Thursday, October 27, 2011

ವಾಸ್ತವ

ಅಲ್ಲೆಲ್ಲೋ ದೂರದಲ್ಲಿ ನಡೆವ,
ಬೆಚ್ಚಿಬೀಳಿಸುವ ಘಟನೆಗೆ ಕಾಯುತ್ತಾ,
ನಿರಂತರ ಬ್ರೇಕಿಂಗ್ ನ್ಯೂಸ್ ಗಳಿಗೆ ಚಾನೆಲ್ ಬದಲಿಸುತ್ತಾ,
ನಮ್ಮ ನಮ್ಮ ಮನದ ಗೂಡೊಳಗೆ
ಬೆಚ್ಚಗೆ ಹೊದ್ದು ಮಲಗಿ,
ಸುಳ್ಳು ಸುಳ್ಳೇ ಕನಿಕರ!

ಬಾರದ ಲಾಟರಿ ದುಡ್ಡಿಗಾಗಿ ಹತಾಶೆ;
ಈ ಕ್ಷಣದೊಳಗೆ ಎಲ್ಲ ಬದಲಾಗುವ ಕನಸು,
ಕನಸ ಕೊಳ್ಳುತಾ,
ಮುಖವಾಡಗಳೊಡನೆ ದಿನ ದೂಡಿ,
ರಾತ್ರಿಯ ಕತ್ತಲಲ್ಲಿ ಸಾವಿನ ಭಯ;
ಮೆಲ್ಲಗೆ ಹುಟ್ಟಿಕೊಳ್ಳುವ ಪಾಪಪ್ರಜ್ಞೆಯ ಹೊಸಕಿ,
ಇಷ್ಟಿಷ್ಟೇ ಕೈ ಚಾಚಿ,
ಜಂಜಾಟಗಳಿಗೆಲ್ಲಾ ನಿಟ್ಟುಸಿರಲ್ಲೇ ಸಂತನ ಧ್ಯಾನ!

ಅದೇ ರಾಗ, ಅದೇ ತಾಳ,
ಎಲ್ಲ ಬದಲಿಸುವ ’ಸೂಪರ್ ಮ್ಯಾನ್’ ಗಾಗಿ ಮುಗಿಯದ ನಿರೀಕ್ಷೆ;
ನಾವು ಮಾತ್ರ,
ನಿರ್ಲಕ್ಷಿತರು,ಕಳಂಕರಹಿತರು,
ಮತ್ತೆಲ್ಲರೂ, ಛೀ! ಥೂ! ಭ್ರಷ್ಟರು!
ನಿಜವಾಗಿಯೂ,
ಬದುಕ ಬದಲಿಸಬಹುದೇ?