Monday, April 16, 2012

ನನ್ನ ಓದು: ಇಷ್ಟವಾದ ’ದ್ವೀಪವ ಬಯಸಿ...’

ಮೊನ್ನೆ ಮನೆಗೆ ಹೋಗುವಾಗ, ಜ್ಯೋತಿಯಿಂದ ಬಸ್ ಹಿಡಿಯೋಣ ಅಂತ ಯೋಚಿಸುತ್ತಾ ಹೋದವನಿಗೆ ’ಅತ್ರಿ ಬುಕ್ ಸೆಂಟರ್’ ಇದ್ದ ಕಡೆ, ’ನವಕರ್ನಾಟಕ ಮಳಿಗೆ’ ಕಂಡು, ಅದರಲ್ಲೂ ಅಲ್ಲಿ ಹಾಕಿದ್ದ ೨೦% ಡಿಸ್ಕೌಂಟ್ ಕಂಡು, ಮನಸ್ಸು ಎಳೆಯಿತು; ಯಾವಾಗಿನ ಅಶೋಕವರ್ಧನರ ದೊಡ್ಡ ಮೀಸೆಯನ್ನು ಮಿಸ್ ಮಾಡಿಕೊಳ್ಳುತ್ತಾ, ಪುಸ್ತಕ ಹುಡುಕುತ್ತಿದ್ದವನಿಗೆ, ಅಚಾನಕ್ ಎಂಬಂತೆ, ’ದ್ವೀಪವ ಬಯಸಿ’ ಅಂತ ಹೆಸರು ಕಾಣಿಸಿತು. ವಾಹ್! ವಾಹ್! ಎಂಥಾ ಹೆಸರು! ನಾವೆಲ್ಲರೂ ನಮ್ಮೊಳಗೇ ದ್ವೀಪಗಳೇ ಅಂದುಕೊಳ್ಳುತ್ತಾ, ಲೇಖಕರ ಹೆಸರು ಇತ್ಯಾದಿ ವಿವರ ನೋಡಿದೆ. ’ಎಮ್.ಆರ್.ದತ್ತಾತ್ರಿ’ ಚಿಕ್ಕಮಗಳೂರಿನವರು, ಈಗ ಲಾಸ್ ಏಂಜಲಿಸ್ ನಲ್ಲಿದ್ದಾರೆ. ಸರಿ, ಮುಂದೇನು ಯೋಚಿಸದೆ, ತಗೊಂಡು ಬಂದೆ; ಮನೆ, ರೂಮ್, ಬಸ್, ಡ್ಯೂಟಿ, ರಾತ್ರಿ,ಹಗಲು, ಊಟ, ನಿದ್ದೆ ಇದೆಲ್ಲದರ ಮಧ್ಯೆ ಅಲ್ಲಿಷ್ಟು ಇಲ್ಲಿಷ್ಟು ಗ್ಯಾಪ್ ನಲ್ಲಿ ಮುಗಿಸಬಹುದು ಅಂದುಕೊಂಡವನಿಗೆ, ಪುಸ್ತಕ ಹಿಡಿದದ್ದು ಮಾತ್ರ ಗೊತ್ತು! ಕೊನೆಯ ಪುಟಕ್ಕೆ ಬರುತ್ತಿದ್ದಂತೆ, ಯಾವಾಗಲೂ ಅನಿಸುವಂತೆ, ’ಛೇ! ಮುಗಿಯಿತಲ್ಲ, ಮುಂದೆ?’ ಅನಿಸಿತು.
