Saturday, January 17, 2015

ಮಿಸ್ಕಿನ್ ನ 'ಪಿಸಾಸು'

ಮಿಸ್ಕಿನ್ ನನ್ನ ಇಷ್ಟದ ನಿರ್ದೇಶಕರಲ್ಲೊಬ್ಬರು. ಕಮರ್ಷಿಯಲ್ ಚೌಕಟ್ಟಿನ ಒಳಗೇ ನಾಟಕವಾಗಿ, ಕಲೆಯಾಗಿ, ಪ್ರತಿಮೆಗಳಾಗಿ ಕಾಡುವ ಚಿತ್ರಗಳ ಕೊಟ್ಟದ್ದರಿಂದ ಇಷ್ಟವಾದವರು.
ಬಹಳ ಹಿಂದೆಯೇ ಚಿತ್ರಂ ಪೇಸುದಡಿ ನೋಡಿದ್ದೆ. ವಿಚಿತ್ರ ಅನಿಸಿತ್ತು.
ಆಮೇಲಿನ ಅಂಜಾದೇ,ಮುಗಮೂಡಿ,ಒಮ್ಮಾನುಂ ಆಟ್ಟುಕುಟ್ಟಿಯುಂ, ಯುದ್ದಂ ಸೆಯಿ,ನಂದಲಾಲ ದಂತಹ ಯತ್ನಗಳಿಂದ ಹತ್ತಿರವಾದರು.
ಕಪ್ಪು ಬಿಳುಪು ಪಾತ್ರಗಳು, ನಾಟಕೀಯ ಹೊಡೆದಾಟ(ಪೆಟ್ಟು ತಿನ್ನುವವರೆಲ್ಲ ಒಬ್ಬೊಬ್ಬರಾಗಿ ಬಂದು ಹಿಂದೆ ಸರಿದು ಮರೆಯಾಗುವುದು ರಂಗದಲ್ಲಿದ್ದಂತೆ)
ಎದೆಯಾಳಕ್ಕೆ ಇಳಿವ ಹಾಡುಗಳು ಅದರಲ್ಲೂ ಅಂಜಾದೆಯ ಕಣ್ಣದಾಸನ್ , ಅಚ್ಚಂ ತವಿಯ ನನ್ನ ಇಷ್ಟದವು.
ಪ್ರತಿ ಸಲ ಇವರ ಸಿನಿಮಾ ಮನುಷ್ಯ ಸಂಬಂಧದ ಮಗ್ಗುಲುಗಳ ಶೋಧಿಸುವ ಪರಿ, ತಾಕಲಾಟವ ಮುಟ್ಟಿಸುವ ವಿಧಾನ ಕಾಡುತ್ತದೆ.
ಈಗಷ್ಟೆ ನೋಡಿದ ಮಿಸ್ಕಿನ್ ಹೊಸ ಸಿನಿಮಾ 'ಪಿಸಾಸು'(ಪಿಶಾಚಿ) ಕೂಡ ಅಷ್ಟೆ.
ಚಿತ್ರದ ಆರಂಭವೇ ನಮ್ಮನ್ನ ಹಠಾತ್ತಾಗಿ ಯಾರೋ ಬಾವಿಗೆ ತಳ್ಳಿಬಿಟ್ಟಂತಾಗಿ ನೋಡುವುದೇ ಬಿಡುಗಡೆಯ ಹಾದಿಯಾಗುತ್ತದೆ.
ಅವಳ ಕಣ್ಣುಗಳು ಅದರಲ್ಲಿ ಆರುತ್ತಿರುವ ನಗೆ ಚಿತ್ರ ತೆರೆದುಕೊಂಡಂತೆ ಅವಳು ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದಾಳೆ.
