Tuesday, February 8, 2011

ಮುಖಾಮುಖಿ

ವಾರದ ರಜಾದಿನವಾದ್ದರಿಂದ, ಯಾವಾಗಲೂ ಹೋಗುವಂತೆ ಮನೆಗೆ ಹೋದೆ; ಮೊಬೈಲ್ ನಲ್ಲಿ ಚಾರ್ಜ್ ಕಮ್ಮಿ ಇದೆಯಲ್ವಾ, ಬೇಗ ಚಾರ್ಜ್ ಗೆ ಇಡಬೇಕು ಎಂಬ ಧಾವಂತದಲ್ಲಿ. ಅಂಗಳಕ್ಕೆ ಕಾಲಿಡುವಾಗಲೇ ತನ್ನ ಮುದ್ದಿನ ಹೂ ಗಿಡಗಳಿಗೆ ನೀರು ಹನಿಸುತ್ತಿದ್ದ ಅಮ್ಮ, " ಮೋನು, ವಿಷ್ಯ ಗೊತ್ತಾ? ಕರೆಂಟ್ ಇಲ್ಲ.. ಕೆಳಗಿನ ಮನೆ ಹತ್ರ ಕಂಬ ಮುರಿದು ಬಿದ್ದಿದೆಯಂತೆ" ಅಂದರು. ತಕ್ಷಣ ಅಸಾಧ್ಯ ಸಿಟ್ಟು ಬಂತು, ಮೈ ಪರಚಿಕೊಳ್ಳುವಷ್ಟು; " ಏನಮ್ಮಾ, ಮೊದಲೇ ಹೇಳೊದಲ್ವಾ? ಈಗ ನೋಡು, ಮೊಬೈಲಿನಲ್ಲಿ ಚಾರ್ಜ್ ಕೂಡಾ ಇಲ್ಲ..." ಎಂದು ರೇಗಿದೆ. " ನಿನ್ನದೊಂದು ಮೊಬೈಲ್, ನನ್ನ  ಸೀರಿಯಲ್ ನೋಡದೆ ದಿನ ಎರಡಾಯ್ತು’ ಎಂದರು ಅಮ್ಮ. ಸಿಡಿಮಿಡಿಯಿಂದಲೇ ಮನೆಯೊಳಗೆ ಬಂದು, ಬ್ಯಾಗನ್ನತ್ತ ಬಿಸಾಕಿದೆ.
  ’ಛೇ!’ ಎನ್ನುತ್ತಾ ಮೊಬೈಲ್ ತೆಗೆಯುತ್ತಿದ್ದಂತೆ ಬ್ಯಾಟರಿ ಮುಗಿದು ಅದು ಆಫ಼್ ಆಗಿತ್ತು; ಒಂದೇ ಕ್ಷಣಕ್ಕೆ ಮೂಡ್ ಗಾಳಿ ಹೋದ ಬಲೂನ್ ನಂತೆ, ಸೋರಿ ಹೋಯ್ತು. " ದೇವರೇ! ಮೆಸೇಜುಗಳಿಗೆ ರಿಪ್ಲ್ಯೈ ಕೊಡ್ಲಿಲ್ಲ, ಅವಳಿಗೆ ಕಾಲ್ ಮಾಡ್ಲಿಲ್ಲ, ಫ಼ೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್ ಡೇಟ್ ಮಾಡ್ಲಿಲ್ಲ, ಎಲ್ಲಕ್ಕಿಂತ ಮುಖ್ಯ ಆವಾಗಾವಾಗ ಕೇಳಲು ಹಾಡುಗಳಿಲ್ಲ" ಜಗತ್ತು ಒಂದೇ ನಿಮಿಷಕ್ಕೆ ಕತ್ತಲಾದಂತೆ ಅನಿಸಿತು! ಸುಮ್ಮನೆ ಮೊಬೈಲ್ ಸ್ಕ್ರೀನ್ ನೋಡುತ್ತಾ ಕುಳಿತೆ.
