Thursday, November 14, 2013

ಅವರ ಪ್ರಶ್ನೆ ಮತ್ತು ನನ್ನ ಉತ್ತರ

(ಇಲ್ಲಿ ೨೫ ಪ್ರಶ್ನೆಗಳಿವೆ. ಐದಕ್ಕಾದರೂ ನಿಮ್ಮ ಬಳಿ ಉತ್ತರಗಳಿವೆ. ಮಾತಾಡಿ)
ಎಲ್ಲರಿಗೂ ಪುಸ್ತಕಗಳನ್ನು ಓದುವುದೆಂದರೆ ಇಷ್ಟ. ಕೆಲವರಂತೂ ಟೀವಿ, ಇಂಟರ್‌ನೆಟ್, ಮೊಬೈಲ್ ಸವಲತ್ತುಗಳಾಚೆಗೂ ಕನ್ನಡಿಗರಲ್ಲಿ ಓದುವ ಹವ್ಯಾಸ ಬೆಳೆಯುತ್ತಿದೆ, ಪುಸ್ತಕಗಳ ಮಾರಾಟ ಹೆಚ್ಚುತ್ತಿದೆ ಎನ್ನುತ್ತಾರೆ.
ಹಾಗೆಯೇ ಫೇಸ್ ಬುಕ್‌ನಂಥ ತಾಣಗಳಲ್ಲಿ ಸದಾ ಏನನ್ನಾದರೂ ಪೋಸ್ಟ್ ಮಾಡುತ್ತಿರುತ್ತೇವಾದರೂ  ಪುಸ್ತಕಗಳ ಬಗ್ಗೆ ಅಲ್ಲಿ ಮಾತುಕತೆ ನಡೆಯುವುದು ಕಡಿಮೆ. ಹೋಗಲಿ ಎಂದರೆ ಚುಕ್ಕುಬುಕ್ಕುನಂಥ ತಾಣದಲ್ಲೂ ಉತ್ಸಾಹದ ಪ್ರತಿಕ್ರಿಯೆಗಳ ಭರಾಟೆಯಾಗಲೀ, ವಾದ-ವಿವಾದಗಳಾಗಲೀ ನಡೆಯುವುದು ಕಾಣಿಸುವುದಿಲ್ಲ.
ತಾವಾಗಿ ಬರೆಯುವುದು ಹೋಗಲಿ, ಬೇರೆಯವರು ಅಲ್ಲಿ ಇಲ್ಲಿ ಬರೆದಾಗ ಪ್ರತಿಕ್ರಿಯಿಸುವುದಕ್ಕೂ ಸಾಧ್ಯವಾಗದಂತೆ ಮಾಡುವ ಅಂಶ ಯಾವುದು? ಪುಸ್ತಕಗಳ ಬಗ್ಗೆ ನಮ್ಮಲ್ಲಿ ಒಂದು ಆಶ್ಚರ್ಯಕರವಾದ  ಮೌನ ಇದೆ ಎಂದು ಅನಿಸುವುದಿಲ್ಲವೆ?
ತುಂಬ ಚೆನ್ನಾಗಿದೆ, ಸಕ್ಕತ್ತಾಗಿದೆ, ಸೂಪರ್, ವಾಹ್, ಎಂಥಾ ಒಳ್ಳೆಯ ಪುಸ್ತಕ, ಬಿಡುಗಡೆ ಯಾವಾಗ - ಕಾಯುತ್ತಿದ್ದೇವೆ ಮುಂತಾದ ಚುಟುಕು ಕಾಮೆಂಟುಗಳನ್ನು ಹೊರತು ಪಡಿಸಿದರೆ ಪುಸ್ತಕಗಳ ಬಗ್ಗೆ ಬರೆದಿದ್ದರ ಕುರಿತು ಚರ್ಚಿಸುವ  ಕಾಮೆಂಟುಗಳಿರುವುದೇ ಅಪರೂಪ.