ಹೊಡೆದವ ಕಾರು ಓಡಿಸಿಕೊಂಡು ಹೋಗಿದ್ದಾನೆ. ಇಬ್ಬರು ಮೂವರು ಎಲ್ಲಿಂದಲೋ ಬಂದು ಅವಳನ್ನೆತ್ತಿ ಆಟೋಗೆ ಹಾಕಿದ್ದಾರೆ. ಅಯ್ಯೋ ಗಡಿಬಿಡಿಯಲ್ಲಿ ಅವಳ ಒಂದು ಚಪ್ಪಲಿ ರಸ್ತೆಯಲ್ಲಿ ಬಿದ್ದಿದೆ. ಹೋಗುತ್ತಿರುವಆಟೋದಿಂದ ಹೊರಚಾಚಿದ ಕಾಲಲ್ಲಿ ಇನ್ನೊಂದು ಚಪ್ಪಲಿ ವಿದಾಯ ಹೇಳುತ್ತಿರುವಂತಿದೆ.
ಅವಳ ಆಸ್ಪತ್ರೆಗೆ ತಂದವರಲ್ಲಿ ಅವನೊಬ್ಬ ಜೊಂಪೆಗೂದಲಿನ ಹುಡುಗ. ಎಮರ್ಜೆನ್ಸಿ ರೂಮಿಗೆ ತೆರಳುವ ಮುನ್ನ ಅವಳ ಕೈ ಅವನದನ್ನ ಗಟ್ಟಿಯಾಗಿ ಹಿಡಿದಿದೆ. ಬಿಡಿಸಲು ನರ್ಸ್ ಸಹಾಯ ಮಾಡಿದಂತೆ ಅವಳೂ ಹೋಗುತ್ತಾಳೆ. ಡಾಕ್ಟರ್ ಬಂದವರೇ ಇವಳ ಸಂಬಂಧಿಕರಿಗೆ ಹೇಳಿ she is dead ಅನ್ನುತ್ತಾರೆ. ಹೊರಬಂದ ಹುಡುಗ ಸತ್ತವಳಿಗೆ ಏನೂ ಅಲ್ಲ. ಅಲ್ಲೇ ಅವಳ ಚಪ್ಪಲಿ ಒಂಟಿಯಾಗಿ ಬಿದ್ದಿದೆ. ಹಿಂದಿನಿಂದ ಅವಳ ತಂದೆಯ ಅಳು ಕೇಳಿಸಿಕೊಳ್ಳುತ್ತಾ ಅವನು ಆ ಚಪ್ಪಲಿ ತೆಗೆದುಕೊಂಡು ಹೋಗುತ್ತಾನೆ. 
ಅಲ್ಲಿಂದ ಅವನಿಗೆ ಶುರುವಾಗುತ್ತದೆ ದೆವ್ವದ ಕಾಟ. ಎಂಥಹ ಕತೆ ಇದ್ದರೂ ಅದನ್ನ ತನ್ನ ಶೈಲಿಗೆ ಬಗ್ಗಿಸಿಕೊಳ್ಳುವ ತಾಕತ್ತು ಇರುವ ಮಿಸ್ಕಿನ್ ಇಲ್ಲೂ ತನ್ನ ಕೈಚಳಕ ತೋರಿದ್ದಾರೆ. ಈ ಹಿಂದೆ ಮುಗಮೂಡಿಯಲ್ಲಿ ಸೂಪರ್ ಹೀರೋ ಕತೆಯ ತೋರಿದ ಬಗೆ ಹೊಸದಾಗಿತ್ತು. ಈಗ ಈ ಹಾರರ್ ಕತೆ.
ಸಂಬಂಧಗಳು, ನಂಬಿಕೆ,ಭಯಗಳ ಮೇಲಾಟ ಕೊನೆಗೊಂದು ಹ್ರದಯ ಭೇದಕ ಸತ್ಯ. ಮಿಸ್ಕಿನ್ ಮತ್ತೆ ಗೆದ್ದಿದ್ದಾರೆ. 

