Friday, November 18, 2011

ನನ್ನ ದಾರಿಯ ಕನಸುಗಳು

ನನಗಂತೂ ಪ್ರಯಾಣ ಅಂದರೆ ಇಷ್ಟ; ಅದರಲ್ಲೂ ಬಸ್ಸಲ್ಲಿ. ಸುಮ್ಮನೆ ಕಿಟಕಿಯ ಸರಳಿಗೆ ಮುಖ ಅಂಟಿಸಿಕೊಂಡು ಹೊರಗೆ ನೋಡುತ್ತಾ, ಮಿಂಚಿ ಮರೆಯಾಗುವ ಜನರ ಮುಖಭಾವ ಅಳೆಯುತ್ತಾ, ನನ್ನೊಳಗೆ ಕನಸುತ್ತಾ ಹೋಗುವುದೂ ಅಂದರೆ ಸ್ವರ್ಗ! ಅದೆಲ್ಲಾ ಬೋರಾಯಿತು ಅಂದರೆ ಕಿವಿಗೊಂದು ಇಯರ್ ಪೋನ್ ಸಿಕ್ಕಿಸಿಕೊಂಡು ಆರಾಮಾಗಿ ಸೀಟಿಗೆ ಬೆನ್ನು ಚಾಚಿ ನಿದ್ದೆ; ಆಮೇಲೆ ಕಂಡಕ್ಟರ್ ಕೊನೆಯ ಸ್ಟಾಪ್ ನಲ್ಲಿ ತಟ್ಟಿ ಎಬ್ಬಿಸಿದರೇ ಈ ಲೋಕಕ್ಕೆ! ಇದಕ್ಕೆಲ್ಲ ಬ್ರೇಕ್ ಬಿದ್ದದ್ದು ಬೈಕ್ ಬಂದ ಮೇಲೇ; ಒಂದು ನನಗೆ ಸರಿಯಾಗಿ ಓಡಿಸಲು ಬರುತ್ತಿರಲಿಲ್ಲ ಅಂತ, ಇನ್ನೊಂದು ಅದರಲ್ಲಿ ಒಂದು ಅರ್ಧ ಗಂಟೆಯೋ ಒಂದು ಗಂಟೆಯೋ ಬೇಗ ತಲುಪಿ ಮಾಡುವುದಾದರೂ ಏನು? ನನ್ನ ಖಾಸಗಿ ಸಂತೋಷ ಕೊನೆಯಾಗುತ್ತಲ್ಲಾ ಅಂತ, ಆದರೆ ಹಾಗಾಗಲಿಲ್ಲ.
ಡ್ಯೂಟಿಲಿ ನನ್ನ ಅಪ್ ಸ್ಟ್ರೀಮ್, ಡೌನ್ ಸ್ಟ್ರೀಮ್ ಇರುವ ಪುಣ್ಯಾತ್ಮರು ಅಡ್ಜಸ್ಟ್ ಮಾಡಿಕೊಂಡು ಚೇಂಜ್ ಕೊಟ್ಟರೆ, ಆಫ಼್ ನ ಹಿಂದಿನ ದಿನವೇ ಮಧ್ಯಾಹ್ನವೇ ಮನೆ ಕಡೆ ಓಟ. ಆ ಕೆಟ್ಟ ಬಿಸಿಲಿಗೆ ಕಾದು ಹಪ್ಪಳದಂತಾಗಿ, ಒಂದೂವರೆ ಲೀಟರ್ ಬೆವರಲ್ಲಿ ತೊಯ್ದ ಅಂಗಿ ಬೆನ್ನಿಗಂಟಿಕೊಂಡು ಕಿರಿಕಿರಿ ಹುಟ್ಟಿಸಿ ಯಾವಾಗ ಮನೆ ಮುಟ್ಟುವೆನೋ ಅನಿಸುತ್ತಿತ್ತು. ಕಂಪೆನಿಯಿಂದ ಮನೆಗೆ ಸರಿಸುಮಾರು ೭೫ ಕಿ.ಮೀ.ಗಳು. ಮಧ್ಯಾಹ್ನದ ಉರಿಬಿಸಿಲಲ್ಲಿ ಸುರತ್ಕಲ್ ಟು ಮಂಗಳೂರು ಟು ಬಿ.ಸಿ.ರೋಡ್ ಟು ವಿಟ್ಲ ಟು ಕನ್ಯಾನ ದಾರಿ, ಕ್ಷಣ ಕ್ಷಣಕ್ಕೂ ಅಸಹನೆ; ಹಾಗೂ ಹೀಗೂ ಮನೆ ತಲುಪಿ ಉಸ್ಸಪ್ಪಾ ಅಂದರೆ ಮುಗಿಯಿತು.