 ಅಷ್ಟರಲ್ಲಿ ಅಮ್ಮ ಚಹಾ ತಂದರು, " ಎಂಥಾದ್ದೋ? ಸಪ್ಪಗಿದ್ದೀಯಾ; ಮೊಬೈಲ್ ಆಫ಼ಾ? ಒಳ್ಳೇದಾಯ್ತು ಬಿಡು, ಇಪ್ಪತ್ತನಾಲ್ಕು ಗಂಟೆನೂ ಅದರಲ್ಲೇ ಗುರುಟಿಗೊಂಡಿರ್ತಿಯ, ಮೊದಲೆಲ್ಲಾ ಏನು ಅದಿಲ್ದೆ ಬದುಕ್ತಾ ಇರಲಿಲ್ವ?" ಅಂತ ಹೇಳುತ್ತಿರುವಾಗಲೇ, ಕಿರಿಕಿರಿಯಾಗಿ ಗದರುವಂತಾದರೂ "ಹೌದಲ್ವಾ!" ಅನಿಸಿತು. " ಹಾಗಲ್ಲಮ್ಮ, ಓದೋಣ ಅಂದ್ರೆ ಪುಸ್ತಕಾನೂ ತಂದಿಲ್ಲ, ಟಿ.ವಿ.ನೂ ಇಲ್ಲ. ಪೇಟೆಗೆ ಹೋಗ್ಲಿಕ್ಕೆ ಉದಾಸೀನ, ಒಂಥರಾ ಬಾವಿಗೆ ಬಿದ್ದ ಹಾಗೆ..." ಅಂದೆ. " ಪೇಟೆನೂ ಬೇಡ, ಏನೂ ಬೇಡ, ಎರಡು ದಿನ ನೆಮ್ಮದಿಯಾಗಿರು, ಹೋಗಿ ಕೈ ಕಾಲು ತೊಳಕೊಂಡು ಬಾ, ತಿಂಡಿ ತಿನ್ನುವಿಯಂತೆ" ಅಂದು ಅಮ್ಮ ಒಳಗೆ ಹೋದರು. ಸುಮ್ಮನೆ ಪಾಲಿಸಿದೆ.
   ಬಚ್ಚಲು ಮನೆಗೆ ಹೋಗಿ ಮುಖಕ್ಕೆ ನೀರೆರಚಿಕೊಂಡು ಬಂದಾಗ ಕೆಸರಿನಂತಾಗಿದ್ದ ಮನಸ್ಸು ಸಮಸ್ಥಿತಿಗೆ ಬರತೊಡಗಿತ್ತು; ತಿಂಡಿ ಹೊಟ್ಟೆಗೆ ಬಿದ್ದ ಮೇಲಂತೂ ತಲೆ ಸಂಪೂರ್ಣ ಸರಿಯಾಗಿ, ತಂಗಿ ಯಾವಾಗಲೂ ಹೇಳುತ್ತಿದ್ದಂತೆ, " ಇವಂದು ಯಾವಾಗ್ಲೂ ಅತೀನೇ..."  ಏನೇನೋ ಯೋಚನೆ ಬರತೊಡಗಿತು; " ಯಾವುದು ಇಲ್ಲಿ ಶಾಶ್ವತ? ಹೀಗೇ ಬದುಕಿ ಬಿಡಬೇಕು, ಬದುಕು ಎಷ್ಟು ದಿನ? ಈಗಿದ್ದವರು ಈಗ ಇಲ್ಲ.. ಇತ್ಯಾದಿ ಇತ್ಯಾದಿ" ಸುಮ್ಮನೆ ಈಸಿಚೇರ್ ನಲ್ಲಿ ಕಾಲು ಚಾಚಿ ಮಲಗಿದೆ, ಏನೋ ಬ್ಲಾಂಕ್ ನೆಸ್; ಈಗ ಅವಳು ಪೋನ್ ಮಾಡಿರಬಹುದೇ? ಮೊಬೈಲ್ ಆಫ಼್ ಅಂತಾ ಗಾಬರಿಯಾಗಿರಬಹುದೇ? ಆಸರೆಗೆ ಇವನು ಪ್ರಯೋಜವಿಲ್ಲ ಅಂತ ಇನ್ನೊಬ್ಬ ಗೆಳೆಯನ ಜೊತೆ ಹೋಗಿರಬಹುದೇ? ಕಂಪೆನಿಯವರು ಫ಼ೋನ್ ಮಾಡಿರಬಹುದೇ? ಹಾಳು ಲ್ಯಾಂಡ್ ಲೈನ್ ಕೂಡಾ ಇಲ್ಲ,ಮೊಬೈಲ್ ಇರೋವಾಗ ಸುಮ್ನೇ ಅದ್ಯಾಕೆ? ದುಡ್ಡು ಜಾಸ್ತಿ ಆಗಿದ್ಯಾ ಅಂತ ಅಮ್ಮನ ವರಾತ; ಫ಼ೇಸ್ ಬುಕ್ ನಲ್ಲಿ ಯಾರಾದ್ರೂ ಚಾಟ್ ಗೆ ಕಾಯ್ತಾ ಇರಬಹುದಾ? ಇವರೆಲ್ಲಾ ನನ್ನ ಮರೆತು ಹೋಗ್ತಾರಾ? ಅಂತ ಭಯ! ಯಾವಾಗ ನಿದ್ದೆ ಬಂತು ತಿಳಿಯಲೇ ಇಲ್ಲ.
