Wednesday, September 18, 2013

into the wild ಮತ್ತು ನಿಜದ ಪೊಳ್ಳು

ಬೆಸ್ಟ್ ಸೆಲ್ಲರ್ ಥ್ರಿಲ್ಲರ್ಗಳ ನಂತರವೇನಾದರು ಸಾವಧಾನದ ಕತೆಗೆ ಮರಳಿದರೆ ಮನಸು ಪುಟ ಹಾರಿಸುತ್ತದೆ. ಅಬ್ದುಲ್ ರಶೀದರ ಬರಹವೊಂದನ್ನ ಪಟ್ಟಾಗಿ ಓದಕೂತಾಗಲೇ ಇದರಲ್ಲಿ ಅಡ್ರಿನಾಲಿನ್ ರಶ್ ಇಲ್ಲವೆನಿಸಿ ಪಿಚ್ಚೆನಿಸಿತು. ಕಮಟು ವಾಸನೆಯ axe ಮೂಸಿ ಅಭ್ಯಾಸವಾದವರಿಗೆ ಮಲ್ಲಿಗೆ ವಾಸನೆಯೇ!!
ಹಾಗೆ ಲಂಗುಲಗಾಮಿಲ್ಲದೆ ಅಲೆಯುತ್ತಿದ್ದಾಗಲೇ ಬಹಳದಿನಗಳಿಂದ ನೋಡಬಯಸಿದರೂ ಸತ್ಯ ಇದುರಿಸಲು ಹೆದರಿ ಅಥವಾ ಆಫ್ಟರ್ ಇಫೆಕ್ಟಿಗೋ , ಫೋಲ್ಡರ್ ಗಳೊಳಗೆ ಅವಿತಿದ್ದ into the wild ಶುರುಮಾಡಿದೆ.ಒಂಥರಾ ಭವಬಂಧಗಳ ಕಳಚುತ್ತಾ ಹಣ , ಕ್ರೆಡಿಟ್ ಕಾರ್ಡ್ ಎಲ್ಲಾ ಸುಟ್ಟು ಕೊರೆವ ಚಳಿಯಲ್ಲಿ ಸುಳ್ಳು ಬದುಕಿನ ಸುಳ್ಳನ್ನು ತೊರೆದು ಹೋಗುವ ಮೆಕೆಂಡ್ಲಿಸ್ ನ ಕತೆ.ನಿಜವಾದ ಘಟನೆ.
ಯಾಕೋ ಗೊತ್ತಿಲ್ಲ ಈ ಚಿತ್ರ ಚೆನ್ನಾಗಿದ್ದರೂ ನನ್ನೊಳಗೆ ಇಳಿಯಲಿಲ್ಲ.ಕಾರಣ ಗೊತ್ತು ಗುರಿಯಿಲ್ಲದೆ ಒಬ್ಬ ಅಲೆದಾಡಿ ಅನಾಥ ಶವವಾಗುವ ದುರಂತ.ಅಥವಾ  ನಮ್ಮ ಸಿನಿಮಾಗಳಂತೆ ಕತೆಗೊಂದು ಹೀರೋ ,ಹೀರೋಯಿನ್ ಬೇಕೇ ಎಂಬ ಮನಸ್ಥಿತಿ. ಸುಮ್ಮನೆ ಹೀಗೆ ಸಾಗಿದರೆ ಗುರಿಯಿಲ್ಲದೆ 'ಇದೆಂಥದ್ದಪ್ಪಾ, ಕರ್ಮ..' ಅನಿಸತೊಡಗಿ ಪಾರಾಗುವ ದಾರಿ ಅರಸುತ್ತದೆ.
ನನಗೆ ಅನಿಸಿದ್ದು ಈತ ಏಕೆ ಹಿಪ್ಪಿ ಸಂಸ್ಕತಿ ಅನುಸರಿಸಿಲ್ಲ ಅಂತ.ಬಹುಶ  ಅದರ ಏರುಕಾಲ ಕಳೆದು ಹೋಗಿತ್ತಾದ್ದರಿಂದ ಇರಬಹುದು.
ಏನಾದರೂ ಈ ಚಿತ್ರ ನನ್ನನ್ನ ತುಂಬ ದುಃಖಿತನನ್ನಾಗಿಸಿತು.ನಾವು ನೋಡುವ ಬಹುತೇಕ ಸಿನಿಮಾಗಳಲ್ಲಿ ಎಷ್ಟೇ ಕಷ್ಟ ಬಂದರೂ ಆಮೇಲೆ ಸರಿಯಾಗ್ತದೆ ಬಿಡು ಯಾಕೆಂದರೆ ಅವ ಹೀರೋ ಎಂಬ ಹೋಪ್ ಇರುತ್ತೆ.ಇದರಲ್ಲಿ  ಎದುರಿಸಲೇಬೇಕಾದ ಸೋಲು ಸಾವಿನ ರೂಪದಲ್ಲಿ ಕಾದು ಕೂತಿದೆ ಅದೂ ನಮಗೂ ಗೊತ್ತಿದೆ ಅನ್ನುವಾಗಿನ ವಿಷಾದ ಕೊರೆಯುತ್ತದೆ.
ಮರೀಚಿಕೆ ಸುಳ್ಳಾದರೂ ಹಿತವೇ, ಉರಿವ ಸತ್ಯಕಿಂತ!