ಆದರೆ ಆ ಪುಣ್ಯಾತ್ಮರು ಚೇಂಜ್ ಕೊಡದಿದ್ದರೆ ನನ್ನ ನಾರ್ಮಲ್ ’ಬಿ’ ಶಿಫ಼್ಟ್ ಮುಗಿಸಿ ಮರುದಿನ ಬೆಳಿಗ್ಗೆ ಐದೂವರೆಗೆ ಹೊರಡುವ ಸಂಭ್ರಮ! ಚುಮು ಚುಮು ಚಳಿಯಲ್ಲಿ, ಅಲ್ಪ ಸ್ವಲ್ಪ ಕತ್ತಲಿನಲ್ಲಿ, ದಾರಿಯಲ್ಲಿ ಹಾಲಿನ ವ್ಯಾನ್ ಗಳ, ಟ್ಯಾಂಕರ್ ಗಳ ಭರಾಟೆ; ಅವು ಬಿಟ್ಟರೆ ಅಂತಹಾ ವಾಹನಗಳಿಲ್ಲದ ಹಾದಿ, ಆ ದಾರಿಯಲ್ಲಿ ನನಗಿಷ್ಟ ಬಂದ ಹಾಗೆ ಹೋಗುವುದು. ಮಧ್ಯಾಹ್ನದ ಹಾಗೆ ಕಾಲೇಜ್ ಗಳೆಲ್ಲಾ ಬಿಟ್ಟಿರುತ್ತದೆ ಸ್ಲೋ ಆಗಿ ಹೋದರೆ ಯಾರಾದರು ನೋಡಿದರೆ ( ಎಸ್ಪೆಷಲೀ ಹುಡುಗಿಯರು ) ಏನು ಅಂದುಕೊಳ್ಳಬಹುದು ಎಂಬಂಥಹ ಆತಂಕಗಳಿಲ್ಲ. ನನ್ನ ದಾರಿಗೆ ನಾನೇ ರಾಜ! ಹಾಗೆ ನಿಧಾನಕ್ಕೆ ಆಚೆ ಈಚೆ ನೋಡುತ್ತಾ, ಕಲ್ಲಡ್ಕದ ’ಲಕ್ಷ್ಮೀ ನಿವಾಸ’ ದಲ್ಲಿ ನನ್ನ ಫ಼ೆವರೀಟ್ ’ಕೆ.ಟೀ.’ ಕುಡಿದು, ಫ಼್ರೆಶ್ ಆದ ಮನಸಿಂದ ಮನೆಯತ್ತ, ಅಲ್ಲಿ ಚಾ ಲೋಟ ಹಿಡಿದು ದಾರಿ ಕಾಯುತ್ತಾ ನಿಂತಿರುವ ಅಮ್ಮ ಮತ್ತು ಬೆಳಕು ಹರಿದ ಮೇಲೆ ಹೊರಟರೆ ಏನಾಗುತ್ತಿತ್ತು ಅನ್ನುವ ಅಮ್ಮನ ಬೈಯ್ಗುಳ!
