದಾರಿಗೆ ಟ್ಯಾಕ್ಸ್ ಇಲ್ಲೆ' ಹೇಳಿ ವಾಪಾಸ್ ಬಂದೆಯೊ..
ರೋಡಿನ ಧೂಳು ತಿಂದುಗೊಂಡು ರೂಮಿಂಗೆ ಮುಟ್ಟುವಗ ಹೊತ್ತೊಪ್ಪಗ ಆಗಿತ್ತು, ಐಡಿಯ ಕೊಟ್ಟವನ ಮನಪೂರ್ತಿಯಾಗಿ ಬೈದೆಯೊ..ಅದೇ ರೂಮ್ ಬಂದೀರಾ ಮಕ್ಕಳೇ ಹೇಳಿ ವೆಲ್ ಕಮ್ ಮಾಡಿತ್ತು..
ಮರುದಿನಾಣ ಡ್ಯೂಟಿ ಗ್ರೇಶಿ ತಲೆ ಹಪ್ಪಳ ಆತು.ಇನ್ನು ಗೋಣನ ಹಾಂಗೆ ಮನುಗುಲೆ ಒಂದು ವಾರ ಕಾಯೆಕ್ಕಲ್ಲ ಹೇಳುದು ಗ್ರೇಶಿ ,ಎನಗಂತೂ ಕೂಗುಲೇ ಬಂತು!!!

ಭಯದ ಮೂಲ ಕತ್ತಲಲ್ಲ...




                                     ಚಿಕ್ಕವನಿದ್ದಾಗ, ಕತ್ತಲೆಂದರೆ ಏನೋ ಹೆದರಿಕೆ;
                                         ಆ ಅಂಧಕಾರದಿಂದ ರಾಕ್ಷಸನೊಬ್ಬ ಟಣ್ಣನೆ ಜಿಗಿದು,
                                          ಯಾವ ಮಾಯದಲ್ಲೋ ನನ್ನ ಹೊತ್ತೊಯ್ದರೆ?
                              ಆಮೇಲೆ, ದೊಡ್ಡವನಾದಂತೆ ರಾಕ್ಷಸನ ರೂಪವೆಲ್ಲಾ ಬದಲಾಗುತ್ತಾ ಬಂತು,
              ಏನೋ ತಂಟೆ ಮಾಡಿದ್ದಕ್ಕೆ ಅಜ್ಜಿ ಬೈಯ್ದಾಗ, ಅರೆ! ಆ ರಾಕ್ಷಸ ಇವರೇ ಅಲ್ಲವಾ? ಎಂದೆನಿಸುತ್ತಿತ್ತು;
         ಶಾಲೆಯಲ್ಲಿ ಮಾಸ್ಟ್ರು ಯಾಕೋ ಹೊಡೆದಾಗ,ದಿಡೀರ್ ಎಂಬಂತೆ ಅವರ ರೂಪದಲ್ಲಿ ರಾಕ್ಷಸ ನೆಗೆದು ಬರುತ್ತಿದ್ದ,