Saturday, January 10, 2015

ಇದು ಕನಸೇ?!

 ಅರೆ ಎಚ್ಚರದ, ಅತ್ತ ನಿದ್ದೆಯೂ ಅಲ್ಲದ ಮಂಪರು. ಈ ಬಿರುಬಿಸಿಲಲ್ಲಿ ಅವನೊಬ್ಬ ಅಲ್ಲಿ ರಸ್ತೆ ಬದಿಯಲ್ಲಿ ಪಾನೀಪೂರಿ ಮಾರುತ್ತಿದ್ದಾನೆ.ಅವನಿಗೆ ಒತ್ತಾಗಿ ಇನ್ನೊಬ್ಬ ಚಿಕ್ಕ ಹುಡುಗನ ಶಾಪು. ನಾನು " ಡ್ರೈ ಪಾನೀಪೂರಿ ಇದೆಯೇ?" ಅಂತ ಕೇಳಿದ್ದೇ ಮಹಾಪರಾಧವಾಯಿತೋ ಎಂಬಂತೆ, " ಏನಣ್ಣಾ ಅದೆಲ್ಲ ಇಲ್ಲೆಲ್ಲಿ ಸಿಗತ್ತೆ?" ಅಂದ. "ಸರಿ ಹಂಗಾರೆ ಒಂದು ಪ್ಲೇಟ್ ನಾರ್ಮಲ್ ಪಾನೀಪೂರಿ ಕೊಡು" ಅಂದೆ. "ನಾರ್ಮಲ್, ನಾರ್ಮಲ್" ಅಂತ ಮಣ ಮಣಿಸುತ್ತಾ ಅವನು ಪೂರಿಗಳ ತಟ್ಟೆಗೆ ತುಂಬತೊಡಗಿದ. ಪಾನಿಗೆ ಉಪ್ಪು ಕಮ್ಮಿಯೋ ಅಂತ ನನ್ನೆದುರಿಗೇ ಟೇಸ್ಟ್ ನೋಡಿ, ಉಪ್ಪಿನ ಚೀಲದಲ್ಲಿ ಅದನ್ನು ಮುಳುಗಿಸಿದ. ನಾನ್ಯಾವುದೋ ವಿಚಿತ್ರ ಪ್ರದೇಶದಲ್ಲಿದ್ದೇನೆ ಅಂದುಕೊಂಡೆ. ತಲೆ ನೆಟ್ಟಗಿರುವ ಯಾವನಾದರೂ ತನ್ನ ಗಿರಾಕಿಯ ಎದುರೇ ಇಂತಹ ಮೂರ್ಖ ಕೆಲಸ ಮಾಡ್ತಾನಾ? ಆದರೂ ಆಸೆ ನಂಗೆ. ಇವನ ಪಕ್ಕದ ಶಾಪಿನವನಿಗೆ ಗಿರಾಕಿ ಇಲ್ಲದೆ ಅವನು ಸುಮ್ಮನೆ ಮನೆಗೆ ಹೋಗೊದು ನೆನೆಸಿ ಬೇಜಾರಾಯ್ತು. ನಾನೇನು ಮಾಡ್ಲಿ? ನನ್ನ ಕೆಲಸ ಇಲ್ಲಿಂದ ಪಾನೀಪೂರಿ ತಗೊಂಡು ತಿನ್ನೋದಷ್ಟೆ. ಇದೆಲ್ಲಾ ಒಳಗೆ ಟೊಳ್ಳಿನ ವ್ಯವಹಾರ ಅನಿಸಿತ್ತು. ಈಗಷ್ಟೆ ನನ್ನ ಚಾರ್ಜರ್ ಕಿತ್ತು ಒಳಗಡೆ ನೋಡಿದ್ದೆ. ಯು.ಎಸ್.ಬಿ. ಪೋರ್‍ಟ್ ಇರಬೇಕಾದ ಕಡೆ ಖಾಲಿ. ಇದ್ಯಾಕೋ ಸರಿ ಇಲ್ಲ. ಅಂತ ಅನಿಸುವಾಗಲೇ ,ಈ ಪಾನೀಪೂರಿಯೋನು ನಂಗೆ ವಿಷ ಹಾಕಿದ್ರೆ ಅಂತ ಗಾಢವಾಗಿ ಅನ್ನಿಸತೊಡಗಿತು. ಅಯ್ಯೋ ,ಇಲ್ಲಿವನಿಗೆ ಬರೋದೇ ನಾನೊಬ್ಬ ಗಿರಾಕಿ.ನನ್ನನ್ನೂ ಕಳಕೊಂಡ್ರೆ ಇವನ ಬದುಕಿನ ಅರ್ಥವೇ ಇಲ್ಲ್ದಾಗಿಬಿಡುತ್ತಲ್ಲಾ ಅಂತ ಸಮಧಾನಿಸಿಕೊಂಡೆ.
ಆದರೂ ಯಾರಿಗೆ ಯಾವಾಗ ಗಡಿ ಹಾರುವ ಹಂಬಲ ಬರುತ್ತೋ ಯಾರಿಗೆ ಗೊತ್ತು? ಇವನ ಕ್ಷಣದ ಹುಚ್ಚಿಗೆ ನಾನು ಇಲ್ಲವಾಗೋದು ನೆನೆಸಿ ಕಿರಿಕಿರಿಯಾಗತೊಡಗಿತು. ಯಾರೋ ಕಿವಿಯಲ್ಲಿ 'ಕರ್ಮಣ್ಯೇ ವಾದಿಕಾರಸ್ತೇ...' ಅಂತ ಊದಿಹೋದಂತಾಗಿ, ನಾನು ಅವನು ಕೊಟ್ಟ ಪ್ಲೇಟಿನಿಂದ ನಿರ್ಯೋಚನೆಯಿಂದ ,ಚಪ್ಪರಿಸುತ್ತಾ ಒಂದೊಂದಾಗಿ ಪಾನೀಪೂರಿ ತಿನ್ನತೊಡಗಿದೆ.

