Wednesday, November 5, 2014

ಡಲ್ಲಾಸ್ ಬೈಯರ್ಸ್ ಕ್ಲಬ್:ಸಾವೆಂಬ ಕುದುರೆಯ ಮೇಲಿನ ಪಯಣ

ಅದು ೧೯೮೫ರ ಸಮಯ. ಡಲ್ಲಾಸ್ ನ ಇಲೆಕ್ಟ್ರೀಷಿಯನ್ ರಾನ್ ವುಡ್ ರೂಫ಼್ ತನ್ನ ಎಂದಿನ ಹ್ಯಾಪಿ ಗೋ ಲಕ್ಕಿ ಜೀವನದ, ಗೂಳಿ ಕಾಳಗ, ಸ್ವಚ್ಚಂಧ ಕಾಮದಲ್ಲಿ ಮುಳುಗಿ ತೇಲುತ್ತಿರುವಾಗ, ಅನಾರೋಗ್ಯಕ್ಕೆಂದು ಪರೀಕ್ಷೆಗೊಳಪಟ್ಟವನಿಗೆ ತಾನು ಹೆಚ್.ಐ.ವಿ. ಪಾಸಿಟಿವ್ ಎಂದು ತಿಳಿಯುತ್ತದೆ. ಡಾಕ್ಟರ್ ಅವನಿಗೆ ಬದುಕಿರಲು ಮೂವತ್ತು ದಿನದ ಗಡುವು ನೀಡುತ್ತಾರೆ. ಆರಂಭದಲ್ಲಿ ಅವನಿಗೆ ಒಪ್ಪಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಕುಟುಂಬ,ಗೆಳೆಯರು ಎಲ್ಲಾ ದೂರ ಸರಿದು, ಇದ್ದ ಕೆಲಸವನ್ನೂ ಕಳಕೊಂಡು,ಮನೆಯಿಂದ ಹೊರಹಾಕಲ್ಪಟ್ಟವನಿಗೆ, ಆಸ್ಪತ್ರೆಯ ಡಾಕ್ಟರ್ ಇವ್ ಸಾಕ್ಸ್ ಹೊಸದಾಗಿ ಆಗ ಪರೀಕ್ಷೆ ಮಾಡುತ್ತಿದ್ದ ಡ್ರಗ್ ಎ.ಜ಼ೆ.ಟಿ. ಪರಿಚಯಿಸುತ್ತಾಳೆ. ಆದರೆ ಅವನ ಸ್ಥಿತಿ ಬಹಳ ಗಂಭೀರವಿದ್ದದರಿಂದ ಅವನಿಗೆ ಕೊಡಲು ನಿರಾಕರಿಸುತ್ತಾಳೆ.ಆಸ್ಪತ್ರೆಯ ನರ್ಸ್ ಒಬ್ಬನನ್ನು ಓಲೈಸಿಕೊಂಡು ತನಗೆ ಆ ಡ್ರಗ್ ತರಿಸಿಕೊಳ್ಳುವ ರಾನ್ ನ ಆರೋಗ್ಯ ಹದೆಗೆಡುತ್ತದೆ. ಆಸ್ಪತ್ರೆಯಲ್ಲೇ ಅವನಿಗೆ ರಯೋನ್ ಎಂಬ ಉಭಯಲಿಂಗಿಯ ಪರಿಚಯವಾಗುತ್ತದೆ. ತನ್ನ ಬಳಿಯ ಮಾತ್ರೆಗಳ ಸ್ಟಾಕ್ ಮುಗಿದ ಬಳಿಕ ಇನ್ನೂ ಅದನ್ನು ಪಡೆಯಲು ಮೆಕ್ಸಿಕೋ ಗೆ ಹೋಗಿ ಡಾಕ್ಟರ್ ವಾಸ್ ಎಂಬವರ ಭೇಟಿ ಮಾಡುವ ರಾನ್ ಗೆ ತಾನು ಬಳಸುವ ಡ್ರಗ್ ನ ಸೈಡ್ ಇಫ಼ೆಕ್ಟ್ ಗೊತ್ತಾಗಿ ಆಘಾತವಾಗುತ್ತದೆ.
ಡಾಕ್ಟರ್ ವಾಸ್ ಅವನಿಗೆ ಡಿ.ಡಿ.ಸಿ. ಮತ್ತು ಪೆಪ್ಟೈಡ್.ಟಿ. ಕೊಡುತ್ತಾರೆ. ಅದು ಅಮೇರಿಕದಲ್ಲಿ ಎಫ಼್.ಡಿ.ಎ. ಅನುಮತಿ ಪಡೆಯದ್ದರಿಂದ ಅದನ್ನು ಕದ್ದು ಸಾಗಿಸುವ ಕೆಲಸಕ್ಕೆ ಕೈ ಹಾಕುವ ರಾನ್, ಅಮೇರಿಕದ ಬೀದಿಯಲ್ಲಿ ಅದರ ಮಾರಾಟಕ್ಕೆ ಇಳಿಯುತ್ತಾನೆ.ಅವನೊಂದಿಗೆ ಉಭಯಲಿಂಗಿ ರೊಯನ್ ಜೊತೆ ಸೇರುತ್ತಾನೆ. ಇತ್ತ ಆಸ್ಪತ್ರೆಯಲ್ಲಿ ಎ.ಜ಼ೆ.ಟಿ.ಯ ಅಡ್ಡ ಪರಿಣಾಮಗಳ ಅರಿವಿದ್ದರೂ ತನ್ನ ಮೇಲಾಧಿಕಾರಿ ಡಾಕ್ಟರ್ ಸೆವರ್ಡ್ ನ ಆಣತಿಯಂತೆ ಇವ ಸಾಕಿನ್ಸ್ ತನ್ನ ರೋಗಿಗಳಿಗೆ ಅದನ್ನು ಕೊಡುವುದನ್ನು ಮುಂದುವರೆಸುತ್ತಾಳೆ.