ಇಲ್ಲಿ ಕೆಲವು ಪ್ರಶ್ನೆಗಳಿವೆ. ಇವುಗಳಲ್ಲಿ ಒಂದಾದರೂ ನೀವು ಉತ್ತರಿಸಲು ಯೋಗ್ಯವಾದ ಪ್ರಶ್ನೆಯಾಗಿರುವುದು ಸಾಧ್ಯವಿದೆ. ಪುಸ್ತಕಗಳಿಗಾಗಿಯೇ, ಓದುಗರಿಗಾಗಿಯೇ ಇರುವ ಈ ತಾಣ ನಿಮ್ಮ ಉತ್ತರಗಳಿಗೆ ಯೋಗ್ಯ ಸ್ಥಳ ಎನಿಸುತ್ತದೆ. ಉತ್ತರ ನಿರೀಕ್ಷಿಸಬಹುದೇ?
1. ಓದುವುದು ಒಂದು ಚಟ, ಅಬ್ಸೆಶನ್ ಆಗುವುದು ಯಾವಾಗ?
2. ನನಗೆ ಪುಸ್ತಕಗಳನ್ನ ಓದುವ ಅಭ್ಯಾಸವಿಲ್ಲ, ಹಿಂದೆಲ್ಲ ತುಂಬ ಓದುತ್ತಿದ್ದೆ, ಈಚೀಚೆಗೆ ಏನೂ ಇಲ್ಲ ಎನ್ನುವುದರ ಅರ್ಥವೇನು? ವರ್ಷಕ್ಕೆ ಒಂದೂ ಪುಸ್ತಕ ಓದಲಾಗುತ್ತಿಲ್ಲವೆ ಅಥವಾ ನಿಮ್ಮ ಲೆಕ್ಕಾಚಾರ ಏನು?
3. ಎಂಥಾ ಒಳ್ಳೆಯ ಪುಸ್ತಕವಿದು! ಓದಿದ್ದು ಸಾರ್ಥಕವಾಯ್ತು ಎನಿಸುವುದು ಯಾವಾಗ?
4. ಥತ್! ಎಂಥಾ ದರಿದ್ರ ಪುಸ್ತಕ! ದುಡ್ಡೂ ದಂಡ, ಟೈಮೂ ವೇಸ್ಟ್ ಎನಿಸುವುದು ಯಾವಾಗ?
5. ಪುಸ್ತಕವೇನೋ ಓದಲೇ ಬೇಕಾದ್ದು, ಆದರೆ ಕೈಲಿ ಹಿಡಿದಿದ್ದೇ ಹಾಳು ನಿದ್ದೆ ಬಂದು ಬಿಡುತ್ತದೆ ಯಾಕೆ?
6. ಅಯ್ಯೋ ತುಂಬಾ ಬೋರು ಈ ಪುಸ್ತಕ ಎನ್ನುವಂತಾಗುವುದು ಯಾವಾಗ?
7. ನಿಮ್ಮನ್ನೇ ನೀವು ಮರೆತು ನಿಮ್ಮನ್ನು ಆವರಿಸಿಕೊಂಡು ಬಿಡುವ ಪುಸ್ತಕ ಹೇಗಿರುತ್ತದೆ?
8. ಯಾವುದು ಒಳ್ಳೆಯ ಪುಸ್ತಕ, ಯಾವುದು ಸಾಧಾರಣ, ಯಾವುದು ಓದಲೇ ಬೇಕಾದ್ದು?
9. ಓದುವ ಅಭ್ಯಾಸ ಮತ್ತು ಸುಮ್ಮನೇ ಪುಸ್ತಕ ಕೊಂಡುಕೊಳ್ಳುತ್ತಾ ಹೋಗುವುದು - ಇವೆರಡರ ನಡುವಿನ ಅನುಪಾತ ಹೇಗಿರಬೇಕು?
10. ಕೊಂಡುಕೊಂಡ ಪುಸ್ತಕಗಳೇ ರಾಶಿ ಬಿದ್ದಿವೆ, ಯಾವಾಗ ಓದುವುದೋ ಏನೋ ಎನಿಸುತ್ತದೆಯೆ?
