Sunday, April 20, 2014

ಎರಡು ಹುಚ್ಚಿನ ಕುರಿತು...

ಇವತ್ತು ಎರಡು ಹುಚ್ಚಿನ ಬಗೆಗೆ ಹೇಳಲೇ ಬೇಕು! ಸಿನಿಮಾ ನೋಡೋದು ಮತ್ತು ಪುಸ್ತಕ ಓದೋದು.
ಸಿನಿಮಾ ನೋಡೋದು ಮಂಗಳೂರಿನಲ್ಲಿ ಕಲಿಕೆಗೆ ಬಂದ ಮೇಲೆ ಶುರುವಾದದ್ದಾದರೆ ,ಪುಸ್ತಕ ಓದೋದು ತುಂಬಾ ಹಿಂದೆ ನನ್ನೂರಲ್ಲಿ ಒಳ್ಳೆ ಶಾಲೆ ಇಲ್ಲಾ ಅಂತ ನನ್ನನ್ನೂ ತಂಗಿಯನ್ನೂ ಬಿ.ಸಿ.ರೋಡಲ್ಲಿ ದೊಡ್ಡಪ್ಪನ ಮನೆಯಲ್ಲಿ ಸೇರಿಸಿದಾಗಿಂದ ಅಂಟಿಕೊಂಡದ್ದು!
ನನಗೀಗಲೂ ನೆನಪಿದೆ; ಪ್ರತೀ ಶನಿವಾರ ನನ್ನನ್ನೂ ತಂಗಿಯನ್ನೂ ಅಪ್ಪ ಊರಿಗೆ ಕರಕೊಂಡು ಹೋಗಿ ಸೋಮವಾರ ಬೆಳಿಗ್ಗೆ ವಾಪಸ್ ತಂದು ಬಿಡುತ್ತಿದ್ದರು. ಒಂದು ಸಲ ಅಪ್ಪನ ಬದಲು ನನ್ನಣ್ಣ ಪ್ರದೀಪ ,ದೇರಳಕಟ್ಟೆಯಲ್ಲಿ ಡೆಂಟಲ್ ಕಾಲೇಜ್ ನಲ್ಲಿ ಓದುತ್ತಿದ್ದವ ಕರಕೊಂಡು ಹೋಗಲು ಬಂದಿದ್ದವ, ನನ್ನ ಮಾತಿನ ರಭಸ ತಾಳಲಾರದೆ 'ಬಾಲ ಮಂಗಳ' ವೊಂದನ್ನು ತೆಗೆದುಕೊಟ್ಟು "ಇನ್ನು ಮನೆ ಸೇರುವವರೆಗೂ ಮಾತಾಡಬಾರದು" ಎಂದು ತಾಕೀತು ಮಾಡಿದ್ದ! ಅವತ್ತು ಸಿಕ್ಕಿದ ಅಕ್ಷಯ ನಿಧಿ ಆಮೇಲಾಮೇಲೆ ದೊಡ್ಡಪ್ಪನ ಮನೆಯಲ್ಲಿ ಬರುತ್ತಿದ್ದ ತರಂಗ, ಅಕ್ಕ ಓದುತ್ತಿದ್ದ  'ಚಿಂತನ' ಲೈಬ್ರರಿಯ ಕಾದಂಬರಿಗಳು( ಅವನ್ನು ನಾನು ಕದ್ದು ಓದುತ್ತಿದ್ದೆ) ಹೀಗೆ ಬೆಳೆಯಿತು.ವಾರಕ್ಕೊಮ್ಮೆ ಮನೆಗೆ ಹೋಗುವಾಗ ಅಪ್ಪನ ಪೀಡಿಸಿ ಬಾಲಮಂಗಳ,ಚಂದಮಾಮ,ಬಾಲಮಿತ್ರ,ಚಂಪಕ ಹೀಗೆ ಕೈಗೆ ಸಿಕ್ಕಿದ್ದೆಲ್ಲ ಓದುವುದೇ...ಅಜ್ಜನ ಅಟ್ಟದ ಮೇಲೆ ಜೋಪಾನವಗಿಟ್ಟ ೬೪ ವಿದ್ಯೆಗಳ ಪುಸ್ತಕದಲ್ಲಿ ಸಮ್ಮೋಹನ ವಿದ್ಯೆ ಓದಿ ಏಕ ಬಿಂದುವಲ್ಲಿ ದಿಟ್ಟಿ ನೆಟ್ಟೂ ಕೂತದ್ದು, ಶಕ್ತಿಮದ್ದು ಅಂತ ಸಿಕ್ಕಿದ ಸೊಪ್ಪು ಅರೆದು ಬಾವ ನವನೀತ ಮತ್ತು ತಂಗಿಯ ಜೊತೆ ಸೇರಿ ನವನೀತನ ತಂಗಿ ನಮಿತಳಿಗೆ ಕುಡಿಸಲು