ಹಾಗೆ ಬರುತ್ತಿರುವಾಗೊಮ್ಮೆ ದಾರಿಯಲ್ಲಿ ಫ಼ರಂಗೀ ಪೇಟೆಯ ಬಳಿ ಒಬ್ಬ ಅಜ್ಜ ಶೂ ಎಲ್ಲಾ ಹಾಕಿಕೊಂಡು ಬಾಯಲ್ಲಿ ಸಿಗರೇಟು ಕಚ್ಚಿಕೊಂಡು ಜಾಗಿಂಗ್ ಹೋಗಿರುತ್ತಿರುವುದು ದೂರದಲ್ಲೇ ಕಂಡಿತು. ಬಹುಶಃ ಇವರು ಹೆಂಡತಿ ಬೈಯ್ತಾಳೆ ಅಂತ ಸಿಗರೇಟ್ ಸೇದಲು ನೆಪ ಮಾಡಿಕೊಂಡು ಹೊರಟದ್ದು ಅನ್ನಿಸಿ ಸರಿಯಾಗಿ ನೋಡೋಣ ಅಂತ ಗಾಡಿ ಸ್ಲೋ ಮಾಡಿಕೊಂಡು ಅವರ ಹತ್ತಿರ ಬರುವಾಗ ಅವರು ಕೈ ತೋರಿಸಿ ನನ್ನನ್ನು ನಿಲ್ಲಿಸಿದರು, ಯಾಕಪ್ಪಾ? ಅಂದುಕೊಳ್ಳುತ್ತಾ ನಿಲ್ಲಿಸಿದೆ, ನನ್ನ ಹತ್ತಿರ ಬಂದು, "ಕಿಡ್, ಅಲ್ಲಿಂದ ನೋಡ್ತಾ ಇದ್ದೆ, ತುಂಬಾ ಫ಼ಾಸ್ಟ್ ಆಗಿ ಬರ್ತಾ ಇದೀಯ, ಬೇಡ! ನನ್ನ ಮಗ ಕೂಡ ಹೀಗೇ ಬಿಡ್ತಾ ಇದ್ದ. ಈಗ ಅವನಿಲ್ಲ, ಆಕ್ಸಿಡೆಂಟ್ ನಲ್ಲಿ ಹೋಗಿಬಿಟ್ಟ" ಅಂತಂದು ಹೋಗೇಬಿಟ್ಟರು. ಫ಼ರಂಗೀಪೇಟೆಗೆ ಹತ್ತಿರದ ಆ ದಾರಿಯಲ್ಲಿ ಕ್ಷಣ್ ಕಾಲ ಸಾವಿನ ಭಯ ಕಾಡಿದ್ದು ಸುಳ್ಳಲ್ಲ, ಅವತ್ತಿಂದ ಆ ದಾರಿಯಲ್ಲಿ ಹೋಗುವಾಗ ಆ ಅಜ್ಜನ ಹುಡುಕುತ್ತವೆ ಕಣ್ಣು. ಇನ್ನೂ ಸಿಕ್ಕಿಲ್ಲ.
ಹೀಗೆ ಇನ್ನೊಂದು ಸಲ ನನ್ನ ಪಾಡಿಗೆ ಹೋಗುತ್ತಿದ್ದಾಗ ಸ್ಕೂಟರಲ್ಲಿ ಅಪ್ಪನ ಬೆನ್ನನ್ನು ಅವಿಚಿಕೊಂಡು ಶಾಲೆಗೆ ಹೊರಟ ಏಳೋ ಎಂಟೋ ವರ್ಷದ ಪುಟ್ಟ ಹುಡುಗಿಯೊಬ್ಬಳು, ತಟಕ್ಕನೆ ಹಿಂತಿರುಗಿ, ನಕ್ಕು ಕೈ ಆಡಿಸಿದ್ದಳು! ಅವಳು ಯಾರನ್ನು ನೋಡಿ ಕೈ ಆಡಿಸಿದ್ದಳೋ, ನನಗಂತೂ ನನಗೇ ಅನ್ನಿಸಿ, ಇಂಥಹ ಪುಟ್ಟ ತಂಗಿ ನನಗಿದ್ದರೇ, ಅನ್ನಿಸಿತ್ತು ಗಾಡವಾಗಿ!