Monday, September 9, 2013

ಪ್ರೇಮಾ ಕಾರಂತ ಆತ್ಮಕಥನ ' ಸೋಲಿಸಬೇಡ, ಗೆಲಿಸಯ್ಯಾ'

ಇತ್ತೀಚೆಗಷ್ಟೆ ಓದಿ ಮುಗಿಸಿದ ' ಪ್ರೇಮಾ ಕಾರಂತ'ರ ಆತ್ಮಕಥೆ ' ಸೋಲಿಸಬೇಡ ಗೆಲಿಸಯ್ಯಾ'  ರೋಮಾಂಚನಕಾರಿ ಪಯಣವಲ್ಲದೆ ಮನಸ ಕೊಳದೊಳಗೆ ಕಲ್ಲೆಸೆದಂತೆ ಅಲೆಗಳೆಬ್ಬಿಸುತ್ತಲೇ ಇತ್ತು.
ತಮ್ ಜೀವನ ಪಯಣದ ಅತ್ಯಂತ ವಿವಾದಾತ್ಮಕ ಘಟನೆಯಾದ ಕಾರಂತ ವಿಭಾ ಮಿಶ್ರ ಪ್ರಕರಣದಿಂದ ಕಥನ ಶುರು ಮಾಡುವ ಪ್ರೇಮಾ ಕಾರಂತರು ಇಡೀ ಪಯಣವನ್ನ ಹಿಮ್ಮುಖ ಮುಮ್ಮುಖವಾಗಿ ಸಾಗಿಸುವ ರೀತಿಯೇ ಅದಭುತ. ತನ್ನ ಓಡಾಟಗಳು, ನಾಟಕಗಳು, ವಿವಾದಗಳು, ಫಣಿಯಮ್ಮ ಚಲನಚಿತ್ರ ಮೂಡಿದ ಬಗೆ, ಸಂಕಷ್ಟದ , ಖುಷಿಯ(?) ಕಾಲ ಹೀಗೆ ವಿವರಗಳು ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತಾ ಹೋಗುತ್ತಾರೆ.
ಆದರೆ ಕೆಲ ಪ್ರಶ್ನೆಗಳು ಉದಾಹರಣೆಗೆ ಇಡೀ ಕಥನದಲ್ಲಿ ಎಲ್ಲಿಯೂ ಸಂತಾನದ ಬಗ್ಗೆ, ಆ ಆಸೆಯ ಬಗ್ಗೆ ಹಾಗೆ ನಮ್ಮಂತಹ ಸಾಮಾನ್ಯರಿಗೆ ಮಹತ್ವದ್ದು ಅನಿಸಬಹುದಾದ ಸಂಗತಿಗಳ ಪ್ರಸ್ತಾವವೂ ಆಗುವುದಿಲ್ಲ; ಆ ಮಟ್ಟಿಗೆ ಇದೊಂಥರಾ ಸಾರ್ವಜನಿಕ ಕಥನವಾಗುತ್ತದೆ.
ಇನ್ನು ಅವರ ಆತ್ಮಕಥೆಯಾಗಿರುವುದರಿಂದ ಅವರ ನಿಲುವುಗಳು ಢಾಳಾಗೇ ಕಾಣುತ್ತವೆ ನಮಗೆ ಒಪ್ಪಿಗೆಯಾಗದಿದ್ದರೂ.
ಹಾಗೆಯೇ ಇದು ಆ ಕಾಲದ ಸಾಂಸ್ಕ್ರತಿಕ ಪಲ್ಲಟಗಳ ದಾಖಲೆ ಕೂಡಾ,
ಪುಸ್ತಕ ಓದಿ ಮುಗಿಸಿದರೂ ಪ್ರೇಮಾ ಕಾರಂತರು ಕಾಡುತ್ತಾರೆ ಮತ್ತು  ಆ ಮೂಲಕ  ಗೆಲ್ಲುತ್ತಾರೆ!