ಕಥೆಯ ಹರಹು ಸಾಕಷ್ಟು ದೊಡ್ಡದೇ; ಗೊಲ್ಲರಹಳ್ಳಿ,ಬೆಂಗಳೂರು, ಲಾಸ್ ಎಂಜಲಿಸ್, ಐಟಿ ಬಿಟಿ, ಆರ್ಥಿಕ ಚಿಂತನೆ, ರಿಸೆಷನ್, ಫ಼ುಡ್ ಕ್ರೈಸಿಸ್, ಕಾಡು ಬೆಂಕಿ, ಪೆಟ್ರೋಲ್, ಫ಼ೋಟೋಗ್ರಾಫ಼ಿ, ಮುಖ್ಯವಾಗಿ ಭಾವಗಳು. ಒಂದರ್ಥದಲ್ಲಿ ನನಗೆ ನನ್ನ ಬಗ್ಗೇ ’ಇಶ್ಶೀ..’ ಅಂತ ಅನ್ನಿಸಿಬಿಟ್ಟಿತು, ನನ್ನ ಬಾಲ್ಯ, ನಾಲ್ಕಾರು ಹುಡುಗಿಯರು, ಪ್ರೇಮ ವೈಫ಼ಲ್ಯ ಇತ್ಯಾದಿಗಳ ಬಗ್ಗೆ ಕಿಸ್ ಬಾಯಿ ದಾಸನಂತೆ, ಮತ್ತೆ ಹೊರಟಲ್ಲಿಗೇ ಬಂದು ನಿಲ್ಲುವ ಕಥೆಗಳ ಗೀಚಿಕೊಂಡಿದ್ದ ನನಗೆ, ಇದು ’ನೋಡು ಮಗನೇ, ಇಲ್ಲೊಂದು ಕಿಟಕಿಯಿದೆ ಹೊರಜಗತ್ತಿಗೆ; ಎಷ್ಟು ದೂರದವರೆಗೆ ಕಾಣುತ್ತೋ ನೋಡ್ಕೋ...’ ಅಂದ ಹಾಗೆ ಅನಿಸಿತು.
ಇಲ್ಲಿ ಶ್ರೀಕಾಂತನ ಕಥೆ, ಅವನೊಂದಿಗೆ ವಾಣಿ, ಆಂಜನೇಯುಲು, ಮಹಿಂದ, ಅಶೋಕ್, ಸುಜಾತ, ಸಮಿಂದ, ಫ಼್ರಾಂಕ್ ಹೀಗೆ ಮತ್ತೆಲ್ಲರ ಕಥೆಯೂ ಆಗುತ್ತದೆ. ಇಡೀ ಕಾದಂಬರಿ ಶ್ರೀಕಾಂತನ ಕಣ್ಣಿನಿಂದ ನಿರೂಪಿತವಾಗಿದೆ; ಬಾಲ್ಯದಲ್ಲಿ, ಮುಳುಗಡೆಯಾಗುವ ಊರಿಂದ ಎಲ್ಲರೂ ಖಾಲಿ ಮಾಡಿದರೂ ಬರಲಾರದ ಅಪ್ಪನ ಅಸಹಾಯಕತೆ, ಏಕಾಕಿಕತೆ, ಅದಕ್ಕೆ ಹೊಂದಿಕೊಳ್ಳಲಾರದೆ ಮನೆ ಬಿಟ್ಟು ತೆರಳುವ ತಮ್ಮ ಕೄಷ್ಣ, ಅವನು ಬೆಂಗಳೂರಿನಲ್ಲೇ ಇದ್ದಾನೆ ಅಂತ ಅಪರಾಧೀ ಭಾವದಲ್ಲಿ ಹುಡುಕುವ ಅಣ್ಣನಾಗಿ ಶ್ರೀಕಾಂತ ತಟ್ಟುತ್ತಾನೆ; ಅವನ ಕೆರಿಯರ್, ವಾಣಿಯೊಂದಿಗಿನ ಪ್ರೀತಿ, ಮದುವೆ, ಕಂಪೆನಿಯಲ್ಲಿ ಒಳ್ಳಿ ಹೆಸರು, ಹೆಚ್ಚಿನ ಅವಕಾಶಕ್ಕಾಗಿ ಅಮೆರಿಕಕ್ಕೆ ಹೊರಡುವುದರೊಂದಿಗೆ ನಿಜವಾದ ಕಥೆ ಶುರುವಾಗುತ್ತದೆ.