ಈ ದಾರಿಯಲ್ಲಿ ಎದುರಾಗುವ ಮುಖ್ಯ ಶತ್ರುಗಳು ಅಂದರೆ ನಾಯಿಗಳು! ದನಗಳ ಡೈರಕ್ಷನ್ ಆದರೂ ಗೊತ್ತಾಗುತ್ತದೆ, ಇವುಗಳದಲ್ಲ, ಕಲ್ಲಡ್ಕ ಹತ್ತಿರ ಒಮ್ಮೆ ಸ್ಪೀಡಾಗಿ ಹೊಗುತ್ತಿದ್ದಾಗ ನಾಯಿಯೊಂದು ಅಡ್ಡ ಬಂತು. ಏನೂ ಆಗದಿದ್ದರೂ ಜೀವ ಬಾಯಿಗೆ ಬರುವುದು ಅಂದರೆ ಏನೆಂದು ಅವತ್ತು ಅರ್ಥವಾಯಿತು!
ಹಾಗೇ ಕಿವಿಗೆ ಇಯರ್ ಫ಼ೋನ್ ಸಿಕ್ಕಿಸಿಕೊಂಡು ಒಂದ್ಸಲ ಬೈಕಲ್ಲಿ ಹೋಗಿದ್ದೆ, ಒಂದೇ ಸಲ! ವಿಟ್ಲದ ಹತ್ತಿರದ ತಿರುವಲ್ಲಿ ಯಾವುದೋ ಮೆಲೋಡಿ ಸಾಂಗ್ ಗೆ ಕೊಂಚ ಇಮೋಷನಲ್ ಆದ ಬೈಕ್ ತಾನಾಗಿ ರೋಡ್ ಬಿಟ್ಟು ಕೆಳಗಿಳಿದು, ಓಲಾಡಿ ಅಡ್ಡ ಬಿತ್ತು! ನಾನು ಕಿವಿಯೊಳಗಿದ್ದ ಹಾಡಿನ ಸಮೇತ ರೋಡಿಗೆ ಬಿದ್ದೆ! ಅವತ್ತಿಂದ ನನ್ನ ಮ್ಯೂಸಿಕ್ ಪ್ರಿಯ ಬೈಕ್ ಜೊತೆಗಿರುವಾಗ ಹಾಡು ಕೇಳಬಾರದೆಂಬ ಬುದ್ಧಿ ಬಂತು.
ಆದರೂ ಮನಸು ಇನ್ನೂ ಕನಸುತ್ತದೆ, ಬೆಳ್ಳಂಬೆಳಗ್ಗೆ, ಹೀಗೆ ಬೈಕಲ್ಲಿ ಹೋಗುವಾಗ , ದಾರಿಯಲ್ಲಿ ಯಾರೋ ಹೆಸರು ತಿಳಿಯದ , ಊರು ತಿಳಿಯದ ಅಪರಿಚಿತ ಸುಂದರಿಯೊಬ್ಬಳು ಕೈ ತೋರಿಸಿ ಲಿಫ಼್ಟ್ ಕೇಳಿದರೇ? ಅಲ್ಲೇ ಒಂದು ಡ್ಯುಯೆಟ್ ಶುರುವಾದರೇ?
ಟ್ರಾಜಿಡಿ ಅಂದರೆ, ಹಾಗೆ ಕೈ ಚಾಚಿ ನಿಲ್ಲಿಸಿ, "ಗಾಡಿ ಸೈಡಿಗೆ ಹಾಕಪ್ಪಾ" ಅನ್ನೋದು ಮಾತ್ರ, ಯಾವಾಗ್ಲೂ ಪೋಲೀಸರು!!!

Friday, November 4, 2011

ಹೀಗೆಯೇ ಒಂದು ಕತೆ!??