ಹೊರಟು ಅತ್ತೆಯ ಕೈಯಲ್ಲಿ ಬೈಗಳು ತಿಂದು ಆಮೇಲೆ 'ಟೆಸ್ಟ್' ಮಾಡಲು ಅದನ್ನ ಮನೆ ನಾಯಿಗೆ ಕುಡಿಸಿದ್ದು, ಹೀಗೆ ಓದು ಎಂಬುದು ಪಠ್ಯಪುಸ್ತಕಗಳ ಹೊರತಾಗಿ ಗಾಳ ಹಾಕಿದಂತೆಲ್ಲಾ ಮೀನು ಸಿಗುವ ಅದೃಷ್ಟದಂತೆ ನನಗೆ ದೊರೆತಿದೆ.. ಈ ಹುಚ್ಚಿಗೆ ಅಕ್ಕ ಸ್ವಾತಿಯ ಓದಿನ ಹುಚ್ಚೂ ಜತೆಗೂಡಿ ಅದು ಓದು ಇದು ಓದು ಎಂಬ ಅವಳ ಸಲಹೆಗಳು ಮಾಡಿದ ಉಪಕಾರ ಅಷ್ಟಿಷ್ಟಲ್ಲ! ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತೆ  ನಾನು ಪಿಯುಸಿಗೆ ಸೇರಿದ್ದು ದೊಡ್ಡ ಗ್ರಂಥಾಲಯವಿರುವ ಪುತ್ತೂರಿನ ವಿವೇಕಾನಂದ ಕಾಲೇಜಿಗೆ! ಅದರಲ್ಲೂ ಅಲ್ಲಿ ಆಗ ತಾನೆ ರೀ ಓಪನ್ ಆದ ಹಾಸ್ಟೆಲ್ ಗೆ; ಎಲ್ಲರೂ ಮುಗಿಬಿದ್ದು ಓದಿ ಒಳ್ಳೆಯ ಭವಿಷ್ಯಕ್ಕೋಸ್ಕರ ಅಂತ ಲೆಕ್ಚರರ್ ಗಳು ಊದಿದ ಶಂಖ ನನ್ನ ಮಂಡೆಗೇ ಹೋಗಲಿಲ್ಲ, ಸದಾ ಅಪ್ಪನ ಭಾಷೆಯಲ್ಲಿ 'ಕಥೆ ಪುಸ್ತಕ' ಅಂತ ನಿಕೃಷ್ಟವಾಗಿ ಕರೆಯಲ್ಪಡುವ ಪುಸ್ತಕಗಳ ಕಪಾಟಿನ ಮಧ್ಯೆಯೇ ಇರುತ್ತಿದ್ದೆ. ಎಷ್ಟೆಲ್ಲಾ ಓದಿದೆ ಅಂತ ನೆನೆಸಿಕೊಂಡರೆ ಖುಷಿಯಾಗುತ್ತದೆ; ಭವಿಷ್ಯ ಹಾಳಾಯಿತ ಅಂತ ಕೇಳಿದರೆ ಇನ್ನೂ ಉತ್ತರ ಸಿಕ್ಕಿಲ್ಲ!
ಮಂಗಳೂರಲ್ಲಿ ಬಂದ ಮೇಲೆ ನಾನೇ ರಾಜ,ನಾಲ್ಕು ನಾಲ್ಕು ಲೈಬ್ರರಿಗಳ ಸದಸ್ಯನಾಗಿ 'ಒಂಥರಾ ಹುಚ್ಚು ಹಿಡಿವಷ್ಟು '(ಖಂಡಿತಾ ಪಠ್ಯ ಅಲ್ಲ).. ಈಗ ಬಿಡಿ ಕೆಲಸಕ್ಕೆ ಹೋಗಲು ಶುರುವಾದ ಮೇಲೆ, ತಿಂಗಳು ತಿಂಗಳು ಏನಾದರು ಪುಸ್ತಕ ತರದಿದ್ದರೆ ಕಳಕೊಂಡ ಅನುಭವ, ಗಿಫ಼್ಟ್ ಏನು ಬೇಕು ಅಂತ ಯಾರಾದರು ಕೇಳಿದರೆ ಪುಸ್ತಕ ಅನ್ನುವುದೇ ಸಿದ್ದ ಉತ್ತರ, ಆದರೂ ಈಗೀಗ ಕೈಗೆ ಸಿಕ್ಕಿದ್ದೆಲ್ಲಾ ಓದಲಾಗುತ್ತಿಲ್ಲ, ಕೆಲವೆಲ್ಲಾ 'ಇಶ್ಶೀ' ಅನಿಸಿದರೆ ಕೆಲವೆಲ್ಲಾ ಬೋರು..ವಯಸ್ಸಾದಂತೆ ಹೀಗೂ ಆಗುತ್ತೇನೋ!