ತನ್ನ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದದ್ದರಿಂದ ರಾನ್ ,ತನ್ನ ಮದ್ದನ್ನು ಹೊರದೇಶದಿಂದ ತಂದು, ಅಮೇರಿಕದಲ್ಲಿ ಮಾರಾಟ ಮಾಡುವ ವಹಿವಾಟಿಗೆ ಕೈ ಹಾಕುತ್ತಾನೆ. ೪೦೦ ಡಾಲರ್ ಕೊಟ್ಟು ಸದಸ್ಯನಾಗುವ ಅವನ 'ಡಲ್ಲಾಸ್ ಬೈಯರ್ಸ್ ಕ್ಲಬ್' ಜನಪ್ರಿಯವಾಗುತ್ತದೆ. ಆದರೆ ಆಸ್ಪತ್ರೆಯ ಮತ್ತು ಡ್ರಗ್ ಕಂಟ್ರೋಲ್ ಬೋರ್ಡ್ ನ ಕಾಕ ದೃಷ್ಟಿ ಅವನ ಮೇಲೆ ಬಿದ್ದು, ಹೊಸ ಕಾನೂನು ಬೇರೆ ಜಾರಿಗೆ ಬಂದು ಅವನ ವಹಿವಾಟಿಗೆ ಹೊಡೆತ ಬೀಳುತ್ತದೆ. ಅವನ ಉಭಯಲಿಂಗಿ ಗೆಳೆಯನ ಸಾವು ಅವನನ್ನ ಜರ್ಝರಿತನನ್ನಾಗಿಸುತ್ತದೆ. ಹಣ ಮಾಡುವ ಉದ್ದೇಶ ಹಿಂದೆ ಸರಿದು , ಸಾಧ್ಯವಾದಷ್ಟು ಹೆ.ಐ.ವಿ. ಪೀಡಿತರಿಗೆ ಸಹಾಯ ಮಾಡಲು ಶುರು ಮಾಡುತ್ತಾನೆ. ೧೯೮೭ ರಲ್ಲಿ ಎಫ಼್.ಡಿ.ಎ ಮೇಲೆ ಕೇಸು ಹಾಕಿ ಗೆಲ್ಲುತ್ತಾನೆ.
ತನಗೆ ಹೆ.ಐ.ವಿ. ಪತ್ತೆಯಾದ ಏಳು ವರ್ಷಗಳ ನಂತರ ೧೯೯೨ ಸಾವನ್ನಪ್ಪುತ್ತಾನೆ. ಇದಿಷ್ಟು ಜೀನ್ ಮಾರ್ಕ್ ವಾಲ್ಲಿ ನಿರ್ದೇಶಿಸಿದ ೨೦೧೩ ರಲ್ಲಿ ಬಿಡಿಗಡೆಯಾದ ' ಡಲ್ಲಾಸ್ ಬಯರ್ಸ್ ಕ್ಲಬ್' ನ ಸ್ಥೂಲ ಕತೆ.
ಆದರೆ ಇಷ್ಟೇನೇ?
ಮುಖ್ಯ ಪಾತ್ರದಲ್ಲಿ ನಟಿಸಿದ ಮ್ಯಾತ್ಯೂ ಮೆಕ್ ಕಾನಗೆ ಯ ಅಭಿನಯವಂತೂ ಅಧ್ಭುತ. ಆವರ ಪಾತ್ರವಾದ ರಾನ ನ ವಿಲಾಸಿ ಜೀವನ, ರೋಗ ದೃಡಪಟ್ಟ ಮೇಲಿನ ಯಾತನೆ, ಮನುಷ್ಯ ಸಂಬಂಧಗಳು, ಹತಾಶೆ, ಹಪಾಹಪಿ, ಖುಷಿ ಹೀಗೆ ಹಲವು ಭಾವಗಳ ಸಮ್ಮಿಶ್ರಣದ ಈ ಪಾತ್ರಕ್ಕೆ ಅರ್ಹವಾಗೇ ಅತ್ಯುತ್ತಮ ನಟ, ಉಭಯಲಿಂಗಿಯ ರೊಯನ್ ಪಾತ್ರದಲ್ಲಿ ನಟಿಸಿದ  ಜರೆಡ್ ಲೆಟೊ ಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದೊರೆಯಿತು.
೮೦ ರ ದಶಕದಲ್ಲಿ ಆಗಿನ್ನು ಹೆ.ಐ.ವಿ. ಪೀಡಿತರಿಗೆ ದೊರೆಯುತ್ತಿದ್ದ ಸಾಮಾಜಿಕ ಅಸ್ಪೃಶ್ಯ ಅನಾದರ, ನಾಗರೀಕ ಸಮಾಜ ಸಲಿಂಗ ಕಾಮಿಗಳ ನಡೆಸುತ್ತಿದ್ದ ರೀತಿ ಹೀಗೆ ಹಲ ಕೆಲವು ಚಿತ್ರಗಳ ಮೂಲಕ ತಟ್ಟುವ ಈ ಸಿನಿಮಾ ಮತ್ತೆ ನೋಡಲೇ ಬೇಕಾದ್ದಾಗಿ ಹಾರ್ಡ್ ಡಿಸ್ಕಲ್ಲಿ ತನ್ನನ್ನು ಸೇವ್ ಮಾಡಿಕೊಂಡಿತು.