Saturday, August 24, 2013

ಬೊಜ್ಜು

ಹೀಗೆ ತೋರ ಕಾಣುವ
ಹೊಟ್ಟೆಯನ್ನೂ,
ಶರ್ಟ್ ಮಡಿಸುವಂತೆ ಮಡಿಸಿ
ಇನ್ ಮಾಡುವಂತಿದ್ದರೆ;
ಒಂಚೂರು ದೂರಕ್ಕೂ  'ಉಸ್ಸಪ್ಪ',
ಈಗಷ್ಟೇ ಹೊಟ್ಟೆ ತುಂಬ ತಿಂದು
ರಾತ್ರಿ ಏನೂ ಬೇಡಾ ಅಂದರೂ,
ಹಗಲು ಮಗುಚಿ ಇರುಳ
ಪುಟ ತೆರೆದಂತೆ,
'ಅಬ್ಬಬ್ಬಾ' ತಾಳಲಾರದೆ,
ಇನ್ನು, ಇನ್ನಷ್ಟು;
ಒಂದು ಗಂಟೆ ವಾಕು, ಅರ್ಧ ಗಂಟೆ ಯೋಗ,
ಒಂಚೂರು ನಿಂಬೆ ರಸಕ್ಕೆ ಜೇನು,
ಬೇಡವಾದರೆ
ಬೇವಿನಸೊಪ್ಪು;
ಮರೆತೀರಾ ಖಾಲಿ ಹೊಟ್ಟೆಗೆ!

ಎರಡು ದಿನ, ತಪ್ಪಿದರೆ ಮೂರು,
ಮತ್ತೆ ಮೊದಲಿನಂತೆ,
ಯಾರು ಏಳ್ತಾರೆ ಅಷ್ಟು ಬೇಗ?
ಸ್ವಲ್ಪ ಅತ್ತಿತ್ತ ಆದರೂ ಗ್ಯಾಸು;
ಕಲ್ಲೇ ತಿಂದರೂ ಲಟ್ಟಕನಿರುವ ಹಳಬರು,
ಐ ಆ್ಯಮ್ ವಾಚಿಂಗ್ ಮೈ ಫಿಗರ್ ಹೊಸಬರು,
ಕನಸಲೂ ಸಿಕ್ಸು ಪ್ಯಾಕು,
ಗೂಗಲ್ ತುಂಬಾ ಏಳೇ ದಿನದಲ್ಲಿ
ಹತ್ತು ಕೆ.ಜಿ. ಖಾಲಿ
ಜಾಹೀರಾತು,
ನಿನ್ನೆಯ ಫೋಟೋಗಳ ತುಂಬಾ
ಆಪ್ಯಾಯಮಾನ ನಿಟ್ಟುಸಿರು;
ಕೈ ಮತ್ತೆ ಪ್ಲೇಟಿನೆಡೆಗೇ,
ಯಾರು ಬದುಕಿದ್ದಾರೆ ಸಾವಿರ ವರ್ಷ??
ಇದು ಮುಗಿದರೆ ಮತ್ತೆ ಮುಟ್ಟಲ್ಲ ದೇವರಾಣೆ;
ಟೈರು ಸವೆಯುವ ಆಸೆಗೆಲ್ಲಿದೆ ಕೊನೆ!!

