Monday, January 17, 2011

ಮೊಗೆದಷ್ಟೂ ನೆನಪುಗಳು...


ಎಲ್ಲವೂ ಬದಲಾಗುತ್ತದೆ, ಹೈಸ್ಕೂಲ್ ಓದುತ್ತಿದ್ದ ದಿನಗಳಲ್ಲಿ, ಮನೆಯಲ್ಲಿ ನನಗೊಂದು ನನ್ನದೇ ಕೋಣೆಯಿತ್ತು; ಮಂಚವಿದ್ದ ಆ ಕೋಣೆಯನ್ನು ತಂಗಿಯ ಜೊತೆ ಜಗಳವಾಡಿ, ನಾ ಹೆಚ್ಚು ಅಂತ ತೋರಿಸಲು ತೆಗೆದುಕೊಂಡ ನಂತರ, ಎಲ್ಲೋ ಏನೋ ಕುಟುಕಿದರೂ, ಆಗೆಲ್ಲಾ ಅದು ಅಂಥದ್ದೇನೂ ಅನ್ನಿಸೋ ವಯಸ್ಸಾಗಿರಲಿಲ್ಲ. ಶಾಲೆಗೆ ರಜೆ ಇದ್ದ ದಿನಗಳಲ್ಲಿ, ಆ ಮಂಚದಲ್ಲಿ ಮಲಗಿ,ಮನೆಯ ಹಿಂದಿದ್ದ ಹಟ್ಟಿಯನ್ನು ನೋಡುತ್ತಾ, ಹಾಗೆ ಬಿದ್ದುಕೊಳ್ಳೋದು ಎಂಥಾ ಪರಮ ಸುಖ ಅಂಥ ಕಲ್ಪಿಸಿಕೊಳ್ಳುತ್ತಲಿದ್ದೆ! ಶಾಲೆಗೆ ಹೋಗೋವಾಗ ನಡೆಯುವ ದಾರಿಯ ಬೇಸರ ಕಳೆಯಲು ಪುಸ್ತಕ ಓದುತ್ತಾ ಹೋಗಿ ಎಡವಿ ಬಿದ್ದು, ಗಾಯ ಮಾಡಿಕೊಂಡು, ಅಮ್ಮನ ಬಳಿ ಸುಳ್ಳು ಹೇಳಿ, ’ಸಿ.ಐ.ಡಿ. ಅಮ್ಮ’ನ ಬಳಿ ಬೈಯಿಸಿಕೊಂಡದ್ದು ನೆನಪಿದೆ. ಆಗೆಲ್ಲಾ ಮುಂದೆ ದೊಡ್ಡವನಾದಾಗ, ಈ ದಾರಿಯಲ್ಲಿ ಸುಮ್ಮನೆ ನಡೆಯುತ್ತಾ ಬರೆಯಬೇಕು, ಹಳೆಯ ಕಿತಾಪತಿಗಳನ್ನೆಲ್ಲಾ ನೆನೆಸಿ ನಗಬೇಕು ಅಂಥೆಲ್ಲ ಕನಸು ಕಂಡಿದ್ದೆ; ಈಗ ದಾರಿ ಹಾಗೇ ಇದೆ, ಆದರೆ ಅದರಲ್ಲಿ ಖುಶಿಯಲ್ಲಿ ನಡೆಯುತ್ತಿದ್ದ ಆ ’ನಾನು’ ಎಲ್ಲೋ ಕಾಣೆಯಾಗಿದ್ದಾನೆ! ಅಮ್ಮ ಸುಟ್ಟ ಗೇರುಬೀಜದಲ್ಲಿನ ಸೋನೆಯ , ಈಗಿನ ಪ್ಯಾಕ್ಡ್ ಬೀಜಗಳಲ್ಲಿ ಹುಡುಕಿ ಸೋತಾಗ ಇದೆಲ್ಲ ನೆನಪಾಗುತ್ತದೆ.