11. ಸಿಕ್ಕಾಪಟ್ಟೆ ಓದುತ್ತೇನೆ, ಆದರೆ ಕೊಂಡುಕೊಳ್ಳುವ ಅಗತ್ಯ ಬಿದ್ದಿಲ್ಲ. ಲೈಬ್ರರಿಗಳಿವೆಯಲ್ಲ ಎನ್ನುವವರಿದ್ದಾರೆಯೇ?
12. ನಿಮಗಿಷ್ಟವಾದ ಲೈಬ್ರರಿಯ ಬಗ್ಗೆ ಏನಾದರೂ ಹೇಳುವುದಿದೆಯೆ?
13. ವಾರಪತ್ರಿಕೆಗಳು, ಮಾಸಪತ್ರಿಕೆಗಳು, ಸಾಪ್ತಾಹಿಕ ಪುರವಣಿಗಳು, ಆನ್‌ಲೈನಿನಲ್ಲಿ ಅವರಿವರು ಓದು ಎಂದಿದ್ದು, ನಾವೇ ಆರಿಸಿಕೊಂಡಿದ್ದು - ಇವುಗಳ ನಡುವೆ ಪುಸ್ತಕಗಳಿಗೆಲ್ಲಿ ಅವಕಾಶ ಎನ್ನುತ್ತೀರಾ? ಹಾಗಿದ್ದರೆ ಅಂಥ ಓದು ಎಷ್ಟು ಸಮಯ ತೆಗೆದುಕೊಳ್ಳುತ್ತಿದೆ, ಎಷ್ಟು ಓದುತ್ತೀರಿ?
14. ನಿಮ್ಮ ಓದನ್ನು ನಿಮ್ಮ ಆಸಕ್ತಿಗನುಗುಣವಾಗಿ ವಿಭಾಗಿಸಲು ಸಾಧ್ಯವಿದೆಯೆ? ಕನ್ನಡದ ಕೃತಿಗಳು, ಕನ್ನಡಕ್ಕೆ ಅನುವಾದಿತ ಕೃತಿಗಳು, ಸಾಹಿತ್ಯ, ಕಾದಂಬರಿ, ಕಥಾಸಂಕಲನಗಳು ಅಥವಾ, ವೈಜ್ಞಾನಿಕ, ಸಾಮಾಜಿಕ, ಚಾರಿತ್ರಿಕ, ಪೌರಾಣಿಕ, ಆತ್ಮಚರಿತ್ರೆಗಳು - ಹೀಗೆ? ಅಂದರೆ ನಿಮ್ಮ ಓದು ಫೋಕಸ್ಡ್ (ಸಿಲೆಕ್ಟಿವ್) ಎನ್ನುತ್ತೀರಾ?
15. ನೀವು ಪುಸ್ತಕವೊಂದನ್ನು ಓದಲು/ಕೊಂಡುಕೊಳ್ಳಲು ಆರಿಸುವ ಕ್ರಮ ಯಾವುದು?
16. ನಿಮ್ಮ ಬಳಿಯಿರುವ ಅಥವಾ ನೀವು ಬಯಸಿದರೂ ಇನ್ನೂ ಓದದ ಎಲ್ಲಾ ಪುಸ್ತಕಗಳ ಒಂದು ಪಟ್ಟಿಯನ್ನು ತಯಾರಿಸಿ, ಅವುಗಳನ್ನು ಓದುವ ಒಂದು ಅನುಕ್ರಮಣಿಕೆಯನ್ನು ನೀವೇ ಸಿದ್ಧಪಡಿಸಿಕೊಂಡು, ಅದನ್ನು ಚಾಚೂತಪ್ಪದೆ ಓದಿ ಮುಗಿಸುವ ಒಂದು ಶಿಸ್ತನ್ನು ವಿಧಿಸಿಕೊಳ್ಳುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ಹಾಗೆ ಮಾಡುವಾಗ ನೀವು ಕೃತಿಕಾರ,ವಿಷಯ, ಪುಸ್ತಕದ ದಪ್ಪ - ಹೀಗೆ ಯಾವ ಮಾನದಂಡವನ್ನು ಬಳಸಲು ಬಯಸುತ್ತೀರಿ?