ರಿಫ಼ೈನರಿ ಅಂದ ಮೇಲೆ, ಅದೂ ಇದೂ ಅಟೆಂಡ್ ಮಾಡೋದು, ರಿಪೇರಿ ಮಾಡೋದು ಎಲ್ಲಾ ಸಹಜವೇ; ಆದರೆ ಕೆಲವು ಎಫ಼್.ಟಿ.,ಪಿ.ಟಿ.ಗಳೆಲ್ಲ ತುಂಬಾ ಹೈಟಿನಲ್ಲಿರುತ್ತವೆ, ಅದನ್ನ ಚೆಕ್ ಮಾಡಬೇಕು ಅಂದರೆ ಅಪ್ರೋಚ್ ಇಲ್ಲ, ಸ್ಕಫ಼್ ಹೋಲ್ಡ್ಂಗ್ಸ್ ಬೇಕು. ಈ ಸ್ಕಫ಼್ ಹೋಲ್ಡಿಂಗ್ಸ್ ಹಾಕಲು ಇರುವ ಕಾಂಟ್ರಾಕ್ಟ್ ಗ್ರೂಪಿನಲ್ಲಿ ಹೆಚ್ಚಾಗಿ ಕೆಲಸ ಮಾಡೋರು ಉತ್ತರ ಭಾರತೀಯರು. ಅಲ್ಲೆಲ್ಲ ಎಕರೆಗಟ್ಟಲೆ ಜಮೀನು ಇರುವವರು, ಬರ ಬಂದೋ ಅಥವಾ ಇನ್ಯಾವುದೋ ಕಾರಣಕ್ಕೆ ಇಲ್ಲಿ ಬಂದು,ಇಲ್ಲಿ ದಿನಗೂಲಿ ಲೆಕ್ಕದಲ್ಲಿ ದುಡಿಯುತ್ತಿರುತ್ತಾರೆ. ಅಲ್ಲಲ್ಲಿ ಹರಿದ, ಪೇಂಟ್ ಮೆತ್ತಿಕೊಂಡ ಬಟ್ಟೆಗಳಲ್ಲಿ ಇವರು ಪ್ಲಾಂಟ್ ತುಂಬೆಲ್ಲಾ ಕೊಲಾಜ್ ಚಿತ್ರದಂತೆ ನಡೆದಾಡುವಾಗ ನಾವೆಷ್ಟು ಅದೃಷ್ಟವಂತರು ಅನಿಸುತ್ತದೆ. ನಮ್ಮನ್ನೆಲ್ಲ ಇವರು "ಭೈಯ್ಯಾ.." ಅಂತ ಕರೆದು ಮಾತಾಡಿಸುವ ಕಾರಣ ಇಲ್ಲಿರುವವರ ಬಾಯಲ್ಲಿ ಅವರೆಂದರೆ ’ಭೈಯ್ಯ’ ಅಷ್ಟೇ!
ಹೀಗೆ ಭೈಯ್ಯಂದಿರ ಗುಂಪಲ್ಲಿ ನನಗೆ ಪರಿಚಯವಾದವನೇ ರಾಮ; ನಮ್ಮ ಪ್ಲಾಂಟ್ ಶಟ್ ಡೌನ್ ಟೈಮ್ ನಲ್ಲಿ ಪಿಟ್ಟರ್ ಗಳೊಂದಿಗೆ ಬಂದವ. ನಡುರಾತ್ರಿ ಯಾವ ಹೊತ್ತಲ್ಲಿ, ಮೆಕ್ಯಾನಿಕಲ್ ಕಂಟೇನರ್ ಗೆ ಹೋಗಿ ಕರೆದರೂ ಎದ್ದು ಬಂದು ಕೆಲಸ ಮಾಡುತ್ತಿದ್ದ, ಒಂದು ಚಾ ಕೊಟ್ಟರೆ ಎಂಥಾ ಕೆಲಸಕ್ಕೂ ಸೈ!