   " ಊಟ ಮಾಡು ಬಾರೋ" ಅಂತ ಅಮ್ಮ ಕರೆದಾಗ, ಒಂದು ಕ್ಷಣ ಎಲ್ಲಿದ್ದೇನೆ ಅಂತಾನೇ ಗೊತ್ತಾಗ್ಲಿಲ್ಲ! ಕಣ್ಣು ಹೊಸಕಿಕೊಳ್ಳುತ್ತಾ ಎದ್ದು ಊಟ ಮುಗಿಸಿ ಪುನಹ ಅಡ್ಡಾದವನಿಗೆ, ನಿದ್ದೆ ಹತ್ತಲಿಲ್ಲ; ಅತ್ತ-ಇತ್ತ ಹಾಸಿಗೆಯಲ್ಲಿ ಹೊರಳಾಡುತ್ತಾ, ಗಂಟೆ ಹನ್ನೆರಾಡಯ್ತು, ಅಮ್ಮನಿಗೆ ಎಚ್ಚರವಾಗದಂತೆ ಎದ್ದು, ಮೂತ್ರಕ್ಕೆ ಅಂತ ಹೊರಗೆ ಬಂದೆ; ಯಾವುದೋ ಪರಧ್ಯಾನದಲ್ಲಿ ಕೆಲಸ ಮುಗಿಸಿ, ಯಾಕೋ ಸುಮ್ಮನೆ ತಲೆಯೆತ್ತಿ ನೋಡಿದೆ, ಆಕಾಶದ ತುಂಬಾ ನಕ್ಷತ್ರಗಳು! ಒಂದೇ ಒಂದು ಮೋಡದ ತುಣುಕೂ ಇಲ್ಲ! ಚಿಕ್ಕವನಿದ್ದಾಗ, "ಅದು ಸಪ್ತರ್ಷಿ ಮಂಡಲ, ಇದು ಬೇಟೆಗಾರ, ಅಗೋ ಅದು ಅವನ ನಾಯಿ " ಅಂತೆಲ್ಲಾ, ಮನೆ ಬಿಟ್ಟು ಓಡಿ ಹೋಗಿ ,ಈಗ ನೆನಪಾಗಿರುವ ಅಣ್ಣ ತೋರಿಸುತ್ತಿದ್ದುದು ನೆನಪಾಯಿತು! ಅವನ ಬಗ್ಗೆ ಅವಳ ಬಳಿ ಹೇಳೋವಾಗೆಲ್ಲಾ, "ಏನು ಬೋರು ಹೊಡೆಸ್ತಿಯಾ, ದೇವರೇ!" ಅನ್ನೋ ಅವಳ ಕಮೆಂಟು ಕೂಡ; ಮನಸಿಗೆ ಒಂಥರಾ ವಿಷಾದ ಭಾವ; ಹಠಾತ್ತಾಗಿ ನಾನು ಕೊನೆಯ ಬಾರಿ ಆಕಾಶ ನೋಡಿದ್ದು ಯಾವಾಗ? ಎಂಬ ಪ್ರಶ್ನೆ ಮೂಡಿತು! ಅದು ನೆನಪಾಗದೆ, " ಛೇ!, ನಾನು ಎಷ್ಟೊಂದು ಮಿಸ್ ಮಾಡ್ಕೋತಾ ಇದೀನಲ್ಲಾ" ಅನ್ನಿಸಿ, ತುಂಬಾ ಬೇಜಾರಾಯ್ತು. ಹಾಗೆಯೇ ಮನೆಯ ಮೆಟ್ಟಿಲ ಮೇಲೆ ಕುಳಿತು ಆಕಾಶ ನೋಡುತ್ತಾ ಕುಳಿತವನಿಗೆ ಎಷ್ಟು ಖುಷಿಯಾಯ್ತೂ ಎಂದರೆ, ವಾಪಾಸ್ ರೂಮಿಗೆ ಹೋಗೋದು ಮರೆತು ತುಂಬಾ ಹೊತ್ತು ಅಲ್ಲೇ ಕೂತಿದ್ದೆ, ಆಕಾಶ ನೋಡಿಕೊಂಡು!