17. ನಿಮ್ಮ ಬುಕ್ ಶೆಲ್ಫ್‌ನಲ್ಲಿ ನೀವು ಪುಸ್ತಕಗಳನ್ನು ಜೋಡಿಸುವ, ಮರುಜೋಡಿಸುವ, ಒಪ್ಪಮಾಡಿಡುವ ಕ್ರಮದ ಬಗ್ಗೆ ಏನನಿಸುತ್ತದೆ?
18. ನಿಮ್ಮ ಬಳಿಯಿರುವ ಎಲ್ಲಾ ಪುಸ್ತಕಗಳನ್ನು ಓದಿ ಮುಗಿಸಲು ಸಾಧ್ಯ ಎನಿಸುತ್ತಾ? ನೀವು ಓದುವುದಿಲ್ಲ ಎನಿಸುವ ಪುಸ್ತಕಗಳೂ ನಿಮ್ಮಲ್ಲಿವೆಯೆ? ಯಾವತ್ತೂ ಓದಲಿಕ್ಕಾಗಲಿಕ್ಕಿಲ್ಲ ಎನಿಸುವ ಪುಸ್ತಕಗಳಿವೆಯೆ? ಇಟ್ಟುಕೊಳ್ಳಲು ಬಯಸದ ಪುಸ್ತಕಗಳಿವೆಯೆ?
19. ಮೊತ್ತಮೊದಲಿಗೆ ಇದನ್ನೇ ಓದಬೇಕು ಎಂದುಕೊಂಡ ಎಷ್ಟು ಪುಸ್ತಕಗಳಿವೆ ನಿಮ್ಮ ಬಳಿ?
20. ಬದುಕಿನಲ್ಲಿ ಓದುವುದಕ್ಕೇ ಪ್ರಾಶಸ್ತ್ಯ ಕೊಡುವುದಾದರೆ, ಯಾವೆಲ್ಲ ಸಂಗತಿಗಳನ್ನು ನೀವು ಕಳೆದುಕೊಳ್ಳಬೇಕಾಗುತ್ತದೆ?
21. ಓದುವುದು ಒಂದು ಬಗೆಯ ಪಲಾಯನವಾದ ಎನ್ನುವುದನ್ನು ಒಪ್ಪುತ್ತೀರಾ?
22. ತಿಂಗಳಿಗೆ ಎಷ್ಟು ಪುಸ್ತಕ (ಪುಟಗಳು) ಓದುವುದು ಸಾಧ್ಯ ನಿಮಗೆ?
23. ಅಷ್ಟಕ್ಕೂ ನೀವು ಓದುವುದರ ಹಿಂದಿನ ಉದ್ದೇಶವಾದರೂ ಏನು?
24. ಒಂದು ಪುಸ್ತಕ ಓದಿ ಮುಗಿಸಿದ ನಂತರ ಏನು ಮಾಡುತ್ತೀರಿ? ಅದರ ಬಗ್ಗೆ ಯೋಚಿಸುತ್ತೀರಾ, ನೋಟ್ಸ್ ಮಾಡಿಕೊಳ್ಳುತ್ತೀರಾ, ಬರೆಯುತ್ತೀರಾ ಅಥವಾ ನಿಮ್ಮ ಯಾವುದೇ ಅಧ್ಯಯನ ಇತ್ಯಾದಿಗಳಿಗೆ ಅದು ಸಹಕಾರಿಯಾಗುತ್ತದೆಯೆ?
