Saturday, June 16, 2012

ಕಿಟಕಿ ಮತ್ತು ಆಕಾಶ

ನನ್ನ ರೂಮು
ನನ್ನ ಕಿಟಕಿ
ಹೊರಗೆ ಚೌಕಟ್ಟಿನ ಆಕಾಶ;
ನೋಡಿದರೆ ಕಾಣುವ.
ನನ್ನೊಳಗೆ ಬೆಳೆಯುವ.
ನನ್ನದಲ್ಲದ ಆಕಾಶ;
ಇಲ್ಲಿರದ ಅಲ್ಲಿ ಸಲ್ಲದ
ಭಾವಗಳ
ಕಿಟಕಿಯಿಂದಾಚೆ ಎಸೆದು
ನೆಲ ಮುಟ್ಟುವ ಮೊದಲೇ
ಅಜ್ಜನ ಗಡ್ಡದಂತೆ ತೇಲಿ,
ಮಾಯವಾಗಿ,
ಒಂದು ದಿನ ನಾನೂ ಹಾಗೆ,
ಎಲ್ಲವನು ಮುಷ್ಟಿಯಲಿ,
ಸೋರದಂತೆ ಹಿಡಿದು
ತುಂಬ ದೂರಕೆ ತಿರುಗಿ
ಬಾರದಂತೆ
ಎಸೆಯಬೇಕೆಂಬ ಕನಸು,
ಜೊತೆಗೆ ನಾನು ಕಳೆದುಹೋಗುವ ಭಯ;
ಮೀರಲಾರದ ತವಕ ಮತ್ತು
ನೋವಿರದ ನಾಳೆಗಳ ಆಸೆ;
ಹೇಗೂ,
ರೂಮೂ ಇದೆ
ಕಿಟಕಿಯೂ ಇದೆ
ಅಸ್ತಿತ್ವದ್ದೇ ಪ್ರಶ್ನೆ!