Wednesday, July 30, 2014

'ಯಾನ'ದ ಯಾನದಲ್ಲಿ

ಪ್ರೀತಿಯ ಭೈರಪ್ಪನವರಿಗೆ,
 ಪುಸ್ತಕವೊಂದು ಬಿಡುಗಡೆಯಾಗುವ ಮೊದಲೇ ತುದಿಗಾಲಲ್ಲಿ ನಿಂತು, ಖರೀದಿಸಿದ ಕೂಡಲೇ ಬಿಸಿ ಬಿಸಿ ಯಾಗಿ ಓದಿ ಅಭಿಪ್ರಾಯ ದಾಖಲಿಸುವ ಪದ್ಧತಿಯೂ, ಹಾಗೆ ಕಾದು ಕೊಳ್ಳುವಂತೆ ಮಾಡುವ ಲೇಖಕರೂ ಕನ್ನಡಕ್ಕೆ ಹೊಸದು. ನನ್ನ ಅಥವಾ ನನ್ನ ಸಮಕಾಲೀನರಿಗೆಲ್ಲ ಹ್ಯಾರಿ ಪಾಟರ್ ಸರಣಿಯ ಪುಸ್ತಕಗಳ ದಾಖಲೆ ಮಾರಾಟದ ಕಥೆ ನೋಡಿ, ಕೇಳಿ ಗೊತ್ತಷ್ಟೆ.  ಕನ್ನಡದ ಇನ್ನೂ ಒಂದು ಪೂರ್ವಾಗ್ರಹ ಪೀಡಿತ ಅಭಿಪ್ರಾಯ ಏನೆಂದರೆ ಅಧಿಕ ಮಾರಾಟವಾಗುವ ಪುಸ್ತಕಗಳು ಸಾಂಸ್ಕೃತಿಕವಾಗಿ ಮಹತ್ವದಲ್ಲ ಎಂದು. ಇದು ಯಾರು ಹುಟ್ಟು ಹಾಕಿದ್ದು ಹೇಗೆ ಬೆಳೆದು ಬಂತು ಅನ್ನುವುದು ಇಲ್ಲೆ ಅನಗತ್ಯ;
ಈಗಷ್ಟೆ ಮುಗಿಸಿದ ನಿಮ್ಮ ಹೊಸ ಕಾದಂಬರಿ 'ಯಾನ'ದ ಕಥಾ ಪ್ರಪಂಚ ನಿಮ್ಮ ಓದುಗ ವರ್ಗಕ್ಕೆ ಅಪರಿಚಿತವೇನಲ್ಲ. ದಶಕಗಳಿಂದ ನಿಮ್ಮ ಕಾದಂಬರಿಗಳ ಪಾತ್ರ ಪ್ರಪಂಚದಲ್ಲಿ ಮುಳುಗೇಳುತ್ತಿದ್ದ  ನಮಗೆಲ್ಲಾ ಇವರುಗಳು ಮತ್ತೆ ಮತ್ತೆ ಬೇರೆ ಬೇರೆ ರೂಪದಲ್ಲಿ ಎದುರಾಗುವವರೇ;
ಕಥೆಯನ್ನು ಹೇಳುವುದು ಈಗಂತೂ ತೀರಾ ಅನುಚಿತ, ಅದು ಓದಲು ಕಾಯುವವರ ರಸಭಂಗ ಮಾಡುವ, ವಿಕೃತ ಕೆಲಸ. ಆದರೆ ನಿಮ್ಮ ಅಂಚುವಿನ ಅಮೃತಾ, ದೂರ ಸರಿದರು ವಿನ ನಾಯಕಿ, ದಾಟುವಿನ ಸತ್ಯ ಇಲ್ಲಿ ಬೇರೆ ಬೇರೆ ಘಟ್ಟಗಳಲ್ಲಿ ನಾಯಕಿಯಾಗಿ ಕಾಣುತ್ತಾರೆ, ನಾಯಕ ನು ನಿರಾಕರಣ, ತಂತು, ನೆಲೆ ಯವನೇ ಹಿನ್ನೆಲೆಯ ಕಥಾ ಭಿತ್ತಿ ಮಾತ್ರ ಹೊಸದು. ಅರ್ಥರ್ ಸಿ ಕಾರ್ಕನ ಮಾದರಿಯ ಮೈ ನವಿರೇಳಿಸುವ ವೈಜ್ನಾನಿಕ ಕಥೆಯ ಹುಡುಕಿ ಹೊರಟವರಿಗೆ ಮಾತ್ರ ನಿರಾಶೆ ಕಟ್ಟಿಟ್ಟ ಬುತ್ತಿ. ಎಂದಿನ ಭೈರಪ್ಪರಾಗಿ ಮನುಷ್ಯನ ಅಂತರ್ಮುಖತೆ, ಪ್ರಜ್ನಾ ಪ್ರವಾಹದ ತಂತ್ರ ಬಳಕೆಯಾಗಿದೆ;  ಕಾಲವು ಉಯ್ಯಾಲೆಯಂತೆ ಭೂತದಿಂದ ವರ್ತಮಾನಕ್ಕೂ ಮತ್ತೆ ಭೂತಕ್ಕೂ ತುಯ್ಯುತ್ತದೆ. ಸಂಧಿಗ್ದಗಳು ,ಅಂತರ್ಮಥನಗಳು ಅವೇ ,ರೀತಿ ಬೇರೆ.
ಇವೆಲ್ಲಾ ಮೊದಲ ಓದಿಗೆ ದಕ್ಕಿದವು. ತಾಳ್ಮೆಯಿಂದ ಸವಿಯುತ್ತಾ ಇನ್ನೊಮ್ಮೆ ಓದಿದರೆ ( ಅಲ್ಲಿ ಆತುರವಿಲ್ಲ, ನಾಲಿಗೆಯಲ್ಲಿ ಕರಗಿದ ಚಾಕಲೇಟ್ ಉಲಿಸಿಹೋದ ಸ್ವಾದದ ಸಿಹಿ ನೆನಪು)_ ಬಹುಶ ಇನ್ನಷ್ಟು ದಕ್ಕಬಹುದು.
ಆದರೂ ನಿಮ್ಮ ದೊಡ್ಡ ಅಭಿಮಾನಿಯಾಗಿದ್ದರೂ ಕವಲು ವಿನಲ್ಲಿ ಹ್ಯಾಪ್ಪಿ ಎಂಡಿಂಗ್ ಮತ್ತು ಮಹಿಳೆಯರನ್ನ ತೀರಾ ಕೆಟ್ಟದಾಗಿ ಚಿತ್ರಿಸಿದ್ದು ಸರಿ ಕಂಡಿರಲಿಲ್ಲ, ನಿಮ್ಮ ಇತ್ತೀಚಿನ ಕೃತಿಗಳಲ್ಲಿ ನೀವು ಪುರುಷ ಪಕ್ಷಪಾತಿಯೋ ಎಂಬ ಅನುಮಾನ ,ಗೊಂದಲಗಳು ಕಾಡುತ್ತವೆ. ಇವೆಲ್ಲಾ ಚಿಲ್ಲರೆ ಸಂಗತಿಗಳು. ಒಂದೊಳ್ಳೆಯ ಪುಸ್ತಕ ಓದಿದ ಮೇಲೂ ಕಾಡುತ್ತದೆ. ಆ ಅನುಭವಕ್ಕಂತೂ ಮೋಸವಿಲ್ಲ. ನಮಸ್ಕಾರ.