Sunday, July 28, 2013

ಸಿಡ್ನಿಶೆಲ್ಡನ್ jotheya ಮಳೆಗಾಲ

 ಮೊನ್ನೆ ಜೂನ್ ನಲ್ಲಷ್ಟೇ ಸುಮ್ಮನೆ ಅಂಡಲೆಯಲು ಬೆಂಗಳೂರಿಗೆ ಹೋಗಿದ್ದಾಗ ಭಾವನ ಮನೆಯ ಟೇಬಲ್ ಮೇಲೆ ಬಿದ್ದುಕೊಂಡಿದ್ದ ಪುಸ್ತಕ ಕಂಡಿತು. ಇಂಗ್ಲಿಷು ! ಯಾವಾಗಲೂ ಕಬ್ಬಿಣದ ಕಡಲೆಯೇ! ಓಹ್ , ಸಿಡ್ನಿ ಶೆಲ್ಡನ್ ಅಂತ ಆಥರ್ ನ ಹೆಸರು ನೋಡುವಾಗಲೇ 'ಅದು ಸೀರಿಯಸ್ ಆಗಿ ಓದುವ ಪುಸ್ತಕಗಳೇ ಅಲ್ಲ' ಅಂತ ಗೆಳೆಯ ಮೂಗು ಮುರಿಯುತ್ತಿದ್ದದ್ದು ನೆನಪಾಯಿತು; ಹಿಂಬದಿಯ ಕವರಲ್ಲಿ 'ಬೆಸ್ಟ್ ಸೆಲ್ಲರ್' ಅಂತೇನೋ ಹೊಗಳಿಕೆ ಕಂಡು ಕುತೂಹಲ ಗರಿಗೆದರಿ 'ನೋಡುವ,ಅರ್ಥ ಆಗುತ್ತಾ' ಅಂತ ಪುಟ ತಿರುಗಿಸಲು ಶುರು ಮಾಡಿದೆ, 'ನೆಕೆಡ್ ಫೇಸ್ ' ಅಂತ ಕಾದಂಬರಿಯ ಹೆಸರು. ಸೈಕ್ರಿಯಾಟ್ರಿಸ್ಟ್ ಒಬ್ಬನ ಪೇಷೆಂಟುಗಳೆಲ್ಲ ಒಬ್ಬೊಬ್ಬರಾಗಿ ಕೊಲೆಯಾಗೋದು ,ಅವನ ಹಿಂದೆ ಕೊಲೆಗಡುಕರು ಬೀಳೋದು  ಹಾಗೆ ಒಂದು ಮಿಸ್ಟರಿ ಕಥೆ;
   ಅರೆರೆ, ಚೆನ್ನಾಗಿದೆಯಲ್ಲ, ಅಂತ ಊರಿಗೆ ಬಂದವನೇ ಒಂದೊಂದಾಗಿ ಅವರ ಕಾದಂಬರಿಗಳ ಬೆನ್ನುಬಿದ್ದೆ.
ಹಿಡಿದು ಕೂರಿಸುವ , ಹಿಡಿತಕ್ಕೆ ಸಿಗುವ ಇಂಗ್ಲೀಷಿನ ಷೆಲ್ಡನ್ ಸಮಯ ಕೊಳ್ಳಲು ಒಳ್ಳೆ ಸಂಗಾತಿ;
'ಅದರ್ ಸೈಡ್ ಆಫ್ ಮಿಡ್ ನೈಟ್ ','ವಿಂಡ್ ಮಿಲ್ಸ್ ಆಫ್ ಗಾಡ್ಸ್ ',ಸಾಂಡ್ಸ್ ಆಫ್ ಟೈಮ್ ',ಮೆಮೊರೀಸ್ ಆಫ್ ಮಿಡ್ನೈಟ್ ','ಸ್ಕೈ ಈಸ್ ಫಾಲಿಂಗ್ ','ಡೂಮ್ಸ್ ಡೇ ಕಾನ್ಸ್ಪಿರಸಿ ','ಬ್ಲಡ್ ಲೈನ್' ಮುಗಿಸಿದೆ.ಇನ್ನೂ ಹಲವಾರು ಪುಸ್ತಕ ಗೆಳೆಯ ಅಲ್ತಾಫ್ ತಮ್ಮ ಖಜಾನೆಯಿಂದ ಎತ್ತಿ ಕೊಟ್ಟರು;
ಅಲೆದಾಡಿ ತಂದ ಕನ್ನಡ ಪುಸ್ತಕಗಳು ಕರೆಯುತ್ತಿದ್ದರೂ , ಇವನ್ನು ಮುಗಿಸಬೇಕು ಅಂತ ಹಟ ಹಿಡಿದು ಕೂತಿದ್ದೇನೆ!
ಹೆಂಗಿದ್ದರೂ ಮನಸು ಚಿಟ್ಟೆ ತರಾ ಆಲ್ವಾ ! ಮತ್ತೇನಾದರೂ ಕರೆದರೆ ಹೊರಡೋದೇ;
ಸುರಿವ ಮಳೆಗೆ , ಹೊರ ಹೋಗಲೂ ಮನಸ್ಸಿಲ್ಲದೆ, ಡ್ಯೂಟಿಗೆ 'ಛೇ ' ಅಂದುಕೊಳ್ತಾ  ಹೋಗೊಕೂ ಉದಾಸೀನ;
ಸದ್ಯಕ್ಕಿಷ್ಟೇ ;