Saturday, January 3, 2015

'ಸುಮ್ಮನೆ' ಓದಿದ ಗುಂಗು

ಬಿ.ಸಿ.ರೋಡಲ್ಲಿ ಓದುತ್ತಿದ್ದಾಗ ಹಳೆಯ 'ತರಂಗ' ಸಂಚಿಕೆಗಳ ತಿರುವಿ ಹಾಕುತ್ತಿದ್ದಾಗ ಅನಿರೀಕ್ಷಿತ ಎಂಬಂತೆ ಕಣ್ಣಿಗೆ ಬಿದ್ದದ್ದೇ ಈ ' ಅಶ್ವಘೋಷ' ಅನ್ನುವ ಹೆಸರು. ಬರೆದವರಾರು ನೋಡಿದರೆ 'ಸತ್ಯಕಾಮ' ಎಂದಿತ್ತು. ಎರಡೂ ವಿಚಿತ್ರವಾಗಿದೆಯಲ್ಲ ಅಂದುಕೊಳ್ಳುತ್ತಾ ಆ ಧಾರಾವಾಹಿಯ ಮೊದಲ ಭಾಗ ಓದುವಾಗಲೇ ತಲೆ ಗಿರ್ರೆಂದಿತ್ತು. ಅದರಲ್ಲಿದ್ದ ಗಂಜೀಫ಼ಾ ರಘುಪತಿ ಭಟ್ಟರ ಕಲೆ ಹೊಸತೆನ್ನಿಸಿತ್ತು. ಬಿಡಿ ಬಿಡಿ ವಾಕ್ಯಗಳು ನನಗೆ ಹೊರೆಯಾಗಿತ್ತು. ಆಗ ಸಿಕ್ಕಿದ್ದೆಲ್ಲ ಓದುತ್ತಿದ್ದ ಕಾರಣ ಪಟ್ಟಾಗಿ ಕೂತು ಓದಿ ಮುಗಿಸಿದರೂ , ಎಲ್ಲೋ ಇದು ಈ ತನಕ ಓದಿದ್ದಕ್ಕಿಂತ ಭಿನ್ನವಾಗಿದೆ ಎಂಬ ಭಾವ.
ಆಮೇಲೆ ಹೈಸ್ಕೂಲಿನ ದಿನಗಳಲ್ಲಿ ಸತ್ಯಕಾಮರ ನಾಯಿ ಮೂಗು, ರಾಜ ಕ್ರೀಡೆ, ಶೃಂಗಾರ ತೀರ್ಥ ಹೀಗೆ ಹಲವಾರು ಪುಸ್ತಕ ಓದಿದೆ. ಬಿಟ್ಟ ಸ್ಥಳಗಳ ತುಂಬಿರಿ ತರಹದ ಅವರ ಬರಹ ಮನಸಿಗೆ ಭಾರವಾಗಿತ್ತು. ಓದಿದರೆ ಏನೋ ಅತೃಪ್ತಿ: (ಎಮ್.ವ್ಯಾಸರ ಓದಿದರೂ ಹಾಗೇ, ಖಾಲಿಯಾಗುವ ಭಯ) ಉಲ್ಲಾಸವಿಲ್ಲ.
ಮತ್ತೆ ಸಿಕ್ಕಿದ್ದು ಅವರ 'ತಂತ್ರಯೋನಿ' ಪಂಚ'ಮ''ಗಳ ನಡುವೆ' ಇವೆರಡು,ಜೊತೆಗೆ ಸುರೇಶ ಸೋಮಪುರರ 'ಅಘೋರಿಗಳ ನಡುವೆ' ಹೊಸ ಜಗತ್ತಿಗೆ ಕಿಂಡಿಯಾಗಿತ್ತು. ಆದರೂ ನನಗೆ ಅಷ್ಟಾಗಿ ಖುಶಿ ಕೊಡದ ಲೇಖಕ ಸತ್ಯಕಾಮ.
ಇತ್ತೀಗಷ್ಟೇ ಅವರ ನೆನಪಿನ ಗ್ರಂಥ 'ಸುಮ್ಮನೆ' ಓದಿದೆ. ವೀಣಾ ಬನ್ನಂಜೆ ಸಂಪಾದಿಸಿರುವ ಇದನ್ನು ಅಭಿನವ ಪ್ರಕಟಿಸಿದೆ. ಒಳ್ಳೆಯ ಸಂಕಲನ. ಸತ್ಯಕಾಮವರ ಬಲ್ಲವರು, ಹಾಗೆಂದು ಭ್ರಮಿಸಿಕೊಂಡವರು ಬರೆದ ಅವರ ಚಿತ್ರಣಗಳ ಸಂಕಲನ. ಕೆಲವರಿಗೆ ಅವರು ಧೂರ್ತ(ಲಂಕೇಶ್..) ಮತ್ತೆ ಕೆಲವರಿಗೆ ಅವಧೂತ..ಹೀಗೆ.
ಇದೊಂತರಾ ಅವರಿವರು ದಯಮಾಡಿದ ತಮ್ಮ ತಮ್ಮ ನೆನಪಿನ ಆಲ್ಬಮ್ ನಿಂದ , ನಾವು ಇಡಿಯ ಚಿತ್ರ ರೂಪಿಸುವ ಯತ್ನ.ಖಾಲಿ ಬಿಟ್ಟದ್ದು ಹಾಗಿದ್ದರೇ  ಚೆಂದ ಮತ್ತು ಪರಿಪೂರ್ಣ!