Saturday, July 26, 2014

ಬರೆಯಲಾರದ ಕಷ್ಟ

ಬಸ್ಸಲ್ಲಿ  ಹೀಗೆ ಕಿಟಕಿಗೆ ತಲೆಯಾನಿಸಿಕೊಂಡು ಹೊರಗೆ ನೋಡುತ್ತಾ ನಿದ್ದೆಗೆ ಜಾರುವಾಗ ಎಂದೂ ಬರೆಯಲಾಗದ ಕತೆಯ ಸಾಲುಗಳು ಒತ್ತರಿಸಿ ಬರುತ್ತವೆ. ಅದನ್ನೇ ಟೈಪಿಸಲೋ ಬರೆಯಲೋ ಹೊರಟರೆ ದಿಕ್ಕಾಪಾಲಾಗಿ ಓಡುತ್ತವೆ. ಬಹುಶಃ ಅದು ಬೇಡುವ ಅನುಭವದ ದ್ರವ್ಯಕ್ಕೂ, ತಾಳ್ಮೆಗೂ ನಾನಿನ್ನೂ ಬಲಿತಿಲ್ಲ ಅಂತ ಸುಳ್ಳೇ ಸಮಾಧಾನ!
ನೆನಪು ಹಿಂಜಿ ಹತ್ತಿಯಂತೆ ತೆಳುವಾದರೂ ಮತ್ತೆ ಮತ್ತೆ ಅದೇ ಓಣಿಗಳಲ್ಲಿ ನುಗ್ಗುವ ಮನಸಿನ ಧಾವಂತದ ಅರ್ಥವೇನು ಅಂತ ಗೊತ್ತಿಲ್ಲ. ' ನಾನು ಚಿಕ್ಕೋನಿದ್ದಾಗ ' ಅಂತ ಶುರುವಾಗುವ ಎಲ್ಲ ಕತೆಗಳೂ ಮತ್ತದೇ ಕ್ಲೀಷೆಯಾಗಿ ಹೇಳುವವನಿಗೇ ಬೇಸರವಾಗಿಬಿಡುತ್ತದೆ. ಹೊಸ ಅನುಭವಗಳಿಗೆ ತೆರೆದುಕೊಳ್ಳಲು 'ಕಂಫರ್ಟ್ ಝೋನ್' ಬಿಟ್ಟು ಬರುವ, ಉದಾಸೀನದ ಮೂಟೆಯ ಇಳಿಸುವ ಅನಿವಾರ್ಯತೆ ಇರುವ ಕಾರಣ ಅದು ರಿಸ್ಕ್.
ಹೀಗೆ ಯಾವತ್ತಾದರು ಲಹರಿಯ ಗುಂಗಲ್ಲಿ ಬಂದಷ್ಟು  ಬರೆದರೆ ಬರೆಯಲು ಸುಲಭದಲ್ಲಿ ಸಿಕ್ಕಿದರೇ ಅದೇ ಪುಣ್ಯ, ನಡು ನಡುವೆ ಈಗಿನ ಗೀಚುವಿಕೆ ಮುಂದೆಂದೋ ಯಾಕಪ್ಪಾ ಬರೆದೆ ಎಂಬ ಹಳಹಳಕೆಯಾಗಬಾರದು ಅಂತಲೇ ಡಿಲೀಟಾಗಿ ಹೋಗುತ್ತೆ.
ಒಂದಿಷ್ಟು ಹಾರ್ಮೋನುಗಳ ಆಟಾಟೋಪಕ್ಕೆ ಏನೆಲ್ಲ ಸಹಿಸಬೇಕು ಅಂದರೇ ದಿಗಿಲಾಗುತ್ತೆ!

Wednesday, July 16, 2014

ಅನುವಾದಗಳ ಕತೆ!