ಹೀಗೊಮ್ಮೆ ನಡುರಾತ್ರಿಯಲ್ಲಿ ಯಾವುದೋ ಕೆಲಸ ಮಾಡುತ್ತಿದ್ದಾಗ ನಾನೂ ಅಲ್ಲೇ ನಿಂತಿದ್ದೆ; ಕೆಲಸ ಮಾಡುತ್ತಿದ್ದವನು ನಡುವೆ ಒಮ್ಮೆ ಕತ್ತು ಹೊರಳಿಸಿ, "ಸಾಬ್, ಆಪ್ಕಿ ಶಾದಿ ಹುಯಿ ಹೈ ಕ್ಯಾ?" ಎಂದು ಕೇಳಿದ, ಈ ನಡುರಾತ್ರಿಯಲ್ಲಿ ಇದೆಂತಹ ಪ್ರಶ್ನೆ ಅನ್ನಿಸಿದರೂ, "ನಹಿ ಯಾರ್.." ಅಂದುತ್ತರಿಸಿದೆ. ಇಷ್ಟಗಲ ಕಣ್ಣರಳಿಸಿ, "ಹಮಾರೆ ಯಹಾಂ ಬೀಸ್, ಇಕ್ಕೀಸ್ ಕೊ ಹೊತೀ ಹೈ.." ಅಂದ. ಎನನ್ನಿಸಿತೋ ತನ್ನ ಕಥೆ ಹೇಳಲು ಶುರು ಹಚ್ಚಿಕೊಂಡ; ಅವನ ವಿವರಣೆಯಿಂದ ತಿಳಿದದ್ದು ಇಷ್ಟು- ಊರಲ್ಲಿ ಯಾರದೋ ಮದುವೇಲಿ ಒಂದು ಹುಡುಗೀನ ನೋಡಿ ಇಷ್ಟಪಟ್ಟನಂತೆ, ಅವಳಪ್ಪನ ಬಳಿ ಕೇಳಿದನಂತೆ, ಅವಳಪ್ಪ ಎರಡು ಕುದುರೆ ಇರುವ ಗಾಡಿ ಖರೀದಿಸು ಆಮೇಲೆ ಮದುವೆ ಅಂತಂದು ಕಳಿಸಿದರಂತೆ. ಅಲ್ಲಿಂದ ಓಡಿ ಬಂದವ ಮುಂಬಯಿಯಲ್ಲಿ ಕೆಲ ಕಾಲ ಕೂಲಿ ಮಾಡಿಕೊಂಡಿದ್ದನಂತೆ, ಅಲ್ಲಿ ದುಡಿದು ಸುಣ್ಣವಾದವನಿಗೆ, ಯಾರೋ ಪರಿಚಯದವರು ಇಲ್ಲಿನ ರೈಲು ಹತ್ತಿಸಿ ಕಳಿಸಿದರಂತೆ; ಈಗ ಇಲ್ಲಿ. ನನಗಾದ ಅಚ್ಚರಿ ತೋರಗೊಡದೆ, " ಕಿತ್ನೆ ಸಾಲ್ ಹುವೇ ಯೇ ಸಬ್ ಹೋಕರ್?" ಅಂತ ಕೇಳಿದೆ. ಮೂರು ಬೆರಳೆತ್ತಿ ತೋರಿಸಿದ. ಈ ನಡುರಾತ್ರಿಯಲ್ಲಿ ಇವನು ಹೀಗೆ ಮನಸು ತೆರೆದು ತನ್ನ ಕಥೆ ಹೇಳುವುದು, ಇವನಿಗೆ ಗೊತ್ತೇ ಇಲ್ಲದ ನಾನು ಅದನ್ನ ಕೇಳುವುದು ಎಲ್ಲಾ ಎಷ್ಟು ವಿಚಿತ್ರ ಅನ್ನಿಸಿತು. ಹಾಗೇ ನಾನು ನನ್ನ ಕಥೆ ಹೇಳುವಂತಿದ್ದರೆ? ಬೇಡ ಅನ್ನಿಸಿತು.