ಇನ್ನು ಸಿನಿಮಾ ಬಗ್ಗೆ, ಕಲಿಯಲೆಂದು ಬಂದವ ಹತ್ತಿ ಇಳಿಯದ ಥಿಯೇಟರಿಲ್ಲ, ೭ ಗಂಟೆಯ ಸಿನಿಮಾಕ್ಕೆ ಹೋಗುವುದ ವಾಪಸ್ ಕೆಲವೊಮ್ಮೆ ಬಸ್ ಇರದಾಗ ನಡಕೊಂಡು ಬರೋದು ಒಂಥರಾ ಖುಷಿ ಆದರೆ ನಾಳೆ ಹೇಗೋ ಈಗ ಹೀಗೆ ಮಾಡಿದರೆ ಅಂತ ಭಯವಾಗುತ್ತಿದುದೂ ಸುಳ್ಳಲ್ಲ; ಒಮ್ಮೆ ಹೀಗಾಯ್ತು,ಯಾವನೂ ಬರಲಿಲ್ಲ ಅಂತ ಒಬ್ಬನೇ ಸಿನಿಮಾಕ್ಕೆ ಹೋಗಿದ್ದೆ.ಬೆಳಕೆಲ್ಲ ಆರಿ ಸಿನಿಮಾ ಶುರುವಾದ ಕೂಡಲೆ ಅನಾಥ ಪ್ರಜ್ನೆ ಕಾಡತೊಡಗಿತು,ಇಡೀ ಜಗತ್ತಲ್ಲಿ ನಾನೊಬ್ಬನೇ ದುಃಖಿ, ಮತ್ತೆಲ್ಲಾ ಎಷ್ಟು ಸುಖವಾಗಿದ್ದಾರೆ ಎಂಬ ತಬ್ಬಲಿತನ! ಗೊಳೋ ಎಂದು ಅಳಬೇಕು ಅನಿಸುವಷ್ಟು ಬೇಜಾರಾಗಿತ್ತು ಅದನ್ನೇ ಗೆಳೆಯನ ಬಳಿ ಹೇಳಿಕೊಂಡಾಗ " ಒಬ್ಬನೇ ಸಿನಿಮಾಗೆ ಮತ್ತು ಒಬ್ಬನೇ ಕುಡಿಯಲು ಬಾರ್ ಗೆ ಹೋಗಲೇಬಾರದು" ಅಂತ ಉಪದೇಶ ಕೊಟ್ಟ ಪುಣ್ಯಾತ್ಮ! ಹಾಗೆ ಓದು ಮುಗಿದು ಕೆಲಸಕ್ಕೆ ಸೇರಿದ ಮೇಲಂತೂ ರಾಶಿ ರಾಶಿ ಸಿನಿಮಾ ನೋಡಿದೆ.ಡೌನ್ ಲೋಡ್ ಮಾಡುದು ನೋಡೂದು , ಅದರಲ್ಲೂ 'ದ ಗಾಡ್ ಫ಼ಾದರ್' ಸಿನಿಮಾ ಹುಚ್ಚು ಎಷ್ಟರ ಮಟ್ಟಿಗೆ ಅಂದರೆ ಸಿನಿಮಾ ನೋಡಿ ಅದರ ಅನುವಾದಿತ ಪುಸ್ತಕ ಓದಿ ,ಮೂಲವೂ ಓದಿ ಇನ್ನೂ ತಣಿಯದೆ ಆ ಕಂಪ್ಯೂಟರ್ ಗೇಮನ್ನೂ ಖರೀದಿಸಿ ಮನದಣಿಯೆ ಆಡಿ ಮನೆಯವರ ಕೈಯಲ್ಲಿ,ರೂಮ್ ಮೇಟುಗಳ ಕೈಲಿ ಬೈಗುಳ ತಿಂದೌ, ಅಬ್ಬಬ್ಬಾ... ಈಗಲೂ ಮನೆಯಲ್ಲಿ ಯಾರಿಲ್ಲ ಅಂದರೆ ನಾಲ್ಕಾರು ಗ್ಯಾಂಗ್ ಸ್ಟರ್ ಗಳ ಕೊಲ್ಲುವ ಅಂತ ಆಡಲು ಸುರುವೇ!
ನಿನಗ್ಯಾವುದು ಇಷ್ಟ ಅಂತ ಯಾರದರು ಕೇಳಿದರೆ ನನ್ನ ಆಯ್ಕೆ ಪುಸ್ತಕವೇ.. ಅಲ್ಲಿ ನನಗೆ ಬೇಕಾದ ಏಕಾಣ್ತವಿದೆ,ಯಾರನ್ನೂ ತೃಪ್ತಿಪಡಿಸಬೇಕಾದ ಅನಿವಾರ್ಯತೆ ಇಲ್ಲ, ಜೊತೆಗೆ ಕರಕೊಂಡು ಹೋದವನ ಅಭಿಪ್ರಯದ ಮೇಲೆ ನಮ್ಮ ಅಭಿಪ್ರಾಯವೂ ಬದಲಾಗುವ ಭಯವಿಲ್ಲ!  ಎಲ್ಲದಕ್ಕಿಂತ ಮುಖ್ಯ ಕಲ್ಪನೆಗೆ ಜಾಗವಿದೆ!
ಸದ್ಯಕ್ಕಂತೂ ಎರಡು ಹುಚ್ಚುಗಳಿಂದ ಬಿಡುಗಡೆಯಿಲ್ಲ; ಮುಂದೆ ಸಿಗಬಹುದೆಂಬ ನಿರೀಕ್ಷೆಯೂ ಇಲ್ಲ!