                ಮತ್ತೂ ಬೆಳೆದಂತೆಲ್ಲಾ ರಾಕ್ಷಸ ಬರೋದು, ಮಕ್ಕಳನ್ನ ಹೊತ್ತೊಯ್ಯೊದು
                  ಎಲ್ಲಾ  ಸುಳ್ಳೆಂದು ತಿಳಿದ ಬಳಿಕವೂ,
                       ನನ್ನೊಳಗಿನ ಯಾವುದೋ ಕೀಳರಿಮೆ ಅಗಾಧವಾಗಿ ಬೆಳೆದು,
                      ರಾಕ್ಷಸನ ಇರುವಿಕೆಯ ಅರ್ಥಹೀನತೆ ಸುಳ್ಳೇ ಎನಿಸುತ್ತಿತ್ತು.
                            ಕೆಲವೊಮ್ಮೆ ರಾತ್ರಿಯ ಕನಸುಗಳಲ್ಲಿ, ಅದೇ ರಾಕ್ಷಸ ಬಾಲ್ಯದಲ್ಲಿದ್ದಂತೆ,
                             ಪುನಹ ಕತ್ತಲಿನಾಳದಿಂದೆಲ್ಲಿಂದಾದರೂ ಹಾರಿ ಬಂದರೆ,
                                ತಿವಿದರೆ, ಚಚ್ಚಿದರೆ?
                              ಇನ್ನೊಮ್ಮೆ ಆ ರಾಕ್ಷಸನಲ್ಲಿ ನನ್ನ ಮುಖ ಛಾಯೆ!
                        ನನ್ನೊಳಗೊಬ್ಬ ರಾಕ್ಷಸನಿದ್ದಾನೆ ಎಂದೆನಿಸಿ ಕನ್ನಡಿಯಲ್ಲಿ
                            ಮುಖ ನೋಡಲೂ ಭಯವಾಗುತ್ತಿತ್ತು!
                        ನನಗೆ ನಾನೇ ಒಬ್ಬ ರಾಕ್ಷಸ! ಎಂಥಾ ವಿಚಿತ್ರ ಎನಿಸುತ್ತಿದ್ದರೂ,
                       ನಿರಾಕರಿಸಲು ಮಾತ್ರ ಆಗುತ್ತಲೇ ಇರಲಿಲ್ಲ..

      ಈಗ,
                 ಯಾವುದೋ ಒಂದು ಮೈ ಮರೆತ ಗಳಿಗೆಯಲ್ಲಿ,
             ನನ್ನೊಳಗಿಂದ ಒಬ್ಬ ರಾಕ್ಷಸ, ಅದೇ ಬಾಲ್ಯಕಾಲದಂತೆ,
              ಕತ್ತಲಿನ ನಾಭಿಯಿಂದ, ನಿಧಾನವಾಗಿ ನಡೆಯುತ್ತಾ ಬಂದು,ನನಗೊಂದು
             ಸರ್ ಪ್ರೈಸ್ ವಿಸಿಟ್ ಕೊಡುವನೆಂಬ ಹೆದರಿಕೆ;
            ರಾತ್ರಿಗಳಲ್ಲಿ,ಕತ್ತಲಿನ ಮೂಲೆಗಳಲ್ಲಿ,
             ಆರಾಮವಾಗಿ ನಿದ್ರಿಸಲೂ ಬಿಡುತ್ತಿಲ್ಲ..

                  ಒಬ್ಬ ಸೂರ್ಯನ ಬೆಳಕು, ಒಂದು ದೀಪ, ಒಂದು ಟಾರ್ಚ್,
                    ಉಹೂಂ, ಕತ್ತಲೆಯನ್ನು ಓಡಿಸಲು ಹೇಗೆ ಸಾಧ್ಯ?
                   ಕತ್ತಲೆಯೊಳಗಿರುವ ರಾಕ್ಷಸನನ್ನೂ!
                      ಭಯದ ಮೂಲ ನಿಜವಾಗಿಯೂ ಕತ್ತಲೆ? ಆಗಿರಲಿಕ್ಕಿಲ್ಲ..
                      ಕತ್ತಲೆಯೊಳಗಿನ ರಾಕ್ಷಸನೇ? ಉಹೂಂ ಅಲ್ಲ,
                    ಮತ್ತೆ?

Wednesday, December 8, 2010

ಚಿಕ್ಕವನಿದ್ದಾಗ ಒಂದು ಕನಸಿತ್ತು, ಹೀಗೆ ಮನಸಿನ ಲಹರಿಗೆ ಬಂದದ್ದು ಬರೆಯುತ್ತಾ ಹೋಗಬೇಕು; ಯಾವತ್ತಾದರು ಯಾರಾದರು ಅದನ್ನ ಓದಿ ಚೆನ್ನಾಗಿದೆ ಅಂತ ಬೆನ್ನು ತಟ್ಟಬೇಕು ಅಂತ ,ಮೊದಲ ಕನಸು ಈಗ ನನಸಾಗುತ್ತಿದೆ..ಮುಂದೆ... ನೋಡೋಣ!