ನಮ್ಮ ಕನ್ನಡ ಸಾಹಿತ್ಯದ ದುರಂತ ಎಂದರೆ ಹೊಸತಕ್ಕೆ ತೆರೆದುಕೊಳ್ಳದಿರುವುದು ಮತ್ತು ಮಾಹಿತಿಯ ಕೊರತೆ. ಇಡೀ ಜಗತ್ತೇ ಬರಿದೆ ಪುಸ್ತಕಗಳ ಬಿಟ್ಟು ಕಡಿಮೆ ಅವಧಿಯಲ್ಲಿ ತಲುಪುವ, ಕಡಿಮೆ ಜಾಗ ಹೊಂದುವ ಇ ಬುಕ್ ಗಳಿಗೆ ಬದಲಾಗುತ್ತಿರುವ ಗಳಿಗೆಯಲ್ಲಿ ನಾವು ಇನ್ನೂ ಅಪ್ ಡೇಟ್ ಆಗೇ ಇಲ್ಲ. ಸರಿಯಾಗಿ ಹುಡುಕಿದರೆ ಕೆಲವು ನೂರು ಕನ್ನಡ ಪುಸ್ತಕಗಳು ಸಿಗಬಹುದು ಅಷ್ಟೇ! ಡಿಜಿಟಲ್ ಲೈಬ್ರರಿ ಆಫ಼್ ಇಂಡಿಯದಲ್ಲಿ ಹುಡುಕಿದರೆ ಅದೇ ಸಹ್ರಸನಾಮಾವಳಿಗಳು ಇತ್ಯಾದಿಗಳ ಸಾಲೇ ಇವೆ. ಅವೂ ಹಳೆಯ ಓಬೀರಾಯನ ಕಾಲದವು! ವಸುಧೇಂದ್ರರ ಎರಡೋ ಮೂರೋ ಪುಸ್ತಕ ಬಂದದ್ದು ಬಿಟ್ಟರೆ ಮತ್ತೆಲ್ಲ ಹವ್ಯಾಸಿಗಳ ಪ್ರಯತ್ನವೇ!
ಇನ್ನು , ಮಾಹಿತಿಯ ಬಗ್ಗೆ ನಮಗೆ ಜಗತ್ತಿನ ಅದ್ಭುತ ಕೃತಿಗಳನ್ನೆಲ್ಲ ಅವವೇ ಭಾಷೆಯಲ್ಲಿ ಓದುವುದು ಕಷ್ಟವೇ; ಹಾಗಂತ ಕನ್ನಡ ಅನುವಾದಗಳ ಮಾಹಿತಿಯೂ ಇರುವುದಿಲ್ಲ, (ಹೊಸತು ಅಂತ ಒಂದು ಪೇಪರ್ ಬರುತ್ತೆ ಆದರೆ ಅದರ ವಿಸ್ತಾರ ಅಷ್ಟಾಗಿಲ್ಲ) ನನಗೀಗಲೂ
ನೆನಪಿದೆ. ಕೆಲ ವರ್ಷಗಳ ಹಿಂದೆ ಯಾವುದೋ ಪುಸ್ತಕ ಪ್ರದರ್ಶನದಲ್ಲಿ ಯಾವುದೋ ಪುಸ್ತಕ ಹುಡುಕುತ್ತಿದ್ದವನಿಗೆ ಅಕಸ್ಮಾತ್ ಎಂಬಂತೆ ಪ್ರಸನ್ನ ಅವರ ಮಾರ್ಕ್ವೇಝ್ ಕಾದಂಬರಿ ವನ್ ಹಂಡ್ರೆಡ್ ಇಯರ್ಸ್ ಆಫ಼್ ಸಾಲಿಟ್ಯೂಡ್ ನ ಅನುವಾದ ಒಂದು ನೂರು ವರ್ಷಗಳ ಏಕಾಂತ ಕಣ್ಣಿಗೆ ಬಿದ್ದು ಆದ ಖುಷಿ(ಅದನ್ನ ಇಂಗ್ಲೀಷಲ್ಲಿ ಓದಿ ಆಗ ನಾನ್ಯಾಕೆ ಖುಷಿ ಪಟ್ಟೆ ಅಂತ ಅರ್ಥ ಆಗುತ್ತೆ) .ಹಾಗೆ ಪ್ರೈಡ್ ಯಂಡ್ ಪ್ರಿಜ್ಯುಡೀಸ್ ದೇಜಗೌ ಅವರು ಹಮ್ಮು ಬಿಮ್ಮು ಅಂತ, ಕ್ರಾನಿಕಲ್ಸ್ ಆಫ಼್ ಎ ಡೆತ್ ಫ಼ೋರ್ ಟೋಲ್ಡ್ ಎಲ್.ಎಸ್. ಶೇಷಗಿರಿರಾಯರು ಒಂದು ಸಾವಿನ ವೃತ್ತಾಂತ ಅಂತ, ಲವ್ ಇನ್ ದ ಟೈಮ್ ಆಫ಼್ ಕಾಲರಾ ವನ್ನ ರವಿ ಬೆಳಗೆರೆ ಮಾಂಡೋವಿ ಅಂತ, ಓ.ಎಲ್.ನಾಗಭೂಷಣ ಸ್ವಾಮಿಯವರು ವಾರ್ ಯಾಂಡ್ ಪೀಸ್ ಅನ್ನು ಯುದ್ಧ ಮತ್ತು ಶಾಂತಿ ಅಂತ, ಥೆ ಗಾಡ್ ಫ಼ಾದರ್ ಅನ್ನು ಎಮ್.ವಿ.ನಾಗರಾಜ ರಾವ್ ಮತ್ತು ರವಿ ಬೆಳಗೆರೆ ಅದೇ ಹೆಸರಲ್ಲಿ ಕನ್ನಡಕ್ಕೆ ತಂದಿದ್ದಾರೆ ಅಂತ, ಗಾನ್ ವಿತ್ ದ ವಿಂಡ್, ಗುಡ್ ಅರ್ತ್ ,ಓಲ್ಡ್ ಮ್ಯಾನ್ ಯಾಂಡ್ ಸೀ,ಅನ್ನಾ ಕರೇನಿನಾ ದ ಟ್ರಯಲ್, ಮೆಟಾಮೊರ್ಫ಼ೋಸಿಸ್  ಹೀಗೆ ಜಗತ್ತಿನ ಅತ್ಯುತ್ತಮ ಕೃತಿಗಳೆಲ್ಲಾ ಈಗಾಗಲೇ ಕನ್ನಡಕ್ಕೆ ಬಂದಿವೆ. ಕೆಲವು ಮೂಲವನ್ನ ಮೀರಿಸಿವೆ.ಕೆಲವು ಹಳಿ ತಪ್ಪಿವೆ. ಆದರೆ ಸವಿಯ ಸವಿಯಲು ಇಷ್ಟು ಸಾಕಲ್ಲ!
ನಿನ್ನೆ ಹೀಗೇ ಜ್ಯೋತಿಯ ನವಕರ್ನಾಟಕ ಪುಸ್ತಕ ಮಳಿಗೆಯಲ್ಲಿ ತಡಕಾಡುತ್ತಿದ್ದಾಗ, ಹಠಾತ್ತಾಗಿ ಫ಼್ರೆಡ್ ರಿಕ್ ಫ಼ೋರಿಸ್ಯ್ತ್ ನ ಡೆ ಆಫ಼್ ಜಾಕಲ್ ನ ಕನ್ನಡ ಅನುವಾದ 'ಅವನದೇ ಆ ದಿನ' ಕಣ್ಣಿಗೆ ಬಿದ್ದು ಹೀಗೆಲ್ಲಾ ಅನಿಸಿತು!