ಆ ದಿನಗಳು ಚಂದವಿತ್ತು ಎಂದು ಈಗ ಆರಾಮವಾಗಿ ಹೇಳಿಬಿಡಬಹುದು, ಆದರೆ ಮಂಗಳೂರಿನಲ್ಲಿ ಕಲಿಯುತ್ತಿದ್ದ ದಿನಗಳಲ್ಲಿ, ಸಂಜೆ ೭ ರ ಸಿನೆಮಾಗೆ, ೨ ನೇ ಕ್ಲಾಸಿನ ಟಿಕೆಟ್ ತೆಗೆದುಕೊಂಡು, ಸಿನೆಮಾ ನೋಡಿ ರೂಮಿಗೆ ವಾಪಾಸ್ ಬರಲು ಬಸ್ ಇಲ್ಲದೆ, ಗೆಳೆಯರೊಂದಿಗೆ ಸ್ಟೇಟ್ ಬ್ಯಾಂಕ್ ನಿಂದ ನಡೆದು ಬರುವ ಸುಖದ ಗಳಿಗೆಗಳಲ್ಲೂ, ’ಹೀಗಾದರೆ ಮುಂದೇನು ಗತಿ?’ ಎಂಬ ಆತಂಕದ ಒತ್ತಡವೂ ಇತ್ತು; ಮುಂದೇನು? ಮುಂದೇನು? ಎಂಬ ಚಿಂತೆಯಿಂದ ನಾನು ಪೂರ್ತಿಯ್ಯಾಗಿ ಅನುಭವಿಸಲಾಗದ ,ಕಳೆದ ಖುಶಿಯ ಕ್ಷಣಗಳ ನೆನೆದು, ಬೇಜಾರಾಗುತ್ತದೆ. ಕಂಪನಿ ಸಿಗಲಿಲ್ಲ ಅಂಥ ಯಾರೋ ಗೆಳೆಯನನ್ನು ಕರೆದುಕೊಂಡು ’ರಜನೀಕಾಂತ್’ ಸಿನೆಮಾಕ್ಕೆ ಫ಼ಸ್ಟ್ ಶೋ ಗೆ ಹೋಗಿ, ಅವನು ಮುಖ ಕಿವಿಚಿದಾಗೆಲ್ಲಾ ನಾನು ಕಿವಿಚಿ, ಅವನು ಚೆನ್ನಾಗಿಲ್ಲಾ ಅಂತ ಬೈಯ್ದಾಗ ’ಅಲ್ಲ’ ಅಂತ ಅನಿಸಿದರೂ ಹೇಳಲಾರದೆ , ಹೌದು ಅಂತ ತಲೆಯಾಡಿಸಿದ್ದು,ಗೆಳೆಯರು ಯಾರೂ ಬಓದಿಲ್ಲ ಅಂದಾಗ, ಭಂಡ ಧೈರ್ಯದಲ್ಲಿ , ಒಬ್ಬನೇ ಸಿನೆಮಾಕ್ಕೆ ಹೋಗಿ , ಥಿಯೇಟರ್ ನ ಕತ್ತಲಲ್ಲಿ, ’ನನ್ನನ್ನು ಬಿಟ್ಟು ಈ ಜಗತ್ತಲ್ಲಿ ಎಲ್ಲರೂ ಸುಖವಾಗಿದ್ದಾರೆ’ ಎಂಬ ಅನಾಥ ಪ್ರಜ್ನೆ ಕಾಡಿದ್ದು ಎಲ್ಲಾ ನೆನಪಿದೆ.