 ಮರುದಿನ ಬೆಳಿಗ್ಗೆ, ಕೆಲಸ ಎಲ್ಲಾ ಮುಗಿಸಿ, ಸುಮ್ಮನೆ ಕೂತವನಿಗೆ, ಯಾರೂ ಒಬ್ಬರಿಗೊಬ್ಬರಿಗೆ ಕನೆಕ್ಟ್ ಆಗದ ಈ ಅನಿವಾರ್ಯತೆಯಲ್ಲೂ ಎಂಥಹ ಸುಖ ಇದೆ ಅಂತಾ ಫ಼ೀಲ್ ಆಗತೊಡಗಿತು. ಯಾರಿಗೂ ಏನು ಮಾಡ್ತಾ ಇದ್ದೇನೆ ಅಂತ ಹೇಳಬೇಕಿಲ್ಲ; ಮೆಸೇಜುಗಳಿಗೆ ಉತ್ತರಿಸಬೇಕಿಲ್ಲ; ಇಲ್ಲದ ಮೂಡನ್ನು ತಂದು ನಗಬೇಕಿಲ್ಲ; ನನ್ನ ಪಾಡಿಗೆ ನಾನು! ಅವತ್ತು ಸಂಜೆ ಮನೆಯಿಂದ ಹೊರಟಾಗಿನ ’ನಾನು", ಬಂದಾಗಿನ ’ನಾನು’ ಆಗಿರಲಿಲ್ಲ!
 ವಾಪಾಸು ಅದೇ ಧೂಳು, ವಾಹನಗಳು, ಟ್ರಾಫ಼ಿಕ್ ನಲ್ಲೆಲ್ಲಾ ಏಗಿ, ರೂಮಿಗೆ ಬಂದು ನೊಬೈಲ್ ಚಾರ್ಜ್ ಗಿಟ್ಟು ಸ್ವಿಚ್ ಆನ್ ಮಾಡಿದರೆ, ಮೆಸೇಜುಗಳ ಮಳೆ! ಅವಳದ್ದು, ಗೆಳೆಯರದ್ದು. ಒಬ್ಬನೂ ’ಎಲ್ಲಿದ್ದಿಯಾ?’ ಅಂತ ತಪ್ಪಿಯೂ ಕೇಳಿರಲಿಲ್ಲ. ಈ ಜಗತ್ತು ನಾನಿಲ್ಲದಿದ್ದರೂ ಚೆನ್ನಾಗೇ ನಡೆಯುತ್ತಲ್ವಾ? ಅಂತ ತೀವ್ರವಾಗಿ ಅನ್ನಿಸಿತು.
 ಅಷ್ಟರಲ್ಲಿ ಅವಳ ಕಾಲ್, "ಎಲ್ಲಿ ಹೋಗಿದ್ದೆ? ಎಷ್ಟು ಸಲ ಫ಼ೋನ್ ಮಾಡೋದು? ಹೇಳೋಕಾಗಲ್ವಾ ನಿಂಗೆ?" ಅಂತ ಸಾವಿರ ಪ್ರಶ್ನೆಗಳು; " ಊರಿಗೆ ಹೋಗಿದ್ದೆ. ಪವರ್ ಇರ್ಲಿಲ್ಲ ಮನೇಲಿ, ಹಾಗೆ ಫ಼ೋನ್ ಸ್ವಿಚ್ ಆಫ಼್ ಆಗಿತ್ತು..ಸಾರಿ" ಅಂದೆ. " ಪ್ರೀತಿ ಇದ್ದಿದ್ರೆ, ಹೇಗಾದ್ರೂ ಕಾಂಟ್ಯಾಕ್ಟ್ ಮಾಡ್ತಾ ಇದ್ದೆ.. ಗೋ ಟು ಹೆಲ್" ಅಂದು ಕಾಲ್ ಕಟ್ ಮಾಡಿದಳು. " ಪ್ರೀತಿ ಇದ್ದಿದ್ದರೆ ನೀನು ಅರ್ಥ ಮಾಡ್ಕೋತ ಇದ್ದೆ... " ಅಂತ ಮೆಸೇಜು ಕಳಿಸಿ, ಮೊಬೈಲ್ ಸೈಲೆಂಟ್ ಮೋಡ್ ನಲ್ಲಿಟ್ಟು , ಎಂದಿನಂತೆ ಟಿ.ವಿ. ಆನ್ ಮಾಡದೆ ಸುಮ್ಮನೆ ಕುಳಿತೆ. ರೂಮಿನ ಕಿಟಕಿಯ ಹೊರಗೆ, ಸಂಜೆಯ ಸೂರ್ಯನ ಕಿರಣ ಮರದ ಎಲೆಯ ಮೇಲೆ ಬಿದ್ದಿರೋದು, ಮೊದಲ ಬಾರಿಗೆಂಬಂತೆ ಕಂಡು  ಆಶ್ಚಯವಾಯಿತು!!