ಅಷ್ಟರಲ್ಲಿ ಟೀ ಬಂತು. ಬೇರೇನೂ ಹೇಳಲು ತೋಚದೆ, "ಆ ಭೈಯ್ಯಾ, ಸ್ನಾಕ್ ಭೀ ಲೇ ಲೊ" ಅಂದೆ. "ಶುಕ್ರಿಯಾ ಸಾಬ್" ಅಂದನ್ನುತ್ತಾ, ತಿಂಡಿ ತೆಗೆದುಕೊಂಡು ತಿನ್ನುತ್ತಾ ಕೂತವ, ಥಟ್ಟನೇ ಏನೋ ನೆನಪಾದಂತೆ, "ಅಬ್ ಇಥ್ ನೇ ಸಾಲ್ ಗುಜ಼ರ್ ಗಯೆ, ಮೆ ತೊ ಉದರ್ ಗಯಾ ನಹೀ, ಉಸ್ ಕೀ ಶಾದಿ ನಹೀ ಹುಯಿ ಹೋಗಿ ನಾ?" ಎಂದು ನನ್ನ ನೋಡುತ್ತಾ, ತನ್ನೊಳಗೇ ಎಂಬಂತೆ ಕೇಳಿಕೊಂಡ; "ನಹೀ ಯಾರ್, ಫ಼ಿಕರ್ ಮತ್ ಕರ್" ಅಂತ ನನಗೆ ಗೊತ್ತೇ ಇರದ ಅವನ ಹುಡುಗಿಯ ಪರವಾಗಿ ಹೇಳಿದೆ. ಅಷ್ಟಕ್ಕೇ ಖುಷಿಯಾದ ಆತ ,"ಚಲೋ ಜೀ, ಭಗವಾನ್ ಹೆ ಊಪರ್.." ಎಂದೆನ್ನುತ್ತಾ ತನ್ನ ತಿಂಡಿ ಮುಗಿಸಿ, ಮತ್ತೆ ಮಲಗಲು ಹೋದ ನಗುತ್ತಾ.
ಆ ಶಟ್ ಡೌನ್ ಪೂರ್ತಿ ಆತ ನಮ್ಮ ಪ್ಲಾಂಟಲ್ಲೇ ಇದ್ದ; ನಾನು ಡ್ಯೂಟಿಗೆ ಬಂದಾಗಲೆಲ್ಲ ಕಣ್ಣಿಗೆ ಸಿಗುತ್ತಿದ್ದ ಏನಾದರು ಕೆಲಸ ಮಾಡಿಕೊಂಡು. ಮತ್ತೆಂದೂ ಅವನು ಅವನ ವಿಷಯ ಎತ್ತಲಿಲ್ಲ, ನಾನೂ ಕೇಳಲಿಲ್ಲ.