25. ಪುಸ್ತಕವನ್ನೇ ಓದದಿದ್ದರೆ ಏನಾಗುತ್ತದೆ?
my an೧.ಓದು ಖುಷಿ ಕೊಡುವಾಗ
೨. ಕಳೆದು ಹೋಗುವ ಭಯ. ಅಥವಾ ಬದಲಾದ ಜೀವನ ಶೈಲಿ
೩. ಕೊನೆಯ ಪುಟ ತಿರುಗಿಸಿದಾಗ 'ಛೇ, ಮುಗಿದೇ ಹೋಯ್ತಲ್ಲಾ ಅನ್ನಿಸಿದಾಗ'
೪. ೪೦ ಪುಟಗಳಾದರೂ ಕಷ್ಟಪಟ್ಟು ಮುಂದುವರೆಸಬೇಕಾಗಿ ಬಂದಾಗ...
೫. ಯಾರೋ ಹೇಳಿ ಅಥವಾ ಒಳ್ಳೆ ಸಾಹಿತ್ಯ ಅಂತ ರಿವ್ಯೂ ಬಂದಿದೆ ಅಂತ ದುಡ್ಡು ಕೊಟ್ಟು ತಂದರೂ ಅದರಲ್ಲಿದ್ದದ್ದು ಮೆದುಳಿಗೆ ಹತ್ತದಾಗ
೬. ಇಷ್ಟಪಟ್ಟಲ್ಲದೆ , ಕಷ್ಟಪಟ್ಟು ಓದಬೇಕಾಗಿ ಬಂದಾಗ
೭.ಕಣ್ಣಿಗೆ ಕಟ್ಟಿದ ಪಾತ್ರ ಚಿತ್ರಣ ಮತ್ತು ಸಹಜವೆನಿಸುವ ಸುಲಲಿತ ಶೈಲಿ ಇದ್ದಾಗ
೮.ಎರಡನೇ ಸಲ ಓದಲು ತೆಗೆದಾಗ ಖುಷಿಕೊಡುವುದು ಒಳ್ಳೆಯ ಪುಸ್ತಕ, ಲೈಬ್ರರಿಯಿಂದ ಕಡ ತಂದರೆ ಆಗುತ್ತಿತ್ತು ಎನ್ನುವುದು ಮಧ್ಯಮ, ಯಾಕಪ್ಪಾ ಇಲ್ಲಿ ಸಿಕ್ಕಿಬಿದ್ದೆ ಅನಿಸುವುದು ಅಧಮ!
೯.ಖಂಡಿತಾ ೧:೧..ಇಲ್ಲವಾದರೆ ಉಪಯೋಗವೇನು?
೧೦.ಕೆಲವೊಮ್ಮೆ.ಅದರಲ್ಲೂ ಇಂಗ್ಲೀಷ್ ಪುಸ್ತಕ ನೋಡುವಾಗ
೧೧.ಇಷ್ಟವಾದದ್ದು ಸಂಗ್ರಹಯೋಗ್ಯ ಅಂತ ಹಟ ಹಿಡಿಯುವ ಮನಸಿದ್ದರೆ ಮನೇಲೇ ಲೈಬ್ರರಿ
೧೨.ತುಂಬಾ ಇದೆ..ನಾನು ಹೋದ ಪುತ್ತೂರು ವಿವೇಕಾನಂದ ಕಾಲೇಜಿನ ಲೈಬ್ರರಿ, ವಿಟ್ಲ, ಮಂಗಳೂರು,ಹಾಸನ,ಸುರತ್ಕಲ್ ನ ಸರಕಾರಿ ಲೈಬ್ರರಿಗಳಲ್ಲಿ ನಾನು ಯಾವುದು ಅಮೂಲ್ಯ ಅಂತ ತಿಳಿದ ಪುಸ್ತಕಗಳು ಓದುವವರಿಲ್ಲದೆ ಧೂಳು ಹಿಡಿದು ಕೊನೆಗೊಂದು ದಿನ ಗೋಣಿ ಚೀಲದೊಳಗೆ ರದ್ದಿ ಅಂಗಡಿಗೆ ಹೋಗುವುದು ನೋಡುವಾಗ ಬೇಸರವಾಗುತ್ತದೆ.
೧೩.ಮ್ಯಾಗಜಿನ್ಸ್ ಓದಲು ೧-೨ ಗಂಟೆ ಸಾಕು..ಆದರೆ ಪುಸ್ತಕ ಓದುವ ಮಜವೇ ಬೇರೆ!