ಲಾಸ್ ಎಂಜಲಿಸ್ ನಲ್ಲಿ ಮನೆ ಮಾಡಿ, ಅಲ್ಲಿ ದುಡಿಯುವ ಶ್ರೀಕಾಂತನಿಗೆ ಅಲ್ಲಿ ಫ಼್ರಾಂಕ್, ಅಶೋಕ್, ಅವರ ಪತ್ನಿ ಸುಜಾತ, ಆಂಜನೇಯುಲು ಪರಿಚಯವಾಗುತ್ತಾರೆ. ಶ್ರೀಕಾಂತನಿಗೆ ನೋಡಲು ಅವನ ಕಂಪೆನಿಯ ಉನ್ನತಾಧಿಕಾರಿ ಭೂಷಣ್ ರಾವ್ ಹೂಬೇಹೂಬ್ ತನ್ನ ಚಿಕ್ಕಪ್ಪನಂತೇ ಅನ್ನಿಸಿ ಅವನು ಅಸ್ವಸ್ಥನಾಗುತ್ತಾನೆ, ರಿಸೆಷನ್ ಟೈಮ್ ನಲ್ಲಿ ಎಲ್ಲರೂ ಕೆಲಸ ಕಳಕೊಳ್ಳುವಾಗ ತಾನು ಉಳಿದುಕೊಳ್ಳಲು ಕಾರಣವೂ ಅದೇ ಅನ್ನುವ ಗುಮಾನಿ ಅವನ ಕಾಡುತ್ತದೆ. ಎಲ್ಲೋ ಒಂದು ಕಡೆ ಫ಼್ರಾಂಕ್ ನಲ್ಲಿ ತನ್ನ ಕಳೆದು ಹೋದ ತಮ್ಮನನ್ನು ಕಾಣುವ ಶ್ರೀಕಾಂತ, ಆ ಕಾರಣದಿಂದಲೇ ಆಂಜನೇಯುಲು ಜೊತೆ ಮಾತು ಬೆಳೆಸುತ್ತಾನೆ; ಇವೆಲ್ಲ ಅವನಲ್ಲಿ ಹಲವು ಬದಲಾವಣೆಗೆ ಕಾರಣವಾಗುತ್ತದೆ; ಇದೆಲ್ಲದರ ನಡುವೆ ಪತ್ನಿ ವಾಣಿ ’ಇಂಡಸ್ಟ್ರಿಯಲ್ ಸೈಕಾಲಜಿ’ ಓದುವುದು, ಲಾಯರ್ ಅಶೋಕ್ ಟ್ರಕ್ ಮಾಲಕರ ಮತ್ತು ಡ್ರೈವರ್ ಗಳ ಯೂನಿಯನ್ ಗಳ ನಡುವಿನ ಸಮಸ್ಯೆಗೆ ಯತ್ನಿಸುವುದು, ಕ್ರಿಸ್ ಬೆಂಟನ್ , ಮಹಿಂದ ತಮ್ಮಿಚ್ಚೆಯಂತೆ ತಮ್ಮ ದಾರಿಯಲ್ಲಿ ಸಾಗಿ ಹುತಾತ್ಮರಾಗುವುದು, ಸಮಿಂದರ ಫ಼ೋಟೋಗಳು, ಫ಼್ರಾಂಕ್ ನ ಸ್ಟ್ರೀಟ್ ಫ಼ೋಟೋಗ್ರಫಿ ಇತ್ಯಾದಿಗಳು ಕಾದಂಬರಿಯ ಆಳವನ್ನು ಹೆಚ್ಚಿಸುತ್ತದೆ.
ಕೊನೆಗೆ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಶ್ರೀಕಾಂತ ಭಾರತಕ್ಕೆ ಮರಳುತ್ತಾನೆ. ಆದರೆ ಇದಕ್ಕಿಂತ ನನ್ನನ್ನು ಕಾಡಿದ್ದು ಸಮಿಂದರ ನಿರ್ಧಾರ; ’ನಮಗೊಂದು ಕೆಲಸ ಬಾಕಿ ಇದೆ’ ಅನ್ನುತ್ತಾ ತನ್ನ ಮಗ ಮಹಿಂದ ತಂದ ಆಫ಼್ ಘಾನಿಸ್ತಾನದಲ್ಲಿ ತಾಲಿಬಾನಿಗಳು ನಾಶ ಮಾಡಿದ ಬುದ್ಧನ ಪ್ರತಿಮೆಯಿಂದ ಸಿಡಿದ ಚೂರನ್ನು ಮರಳಿ ಸ್ವಸ್ಥಾನಕ್ಕೆ ಸೇರಿಸುವ ಕೆಲಸಕ್ಕೆ ಹೊರಡುವುದು ನನ್ನನ್ನು ಬಹಳ ಕಲಕಿತು.
 ’ದ್ವೀಪವ ಬಯಸಿ...’ ಹಲವು ಕಥೆಗಳ ಸಂಕಥನ. ಹೇಳದೇ ಉಳಿದ, ಅಥವಾ ಅಪೂರ್ಣ ಎನಿಸುವ ಕಥೆಗಳು ಯಾವತ್ತೂ ನಮ್ಮನ್ನು ಕಾಡುತ್ತವೆ. ಅದೇ ಕೄತಿಯ ಯಶಸ್ಸೂ ಆಗಿರುತ್ತದೆ.

Friday, April 13, 2012

ಅರ್ಧ...