Thursday, July 4, 2013

what's with tea?

ಮೊದಲೆಲ್ಲ ಒಂದಿಡೀ ಮಗ್ ;
ಈಗ ಕಪ್ಪಿನರ್ಧ 
ಸಾಕು ಚಾ,
ಎಲ್ಲೆಲ್ಲ ಜೊತೆಗಿದ್ದೆ ,
ಸುರಿವ ಮಳೆಯ ಮುಂಜಾವುಗಳಲ್ಲಿ 
ಮಾಡಿನ ಅಂಚಿನಿಂದ ಜಾರುವ ಹನಿಗಳ ಎಣಿಸಲು , 
ಬಿರು ಬಿಸಿಲಲ್ಲಿ  ಮಧ್ಯಾಹ್ನದ ನಿದ್ದೆ ಮುಗಿಸಿ ಎದ್ದಾಗ ,
ಸ್ಟೈಲ್ ಹೊಡೆಯಲು ಎಳೆದ ಸಿಗರೇಟು ಧಮ್ಮಿನ ಜೊತೆ,
ನಿನ್ನ ಪರಿಮಳ,
ಎಷ್ಟು ವೆರೈಟಿಯ ರುಚಿ ;
ಗುಟುಕಿಗೊಂದು  ಕನಸು ,
ಸಾವಿನ ಎಕ್ಸಾಮಲ್ಲಿ ಹೋಪ್ಸ್ ಹೋದಾಗ,
ತಲೆಕೆಟ್ಟ ಲೆಕ್ಚರ್ ಕೇಳಿ ಮಂಡೆ ಬಿಸಿಯಾದಾಗ ,
ನನ್ನ ಚಾ ,
ನನ್ನದು ಮಾತ್ರ;
ಕಪ್ಪ ತಳದಲಿ ಸಕ್ಕರೆ ಕಂಡಾಗ 
ನಿರಾಸೆ,
ಹಾಗಂತ ಇಷ್ಟಪಟ್ಟು ಕುಡಿದದ್ದು ಸುಳ್ಳೇ?
ಆಸ್ವಾದಿಸಿದೆ,
ಚಾ ವೋ, ತೋಡ ನೀರೋ!
ಅದೊಂದು ಧ್ಯಾನ, 
ಬದುಕಂತೆ;
ಈಗಲೂ ಅನಿಸುತ್ತೆ ,
ಒಂದೊಂದು ಸಲವೂ ಚಾ 
ಮತ್ತೆ ಹಳೆಯ ನೆನಪುಗಳ 
ತಾಜಾಗೊಳಿಸಿದಂತೆ ,
ಹೆಚ್ಚು ಮನುಷ್ಯನೂ  ಆಗಿಸುತ್ತೆ ;
ಮತ್ತದೇ ದಾರಿಯಲಿ 
ಮತ್ತೆ ದಾರಿ ತಪ್ಪಿ ಅಲೆದಾಡಲು ಇಷ್ಟಪಟ್ಟಂತೆ ,
ನೆನಪ ನೇವರಿಸಲು ಇದೂ ಒಂದು ಸಾಧನ; 
ಮತ್ತೊಂದು ಗುಟುಕು , 
ಕಳೆದ ಕೊಟಡಿಯ ಬೀಗದ ಕೀ ದೊರೆತಂತೆ ,
ಕಪ್ಪು ಖಾಲಿ;
ಇನ್ನೊಮ್ಮೆ ಸಿಗಲು ಕಾತರ;
ನಮಸ್ಕಾರ !
ಸಿಗುವ ಆಸೆಯಲ್ಲಿ ... 