Friday, June 6, 2014

ಅವಸ್ಥೆ


ನಮ್ಮ ಪಾಡಿಗೆ ನಾವು
ಅದೇ ವೃತ್ತದ ಪರಿಧಿಯಲ್ಲಿ;
ಬೆಳಗ್ಗೆ ಅಲರಾಮ್ ಸದ್ದು,
ದೋಸೆಯ ಚುಯ್;
ಮಕ್ಕಳ ಶಾಲೆಯ ವ್ಯಾನು,
ಹೊತ್ತೇರಿದಂತೆ
ಮಧ್ಯಾಹ್ನದ ಅಡಿಗೆಯ ಚಿಂತೆ,
ಊಟವಾದ ಮೇಲೆ ಕೋಳಿ ನಿದ್ದೆ;
ಸಂಜೆಯ ಚಾ,
ರಾತ್ರಿಯ ಸೀರಿಯಲ್ಲು,
ಎಣಿಸಿ ತಪ್ಪಿದ ಸೆಕ್ಸು,
ಆಮೇಲಿನ ಮಂಪರು
ಎಲ್ಲ ದಿನ ಹೀಗೇ ಅಲ್ಲ:
ಯಾವುದೋ ಹಾಡು
ಎದ್ದಾಗಿಂದ ಕಾಡಿ,
ನೆನಪು ಸುರುಳಿಯಾಗಿ ಅಂಗಾತ ಬಿದ್ದು,
ಪಲ್ಲವಿಯೇ ಸಾಲಾಗಿ
ದಾರಿ ತಪ್ಪಿದ ದೈನೇಸಿ;
ಇದೆಲ್ಲದರ ಅರ್ಥವೇನು?
ಕೊಂಚ ಚಿಂತೆ
ಉತ್ತರ ಹೊಳೆಯುವ ಮೊದಲೇ
ಮತ್ತೆ ಓಟ,
ತಂಪಾದ ಕ್ಷಣಗಳ ಆಯುಸ್ಸು
ತುಂಬಾ ಕಮ್ಮಿ!

Sunday, April 20, 2014

ಎರಡು ಹುಚ್ಚಿನ ಕುರಿತು...