೧೪.ಇಲ್ಲ.ಮೊದಲು ಬರೇ ಕಾದಂಬರಿ ಓದುತ್ತಿದ್ದ ನನಗೆ ಈಗ ಆತ್ಮಕಥೆ,ವಿಮರ್ಶಾ ಬರಹಗಳ ರುಚಿ ಹತ್ತಿದೆ..ಕವಿತೆ ಕಬ್ಬಿಣದ ಕಡಲೆ.
೧೫. ಲೇಖಕರು,ವಸ್ತು
೧೬.ಈಗೀಗ ಒಂದು ಸಲಕ್ಕೆ ಒಬ್ಬ ಲೇಖಕನ ಎಲ್ಲಾ ಪುಸ್ತಕ ಮುಗಿಸುವ ಪರಿಪಾಠ...ಕನ್ನಡದಲ್ಲಿ ಮಹತ್ವದ ಲೇಖಕರನ್ನ ಚಿಕ್ಕದಿಂದ ಓದಿದ ಕಾರಣ ಈಗ ಪಟ್ಟು ಹಿಡಿದು ಇಂಗ್ಲೀಷ್ ಓದುವುದು..ಆದರೂ ಹೊಸ ಪುಸ್ತಕ ಬಂದರೆ ಮೊದಲ ಆದ್ಯತೆ ಅದಕ್ಕೇ!
೧೭.ಒಂದೊಂದು ಪ್ರಕಾರಕ್ಕೆ ಅದರ ಸ್ಥಾನ.ಆದರೆ ಹುಡುಕಾಡುವ ಖುಷಿಯೇ ಬೇರೆ!
೧೮.ನನ್ನ ಬಳಿಯ ಎಲ್ಲಾ ಕನ್ನಡ ಪುಸ್ತಕ ಮುಗಿಸಿದ್ದೇನೆ.ಓದಲಸಾಧ್ಯ ಅನ್ನುವ ಪುಸ್ತಕಗಳು ಇಂಗ್ಲೀಷ್ ನ ಕೆಲವಿವೆ..ಈಗ ಅದೇ ಡೆಡ್ ಲೈನ್ ಮುಗಿಸುವ ಆತುರ.
೧೯.ಹೊಸ ಪುಸ್ತಕ ಕೊಂಡ ಕೂಡಲೆ ಓದ ಹೊರಡುವುದರಿಂದ ಅಂತಹ ಪ್ರಶ್ನೆ ಬರುವುದಿಲ್ಲ.
೨೦.ಎಲ್ಲದಕ್ಕೂ ಅದರ ಸಮಯ ಕೊಟ್ಟರೆ ಮಾತ್ರ ನಿರಾತಂಕದ ಓದು ಸಾಧ್ಯ!
೨೧.ಅಲ್ಲ.ಅದು ಖುಷಿ.
೨೨.ಕನ್ನಡವಾದರೆ ೧೫-೧೬ ಇಂಗ್ಲೀಷ್ ಆದರೆ ೪-೫
೨೩.ಖುಷಿ ಕೊಡುತ್ತದೆ... ನನ್ನದೇ ಲೋಕದಲ್ಲಿ ವಿಹರಿಸುವ ಆಹ್ಲಾದ.
೨೪.ಸಾಧ್ಯವಾದರೆ ಬ್ಲಾಗ್ ನಲ್ಲಿ ಬರೆಯುತ್ತೇನೆ.ಇಲ್ಲ ಅದೇ ಪುಸ್ತಕದ ಬಗ್ಗೆ ವಸ್ತುವಿನ ಬಗ್ಗೆ ಹುಡುಕುತ್ತೇನೆ.ಮುಂದಿನ ಪುಸ್ತಕದ ಕಡೆ ಹೋಗುತ್ತೇನೆ.
೨೫. ಅಂತಹ ಬದುಕು ನನಗಂತೂ ಬೇಡ!