ಪ್ರಶಾಂತನಿಗೆ ಇದು ಯಾವಾಗಲೂ ಎದುರಾಗುತ್ತಿದ್ದ ಸಮಸ್ಯೆ; ತನಗನ್ನಿಸಿದ್ದನ್ನ ಹೇಗೇ ಅದೇ ಥರಾ ಇನ್ನೊಬ್ಬರಿಗೆ ದಾಟಿಸುವುದು? ಸಂಜೆಯ ಮಬ್ಬು ಬೆಳಕಲ್ಲಿ ಚಿಕ್ಕ ಫ಼್ರಾಕ್ ಹಾಕಿಕೊಂಡು ರಸ್ತೆ ದಾಟುತ್ತಿದ್ದ ಆ ಹುಡುಗಿ ಅವನ ಕಣ್ಣಿಗೆ ದೇವಕನ್ಯೆಯಂತೆ ಕಂಡು ಅದನ್ನೇ ಪಕ್ಕದಲ್ಲಿದ್ದ ಗೆಳೆಯನಿಗೆ ಹೇಳಿದಾಗ ’ಥೂ..’ ಅಂದಿದ್ದ..ಹೀಗೆ ಒಂದೆರಡು ಅನುಭವಗಳಾದ ಮೇಲೆ,ತಾನು ಬದುಕುತ್ತಿರುವ ಪ್ರಪಂಚವೇ ಬೇರೆ,ತನ್ನೊಳಗಿನದೇ ಬೇರೇ ಎಂಬುದನ್ನು ಅರಿತು ಪ್ರಶಾಂತ ಮೌನವಾಗಿರುವುದು ಕಲಿತ.ಆದರೂ ಉಕ್ಕುವ ಬಿಯರ್ ನ ನೊರೆಯ ಅಮಲಲ್ಲಿ,ಗೆಳೆಯರೊಂದಿಗಿನ ದೊಡ್ಡ ನಗುವಿನ ಭರಾಟೆಯಲ್ಲಿ,ಇಷ್ಟಿಷ್ಟೇ ಒಳಗೊಳ್ಳುವ ಎಮೋಷನಲ್ ಕಥೆಗಳಲ್ಲಿ ಮನಸು ಭಾರವಾದಾಗ ಅಂಕೆ ಮೀರಿ ಹೊರ ಬರುತ್ತಿದ್ದ ಮಾತುಗಳು ಅವನನ್ನು ತಮಾಷೆಗೀಡು ಮಾಡುತ್ತಿದ್ದವು. ಉದಾಹರಣೆಗೆ ಎಲ್ಲರೂ ಆಗ ತಾನೆ ರಿಲೀಸ್ ಆದ ಹೊಸ ಮೂವಿ ಬಗ್ಗೆ ಮಾತಾಡುತ್ತಿದ್ದರೆ,ಇವನು ತನ್ನ ಬಾಲ್ಯದ ಕನಸಾದ ಊರಿನ ಗುಡ್ಡವನ್ನು ಏರುವುದರ ಬಗ್ಗೆ ಮಾತಾಡುತ್ತಿದ್ದ.. ಸ್ವಲ್ಪ ಅಂತಕರಣದ ಒಂದಿಬ್ಬರು ಮಿತ್ರರು ಇವನ ಹೆಗಲ ಮೇಲೆ ಕೈ ಹಾಕಿ ದೂರ ಕರೆದೊಯ್ದು, ’ಏನೋ? ಏನಾದ್ರು ಪ್ರಾಬ್ಲಮ್ಮಾ?’ ಅಂತ ವಿಚಾರಿಸಿದರೆ ತಬ್ಬಿಬ್ಬಾಗುತ್ತಿದ್ದ..ಅವನಿಗೆ ಏನು ಉತ್ತರಿಸಬೇಕು ಅಂತ ಗೊತ್ತಾಗುತ್ತಿರಲಿಲ್ಲ. ಹಾಗೆ ಇವನ ಅರಿಯಲು ವಿಫ಼ಲರಾದ ಮೇಲೇ ಅವರೂ ’ಅವ ಸ್ವಲ್ಪ ಹಾಗೇ..’ ಅಂತ ಬಿಟ್ಟುಬಿಟ್ಟಿದ್ದರು..ಆದರೂ ನಾಲ್ಕು ಜನ ಸೇರಿದ ಕಡೆ ತಮಾಷೆ ಮಾಡಲು ಸರಿಯಾಗಿಯೇ ಸಿಗುತ್ತಿದ್ದ. ಹೀಗೆಲ್ಲಾ ಆದ ಬಳಿಕ ಪ್ರಶಾಂತ ತನಗೆ ತಾನೇ ಸ್ನೇಹಿತನಾದ.