ಶಟ್ ಡೌನ್ ಎಲ್ಲಾ ಮುಗಿದು, ಅವರೆಲ್ಲಾ ಹೋಗಿ, ಪ್ಲಾಂಟ್ ನಾರ್ಮಲ್ ಆಗಿ, ಮತ್ತೆ ನಾವು ಯಾವಗಿನಂತೆ ಕೂತು ಕನಸುವ ಸ್ಥಿತಿಗೆ ಮರಳಿದ ಮೇಲೆ, ಮನೆ ಕಟ್ಟುವ, ಅದಕ್ಕಾಗಿ ಜಾಗ ಖರೀದಿಸುವ ನನ್ನ ಹಳೆಯ ಕನಸು ಮರುಕಳಿಸಿತು. ಹಾಗೊಂದು ದಿನ, "ಅಲ್ಲೊಂದು ಜಾಗ ಇದೆ, ನೋಡಲು ಹೋಗೋಣ" ಅಂದ ಪರಿಚಯದವರ ಕಾಯುತ್ತಾ ಪೇಟೆಯಲ್ಲಿ ನಿಂತಿದ್ದೆ. ಸ್ವಲ್ಪ ದೂರದಲ್ಲಿ ಗುಂಪೊಂದು ಬರುವುದು ಕಂಡಿತು. ಅರೇ! ನಮ್ಮ ’ಭೈಯ್ಯ’ ನವರ ಗುಂಪು! ಅವರಲ್ಲಿ ರಾಮನೂ ಇದ್ದ. ಮೈಯ್ಯೆಲ್ಲ ಕೊಳೆಯಾದ, ಹರಿದ ಬಟ್ಟೆಗಳು, ಅವರಲ್ಲೊಬ್ಬ ತನ್ನ ಮೊಬೈಲ್ ನಲ್ಲಿ ದೊಡ್ದದಾಗಿ ಹಾಡು ಹಾಕಿದ್ದ, ಯಾವುದೋ ಗೊತ್ತಾಗದ ಭಾಷೆಯ ಹಾಡು; ಅವರೆಲ್ಲಾ ಆ ಹಾಡಿಗೆ ತಲೆದೂಗುತ್ತಾ, ಕೈ ಕಾಲು ಆಡಿಸುತ್ತಾ ಭಯಂಕರ ಖುಷಿಯಲ್ಲಿ ನಡೆದು ಹೋಗುತ್ತಿದ್ದರು. ರಾಮನಂತೂ ದೊಡ್ಡದಾಗಿ ಆ ಹಾಡು ಹಾಡುತ್ತಾ ನಗುತ್ತಾ ಇದ್ದ. ನಿಜವಾದ ಖುಷಿ ಎಲ್ಲಿದೆ ಅನ್ನೋ ಪ್ರಶ್ನೆ ಸುಮ್ಮನೆ ನನ್ನ ಮನಸಲ್ಲಿ ಮಿಂಚಿ ಮರೆಯಾಯಿತು. ಅವರು ಯಾರೂ ನನ್ನ ಗುರುತಿಸಲಿಲ್ಲ.
ಇದಾಗಿ ನಾಲ್ಕು ತಿಂಗಳಿಗೆ, ಯಾವುದೋ ವಾಲ್ವ್ ಪ್ರಾಬ್ಲಮ್ ಆಗಿ ಪ್ಲಾಂಟ್ ಶಟ್ ಡೌನ್ ತಗೊಳ್ಳೋದು ಅನಿವಾರ್ಯವಾಯ್ತು. ಈ ಸಲ ಬಂದ ಗ್ರೂಪ್ ಅವರೇ ಆದರೂ, ಅವರಲ್ಲಿ ರಾಮನಿರಲಿಲ್ಲ; ಕೆಲಸಗಳ ಮಧ್ಯೆ ಅವರಲ್ಲೊಬ್ಬನನ್ನು ವಿಚಾರಿಸಿದೆ, "ರಾಮ್ ಕಹಾನ್ ಹೈ?" ಆತ ನನ್ನನ್ನೊಮ್ಮೆ ನೋಡಿ, ಅವಜ್ಞೆಯಿಂದ ಪಕ್ಕದಲ್ಲೊಮ್ಮೆ ಉಗುಳಿ, "ಗಯಾ..." ಎಂದುತ್ತರಿಸಿ, ತನ್ನ ಕೆಲಸದಲ್ಲಿ ಮಗ್ನನಾದ. ಮತ್ತೆ ಕೇಳಲು ಮನಸು ಬರಲಿಲ್ಲ.
ಹೋಗಿದ್ದಾನಾ? ಮದುವೆಯಾದನಾ? ಅವಳು ಇವನಿಗೆ ಕಾದು ಕುಳಿತಿದ್ದಳಾ? ಅಲ್ಲ ಸತ್ತೇ ಹೋಗಿದ್ದಾನಾ?!! ಯಾರಿಗೆ ಗೊತ್ತು?
ನಾನಂತೂ ಮತ್ತೆ ಅವನನ್ನು ನೋಡಲಿಲ್ಲ.