Tuesday, June 25, 2013

ಜನಾರ್ದನ ಭಟ್ಟರ 'ಅನಿಕೇತನ'

ಇತ್ತೀಚೆಗಷ್ಟೇ ಮುಗಿಸಿದ ಬಿ. ಜನಾರ್ದನ ಭಟ್ ರ 'ಅನಿಕೇತನ' ಕಾದಂಬರಿ ಹಲವಾರು ಕಾರಣಗಳಿಗೆ ಇಷ್ಟವಾಯ್ತು. ಮೊದಲನೇಯದಾಗಿ ಇದು ನನ್ನ ಮಣ್ಣಿನ ಕತೆ; ನಾನು ಕಂಡ ,ಕಾಣುತ್ತಿರುವ, ನನ್ನ ಭಾವಕೋಶದೊಳಗೆ ಇಳಿದ ಪರಿಸರದ ಜನರ ಹಳೇ ಕತೆ. ಮನೆ ಬಿಟ್ಟು ಬೊಂಬಾಯಿಗೆ ಓಡಿ ಹೋಗಿದ್ದ ಕೇಶವ ೧೯೭೫ ರಲ್ಲಿ ತನ್ನ ಊರಿಗೆ ವಾಪಾಸ್ ಬರುವಾಗ ಅವನ ನೆನಪುಗಳ ಕತೆ. ನಿಜವಾದ ಕತೆ ನಡೆಯುವುದು ೧೯೬೧ ರಿಂದ; ಅವನ ತಂದೆ ಮಧು ಭಟ್ಟರು ನಡುಕಣಿಯಲ್ಲಿ ಹೋಟೆಲ್ ಇಡುವುದರಿಂದ.  ಪೇಟೆಯಾದ ಮಂಗಳೂರಿಂದ ವಲಸೆ ಬಂದ ಕುಟುಂಬವೊಂದು ಅಸ್ತಿತ್ವಕಾಗಿ ಹೋರಾಟ ಮಾಡುವ, ಆ ಮೂಲಕ ಗೊತ್ತೋ ಗೊತ್ತಿಲ್ಲದೆಯೋ ಊರಿನ ಆಗುಹೋಗುಗಳಲ್ಲಿ ಪಾತ್ರ ವಹಿಸುವ ಕತೆ. ಇದರ ನಡುವೆ ಊರಿನ ದೊಡ್ಡ ಕುಳಗಳ ಹೊಡೆದಾಟ, ಪರಿಸರ ನಾಶ ಇತ್ಯಾದಿಗಳು ಕತೆಯ ಭಾಗವಾಗಿ ವಿಷಾದ ಹುಟ್ಟಿಸುತ್ತವೆ;  ಕಾರಂತರ ಮರಳಿ ಮಣ್ಣಿಗೆಯ ಮುಂದುವರಿದ ಭಾಗದಂತೆ ಕಾಣುವ ಈ ಕಾದಂಬರಿ , ಸದ್ಯದ ಕನ್ನಡ ಸಾಹಿತ್ಯಿಕ ವಾತಾವರಣದ ನಗರ ಕೇಂದ್ರಿತ ಕಥಾನಕಗಳಿಗೆ ಉತ್ತರವಾಗಿ ನಿಲ್ಲುತ್ತದೆ. ಕೊನೆಗೆ ಕೇಶವ ತನ್ನೂರಿಗೆ ಬಂದಾಗ ಅವನ ನೆನಪಲ್ಲಿದ್ದ ಯಾವುದೂ ಮೊದಲಿನಂತಿರದೆ ತನ್ನ ಕಲ್ಪನೆಯ ಊರಿಗೂ, ಈಗಿನ ನಿಜಕ್ಕೂ ಹೊಂದಿಯಾಗದೆ ಕೇಶವ ಗೊಂದಲಕ್ಕೀಡಾಗಿ ನಿಲ್ಲುತ್ತಾನೆ.
ಜನಾರ್ದನ ಭಟ್ ರ ನಡುಕಣಿ ಕಾದಂಬರಿ ತ್ರಿವಳಿಗಳಲ್ಲಿ ಕೊನೆಯದಾದ ಇದು (ಉಳಿದೆರಡು 'ಉತ್ತರಾಧಿಕಾರ' ಮತ್ತು 'ಹಸ್ತಾಂತರ' ) ಒಂದು ಕಾಲಗಟ್ಟದ ಜನಜೀವನದ ಚಿತ್ರಣವನ್ನು ಯಶಸ್ವಿಯಾಗಿ ತೆರೆದಿಡುವುದರ ಮೂಲಕ ಗೆಲ್ಲುತ್ತದೆ.