 ಈಗೆಲ್ಲಾ ಅದನ್ನು ಯೋಚಿಸಿದಾಗ , ಮತ್ತೆ ಹಾಗೆಲ್ಲಾ ಮಾಡಲು ಸಾಧ್ಯವೇ ಎನಿಸುತ್ತದೆ; ಮೊದಲೆಲ್ಲ ನಡೆಯುವುದೆಂದರೆ, ಏನೋ ಖುಶಿ, ಕಣ್ಣ ತುಂಬ ಕನಸುಗಳು, ಜೇಬಿನಲ್ಲಿಷ್ಟು ಕಡಲೆ ಮತ್ತು ನನ್ನೊಳಗೆ ಮುಗಿಯದ ಯೋಚನೆಗಳು; ಈಗ ಉದಾಸೀನ ಮತ್ತು ಬರೇ ಅಸಹನೆ!! ಹಾಗೆಯೇ ಬಸ್ ಹತ್ತಿದ ಕೂಡಲೆ ಅವರಿವರ ಮುಖ ನೋಡುತ್ತಾ ಇವರ ಬದುಕು ಹೀಗಿರಬಹುದೇ, ಇವರಿಗೂ ಪ್ರೀತಿ ಹುಟ್ಟಿರಬಹುದೆ, ಏನು ಓಡುತ್ತಿರಬಹುದು ಈಗ ಇವರ ಮನದಲ್ಲಿ ಅಂಥೆಲ್ಲಾ ಯೋಚಿಸುತ್ತಿರಬೇಕಾದರೆ ಸ್ಟಾಪ್ ಬಂದದ್ದೇ ತಿಳಿಯುತ್ತಿರಲಿಲ್ಲ, ಆದರೆ ಈಗ ಬಸ್ ಹತ್ತಿದೊಡನೆ ಕಿವಿಗೊಂದು ಇಯರ್ ಫೋನ್ ಸಿಕ್ಕಿಸಿಕೊಂಡು , ಕಣ್ಣು ಮುಚ್ಚಿದರೆ, ಬಸ್ ಹಳ್ಳ - ಕೊಳ್ಳಗಳಲ್ಲಿ ’ದಡ-ಬಡ’ ಅನ್ನುತ್ತಾ ಹೋಗೋವಾಗ, ಥೇಟು ಜೋಕಾಲಿ ಜೀಕಿದಂತೆ ಜೋರು ನಿದ್ದೆಯ ಅಮಲು! ಎಲ್ಲೋ ಸ್ವರ್ಗದ ಬಾಗಿಲು ತಟ್ಟುವ ಗಳಿಗೆಯಲ್ಲಿ ಬರುವ ಸ್ಟಾಪ್!
ಅದರಂತೆ ಹೀಗೆ ಮಿಸ್ಡ್ ಕಾಲ್ ಗಳಲ್ಲಿ ಪರಿಚವಾದ ಹುಡುಗಿಯ ಬಗ್ಗೆ ವೃಥಾ ಅನುಮಾನ! ಅವಳ ಜಾತಿ, ಬಣ್ಣ, ಅರ್ಹತೆ, ವಯಸ್ಸು ಗಳ ತುಲನೆ; ಸುಮ್ ಸುಮ್ನೆ  ಕೀಳರಿಮೆ; ಅವಳ ಹಳೆಯ ಗೆಳೆಯರ ಬಗೆಗೆ ತೀರದ ಕೋಪ; ಆದರೆ ಇಂಥಹ ಅಧಿಕ ಪ್ರಸಂಗಳಿಲ್ಲದ್ದಿದ್ದರೆ ಬದುಕು ನೀರಸ ಅನ್ನೋದೂ ಅಷ್ಟೇ ಸತ್ಯ!!
  ಇದೆಲ್ಲದರ ಮಧ್ಯೆ ಇತ್ತೀಚೆಗೆ ನಮ್ಮ ಜೊತೆ ಓಡಾಡಿಕೊಂಡು , ಚೆನ್ನಾಗಿದ್ದ ಗೆಳೆಯನೊಬ್ಬ ಮದುವೆಯ್ಯಾದ; ಇವನ ಕಡು ಮೌನಕ್ಕೂ, ಅವಳ ’ ಚಾಟರ್ ಬಾಕ್ಸ್’ ನಂತ ವ್ಯಕ್ತಿತ್ವಕ್ಕೂ ಅಸಲು ಹೊಂದಿಕೆಯೇ ಇಲ್ಲ! ’ಹೇಗಪ್ಪಾ ಬದುಕ್ತಾನೆ? ಸದ್ಯವೇ ಇವನು ಬಾರ್ ನಲ್ಲಿ ಸಿಗ್ತಾನೆ’ ಅಂಥ ಕಳವಳ ಪಡುತ್ತಿರಬೇಕಾದರೆ, ಮೊನ್ನೆ ರೋಡ್ ನಲ್ಲಿ ಅವರಿಬ್ಬರು ಒಬ್ಬರ ಕೈ ಇನ್ನೊಬ್ಬರು ಹಿಡ್ಕೊಂಡು ಖುಷಿಯಿಂದ ನಡೆದುಕೊಂಡು ಹೋಗ್ತಿರೋದು ನೋಡಿ , ಮನದಲ್ಲಿನ ನವಿಲು ರೆಕ್ಕೆ ಬಿಚ್ಚಿ ಕುಣಿದ ಹಾಗಾಯ್ತು!
ಅಂದ ಹಾಗೆ , ಖುಷಿಪಡಲು ಕಾರಣ ಬೇಕೇ?