ಇವತ್ತು ಎರಡು ಹುಚ್ಚಿನ ಬಗೆಗೆ ಹೇಳಲೇ ಬೇಕು! ಸಿನಿಮಾ ನೋಡೋದು ಮತ್ತು ಪುಸ್ತಕ ಓದೋದು.
ಸಿನಿಮಾ ನೋಡೋದು ಮಂಗಳೂರಿನಲ್ಲಿ ಕಲಿಕೆಗೆ ಬಂದ ಮೇಲೆ ಶುರುವಾದದ್ದಾದರೆ ,ಪುಸ್ತಕ ಓದೋದು ತುಂಬಾ ಹಿಂದೆ ನನ್ನೂರಲ್ಲಿ ಒಳ್ಳೆ ಶಾಲೆ ಇಲ್ಲಾ ಅಂತ ನನ್ನನ್ನೂ ತಂಗಿಯನ್ನೂ ಬಿ.ಸಿ.ರೋಡಲ್ಲಿ ದೊಡ್ಡಪ್ಪನ ಮನೆಯಲ್ಲಿ ಸೇರಿಸಿದಾಗಿಂದ ಅಂಟಿಕೊಂಡದ್ದು!
ನನಗೀಗಲೂ ನೆನಪಿದೆ; ಪ್ರತೀ ಶನಿವಾರ ನನ್ನನ್ನೂ ತಂಗಿಯನ್ನೂ ಅಪ್ಪ ಊರಿಗೆ ಕರಕೊಂಡು ಹೋಗಿ ಸೋಮವಾರ ಬೆಳಿಗ್ಗೆ ವಾಪಸ್ ತಂದು ಬಿಡುತ್ತಿದ್ದರು. ಒಂದು ಸಲ ಅಪ್ಪನ ಬದಲು ನನ್ನಣ್ಣ ಪ್ರದೀಪ ,ದೇರಳಕಟ್ಟೆಯಲ್ಲಿ ಡೆಂಟಲ್ ಕಾಲೇಜ್ ನಲ್ಲಿ ಓದುತ್ತಿದ್ದವ ಕರಕೊಂಡು ಹೋಗಲು ಬಂದಿದ್ದವ, ನನ್ನ ಮಾತಿನ ರಭಸ ತಾಳಲಾರದೆ 'ಬಾಲ ಮಂಗಳ' ವೊಂದನ್ನು ತೆಗೆದುಕೊಟ್ಟು "ಇನ್ನು ಮನೆ ಸೇರುವವರೆಗೂ ಮಾತಾಡಬಾರದು" ಎಂದು ತಾಕೀತು ಮಾಡಿದ್ದ! ಅವತ್ತು ಸಿಕ್ಕಿದ ಅಕ್ಷಯ ನಿಧಿ ಆಮೇಲಾಮೇಲೆ ದೊಡ್ಡಪ್ಪನ ಮನೆಯಲ್ಲಿ ಬರುತ್ತಿದ್ದ ತರಂಗ, ಅಕ್ಕ ಓದುತ್ತಿದ್ದ  'ಚಿಂತನ' ಲೈಬ್ರರಿಯ ಕಾದಂಬರಿಗಳು( ಅವನ್ನು ನಾನು ಕದ್ದು ಓದುತ್ತಿದ್ದೆ) ಹೀಗೆ ಬೆಳೆಯಿತು.ವಾರಕ್ಕೊಮ್ಮೆ ಮನೆಗೆ ಹೋಗುವಾಗ ಅಪ್ಪನ ಪೀಡಿಸಿ ಬಾಲಮಂಗಳ,ಚಂದಮಾಮ,ಬಾಲಮಿತ್ರ,ಚಂಪಕ ಹೀಗೆ ಕೈಗೆ ಸಿಕ್ಕಿದ್ದೆಲ್ಲ ಓದುವುದೇ...ಅಜ್ಜನ ಅಟ್ಟದ ಮೇಲೆ ಜೋಪಾನವಗಿಟ್ಟ ೬೪ ವಿದ್ಯೆಗಳ ಪುಸ್ತಕದಲ್ಲಿ ಸಮ್ಮೋಹನ ವಿದ್ಯೆ ಓದಿ ಏಕ ಬಿಂದುವಲ್ಲಿ ದಿಟ್ಟಿ ನೆಟ್ಟೂ ಕೂತದ್ದು, ಶಕ್ತಿಮದ್ದು ಅಂತ ಸಿಕ್ಕಿದ ಸೊಪ್ಪು ಅರೆದು ಬಾವ ನವನೀತ ಮತ್ತು ತಂಗಿಯ ಜೊತೆ ಸೇರಿ ನವನೀತನ ತಂಗಿ ನಮಿತಳಿಗೆ ಕುಡಿಸಲು ಹೊರಟು ಅತ್ತೆಯ ಕೈಯಲ್ಲಿ ಬೈಗಳು ತಿಂದು ಆಮೇಲೆ 'ಟೆಸ್ಟ್' ಮಾಡಲು ಅದನ್ನ ಮನೆ ನಾಯಿಗೆ ಕುಡಿಸಿದ್ದು, ಹೀಗೆ ಓದು ಎಂಬುದು ಪಠ್ಯಪುಸ್ತಕಗಳ ಹೊರತಾಗಿ ಗಾಳ ಹಾಕಿದಂತೆಲ್ಲಾ ಮೀನು ಸಿಗುವ ಅದೃಷ್ಟದಂತೆ ನನಗೆ ದೊರೆತಿದೆ.. ಈ ಹುಚ್ಚಿಗೆ ಅಕ್ಕ ಸ್ವಾತಿಯ ಓದಿನ ಹುಚ್ಚೂ ಜತೆಗೂಡಿ ಅದು ಓದು ಇದು ಓದು ಎಂಬ ಅವಳ ಸಲಹೆಗಳು ಮಾಡಿದ ಉಪಕಾರ ಅಷ್ಟಿಷ್ಟಲ್ಲ! ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತೆ  ನಾನು ಪಿಯುಸಿಗೆ ಸೇರಿದ್ದು ದೊಡ್ಡ ಗ್ರಂಥಾಲಯವಿರುವ ಪುತ್ತೂರಿನ ವಿವೇಕಾನಂದ ಕಾಲೇಜಿಗೆ! ಅದರಲ್ಲೂ ಅಲ್ಲಿ ಆಗ ತಾನೆ ರೀ ಓಪನ್ ಆದ ಹಾಸ್ಟೆಲ್ ಗೆ; ಎಲ್ಲರೂ ಮುಗಿಬಿದ್ದು ಓದಿ ಒಳ್ಳೆಯ ಭವಿಷ್ಯಕ್ಕೋಸ್ಕರ ಅಂತ ಲೆಕ್ಚರರ್ ಗಳು ಊದಿದ ಶಂಖ ನನ್ನ ಮಂಡೆಗೇ ಹೋಗಲಿಲ್ಲ, ಸದಾ ಅಪ್ಪನ ಭಾಷೆಯಲ್ಲಿ 'ಕಥೆ ಪುಸ್ತಕ' ಅಂತ ನಿಕೃಷ್ಟವಾಗಿ ಕರೆಯಲ್ಪಡುವ ಪುಸ್ತಕಗಳ ಕಪಾಟಿನ ಮಧ್ಯೆಯೇ ಇರುತ್ತಿದ್ದೆ. ಎಷ್ಟೆಲ್ಲಾ ಓದಿದೆ ಅಂತ ನೆನೆಸಿಕೊಂಡರೆ ಖುಷಿಯಾಗುತ್ತದೆ; ಭವಿಷ್ಯ ಹಾಳಾಯಿತ ಅಂತ ಕೇಳಿದರೆ ಇನ್ನೂ ಉತ್ತರ ಸಿಕ್ಕಿಲ್ಲ!