ಧೂಳು ಕೊಡವಿದೆ !

ಒಂದು ದಿನ ತಟ್ಟನೆದ್ದು ಇಷ್ಟರವರೆಗೆ  ಸೋಮಾರಿತನದಿಂದ ಬಾಕಿಯಾದ  ಕೆಲಸಗಳ ಹರಿಬರಿಯಲ್ಲಿ ಮುಗಿಸತೊಡಗಿದ್ದು ಗಮನಕ್ಕೆ ಬಂದು ನನಗೇ ಆಶ್ಚರ್ಯವಾಯಿತು; ಬೂದಿಯಿಂದ ಮೈ ಕೊಡವಿಕೊಂಡೆದ್ದ ನಾಯಿಯಂತೆ ಮನಸ ಆಳದಲ್ಲಿದ್ದ ಮರೆತ ಯೋಚನೆಗಳೆಲ್ಲ ತಾ ಮುಂದು ನಾ ಮುಂದು ಅಂತ ಮುಗಿ ಬಿದ್ದಂತೆ! ಅದ್ಯಾವುದೋ ದಿನ ಮುಗಿದರೂ ಕೊಡಲಾರದ ಲೈಬ್ರರಿ ಪುಸ್ತಕ, ಕಟ್ಟದಿದ್ದ ಬಿಲ್ಲು, ಹೇಳ ಮರೆತ ಐ ಲವ್ ಯೂ , ನೆನಪಾಗದಿದ್ದ ಕನಸು , ಅರ್ಧ ಬರೆದ ಕಥೆ, ಪೇರಲೆಯ ವಾಸನೆ , ಹೆಂಡತಿಯ ಕೆನ್ನೆಯ ಮಚ್ಚೆ, ಚಾರ್ಜಿಲ್ಲದ ಮೊಬೈಲು ಇವೆಲ್ಲವೂ  ತಾವು ಇಷ್ಟು ಕಾಲ ಇದ್ದೆವೆಂಬ ಸಣ್ಣ ಸುಳಿವೂ ಕೊಡದೆ ಈಗ ಮುಗಿ ಬಿದ್ದರೆ ಹುಲು ಮನಸಿನ ಪಾಡೇನು?
ಲಹರಿ ಬಂದದ್ದರ ಬರೆಡುವ ಯತ್ನ.. ಏನೇನೂ ?!!   

Saturday, March 2, 2013

ನಶೆ

ಖಾಲಿ ಹೊಟ್ಟೆಗೆ ತಗೊಂಡ ಮಾತ್ರೆ ಥರಾ ನಿನ್ನ ನಶೆ ಇನ್ಸ್ಟಾಂಟು; ಸರ್ರನೆ ಏರಿ ಸರಿಯಾದ ಹೆಜ್ಜೆ ಇಡುವಂತೆ ಫೀಲು, ಓಹ್, ದಾರಿ ಮಾತ್ರ ಪೂರ್ತಿ ಅಂಕು-ಡೊಂಕು , ನೆಲ ಜಾರಿ ಮುಗಿಲ ಮೇಲಿನ ಒಂಟಿ ಯಾನ; ಯಾವುದೋ ಶಬ್ದವೂ ದೊಡ್ಡ ಚಿತ್ರವಾದಂತೆ, ಸನ್ನೆಗಳಿಗೆಲ್ಲ ಹೊಸ ಅರ್ಥ; ಈ ಮರುಳಿನ ಕೊನೆ ನೆನೆದರೆ, ಬೇಡ ಬೇಡ ಇದೇ ಸಾಕು, ಸದ್ಯ ಮತ್ತು ಶಾಶ್ವತ!