ಮಂಗಳೂರಲ್ಲಿ ಬಂದ ಮೇಲೆ ನಾನೇ ರಾಜ,ನಾಲ್ಕು ನಾಲ್ಕು ಲೈಬ್ರರಿಗಳ ಸದಸ್ಯನಾಗಿ 'ಒಂಥರಾ ಹುಚ್ಚು ಹಿಡಿವಷ್ಟು '(ಖಂಡಿತಾ ಪಠ್ಯ ಅಲ್ಲ).. ಈಗ ಬಿಡಿ ಕೆಲಸಕ್ಕೆ ಹೋಗಲು ಶುರುವಾದ ಮೇಲೆ, ತಿಂಗಳು ತಿಂಗಳು ಏನಾದರು ಪುಸ್ತಕ ತರದಿದ್ದರೆ ಕಳಕೊಂಡ ಅನುಭವ, ಗಿಫ಼್ಟ್ ಏನು ಬೇಕು ಅಂತ ಯಾರಾದರು ಕೇಳಿದರೆ ಪುಸ್ತಕ ಅನ್ನುವುದೇ ಸಿದ್ದ ಉತ್ತರ, ಆದರೂ ಈಗೀಗ ಕೈಗೆ ಸಿಕ್ಕಿದ್ದೆಲ್ಲಾ ಓದಲಾಗುತ್ತಿಲ್ಲ, ಕೆಲವೆಲ್ಲಾ 'ಇಶ್ಶೀ' ಅನಿಸಿದರೆ ಕೆಲವೆಲ್ಲಾ ಬೋರು..ವಯಸ್ಸಾದಂತೆ ಹೀಗೂ ಆಗುತ್ತೇನೋ!
ಇನ್ನು ಸಿನಿಮಾ ಬಗ್ಗೆ, ಕಲಿಯಲೆಂದು ಬಂದವ ಹತ್ತಿ ಇಳಿಯದ ಥಿಯೇಟರಿಲ್ಲ, ೭ ಗಂಟೆಯ ಸಿನಿಮಾಕ್ಕೆ ಹೋಗುವುದ ವಾಪಸ್ ಕೆಲವೊಮ್ಮೆ ಬಸ್ ಇರದಾಗ ನಡಕೊಂಡು ಬರೋದು ಒಂಥರಾ ಖುಷಿ ಆದರೆ ನಾಳೆ ಹೇಗೋ ಈಗ ಹೀಗೆ ಮಾಡಿದರೆ ಅಂತ ಭಯವಾಗುತ್ತಿದುದೂ ಸುಳ್ಳಲ್ಲ; ಒಮ್ಮೆ ಹೀಗಾಯ್ತು,ಯಾವನೂ ಬರಲಿಲ್ಲ ಅಂತ ಒಬ್ಬನೇ ಸಿನಿಮಾಕ್ಕೆ ಹೋಗಿದ್ದೆ.ಬೆಳಕೆಲ್ಲ ಆರಿ ಸಿನಿಮಾ ಶುರುವಾದ ಕೂಡಲೆ ಅನಾಥ ಪ್ರಜ್ನೆ ಕಾಡತೊಡಗಿತು,ಇಡೀ ಜಗತ್ತಲ್ಲಿ ನಾನೊಬ್ಬನೇ ದುಃಖಿ, ಮತ್ತೆಲ್ಲಾ ಎಷ್ಟು ಸುಖವಾಗಿದ್ದಾರೆ ಎಂಬ ತಬ್ಬಲಿತನ! ಗೊಳೋ ಎಂದು ಅಳಬೇಕು ಅನಿಸುವಷ್ಟು ಬೇಜಾರಾಗಿತ್ತು ಅದನ್ನೇ ಗೆಳೆಯನ ಬಳಿ ಹೇಳಿಕೊಂಡಾಗ " ಒಬ್ಬನೇ ಸಿನಿಮಾಗೆ ಮತ್ತು ಒಬ್ಬನೇ ಕುಡಿಯಲು ಬಾರ್ ಗೆ ಹೋಗಲೇಬಾರದು" ಅಂತ ಉಪದೇಶ ಕೊಟ್ಟ ಪುಣ್ಯಾತ್ಮ! ಹಾಗೆ ಓದು ಮುಗಿದು ಕೆಲಸಕ್ಕೆ ಸೇರಿದ ಮೇಲಂತೂ ರಾಶಿ ರಾಶಿ ಸಿನಿಮಾ ನೋಡಿದೆ.ಡೌನ್ ಲೋಡ್ ಮಾಡುದು ನೋಡೂದು , ಅದರಲ್ಲೂ 'ದ ಗಾಡ್ ಫ಼ಾದರ್' ಸಿನಿಮಾ ಹುಚ್ಚು ಎಷ್ಟರ ಮಟ್ಟಿಗೆ ಅಂದರೆ ಸಿನಿಮಾ ನೋಡಿ ಅದರ ಅನುವಾದಿತ ಪುಸ್ತಕ ಓದಿ ,ಮೂಲವೂ ಓದಿ ಇನ್ನೂ ತಣಿಯದೆ ಆ ಕಂಪ್ಯೂಟರ್ ಗೇಮನ್ನೂ ಖರೀದಿಸಿ ಮನದಣಿಯೆ ಆಡಿ ಮನೆಯವರ ಕೈಯಲ್ಲಿ,ರೂಮ್ ಮೇಟುಗಳ ಕೈಲಿ ಬೈಗುಳ ತಿಂದೌ, ಅಬ್ಬಬ್ಬಾ... ಈಗಲೂ ಮನೆಯಲ್ಲಿ ಯಾರಿಲ್ಲ ಅಂದರೆ ನಾಲ್ಕಾರು ಗ್ಯಾಂಗ್ ಸ್ಟರ್ ಗಳ ಕೊಲ್ಲುವ ಅಂತ ಆಡಲು ಸುರುವೇ!
ನಿನಗ್ಯಾವುದು ಇಷ್ಟ ಅಂತ ಯಾರದರು ಕೇಳಿದರೆ ನನ್ನ ಆಯ್ಕೆ ಪುಸ್ತಕವೇ.. ಅಲ್ಲಿ ನನಗೆ ಬೇಕಾದ ಏಕಾಣ್ತವಿದೆ,ಯಾರನ್ನೂ ತೃಪ್ತಿಪಡಿಸಬೇಕಾದ ಅನಿವಾರ್ಯತೆ ಇಲ್ಲ, ಜೊತೆಗೆ ಕರಕೊಂಡು ಹೋದವನ ಅಭಿಪ್ರಯದ ಮೇಲೆ ನಮ್ಮ ಅಭಿಪ್ರಾಯವೂ ಬದಲಾಗುವ ಭಯವಿಲ್ಲ!  ಎಲ್ಲದಕ್ಕಿಂತ ಮುಖ್ಯ ಕಲ್ಪನೆಗೆ ಜಾಗವಿದೆ!
ಸದ್ಯಕ್ಕಂತೂ ಎರಡು ಹುಚ್ಚುಗಳಿಂದ ಬಿಡುಗಡೆಯಿಲ್ಲ; ಮುಂದೆ ಸಿಗಬಹುದೆಂಬ ನಿರೀಕ್ಷೆಯೂ ಇಲ್ಲ!