Sunday, June 12, 2011

ತಲ್ಲಣ

ತನ್ನ ಬೆನ್ನನ್ನು ಗಟ್ಟಿಯಾಗಿ ಅವಿಚಿಕೊಂಡಿದ್ದ ವೀಣಾಳ ಸ್ಪರ್ಶದ ಪುಳಕವನ್ನು ಅನುಭವಿಸುತ್ತಾ ಪುತ್ತೂರಿಂದ ಮಂಗಳೂರಿಗೆ ಬೈಕಲ್ಲಿ ರಭಸವಾಗಿ ಹೋಗುತ್ತಿದ್ದ ಕರುಣಾಕರ, ಕಲ್ಲಡ್ಕ ಬರುತ್ತಿದ್ದಂತೆ ಯಾಕೋ ಅಸ್ವಸ್ಥನಾದ, ತಾನು ಚಿಕ್ಕವನಿದ್ದಾಗ ಕಾಲುನೋವಿನಿಂದ ನರಳುತ್ತಿದ್ದಾಗ, ಕಡೆಶ್ವಾಲ್ಯದಲ್ಲಿ ಯಾರೋ ದೊಡ್ಡ ಡಾಕ್ಟ್ರಿದ್ದಾರೆ ಅಂತ ತನ್ನನ್ನು ಕರಕೊಂಡು ಅಮ್ಮ ಬಸ್ಸಿಗಾಗಿ ಕಾದ ಜಾಗ ಇದು ಅಂತ ಹೊಳೆದು, ಅದಕ್ಕೂ ಈಗಾಗೋದಕ್ಕೂ ಏನು ಸಂಬಂಧ ಎಂದು ಯೋಚಿಸತೊಡಗಿದ. ಅದು ಅಷ್ಟು ಸ್ಪಷ್ಟವಾಗಿ ಮನದಲ್ಲಿ ಅಚ್ಚೊತ್ತಿರಲು ಕಾರಣ, ಆ ದಿನ ಬಸ್ಸು ಅರ್ಧ ಗಂಟೆ ತಡವಾಗಿ ಬಂದಿತ್ತು ಮತ್ತು ಆ ಅರ್ಧ ಗಂಟೆಯೂ ತಾನು ’ಕುಂಯಿ...’ ಎಂದು ರಾಗ ಎಳೆಯುತ್ತಾ ಅಳುತ್ತಿದ್ದ; ಆಗ ಅಲ್ಲಿದ್ದವರ ಕುತೂಹಲದ ಕಣ್ಣುಗಳಿಗೆ, ತನ್ನನ್ನು ಸಮಾಧಾನ ಮಾಡಲೂ ಆಗದೆ ಅಮ್ಮ ಮುಜುಗರದಿಂದ ನಿಂತದ್ದು ನೆನಪಾಯಿತು. ಅಷ್ಟರಲ್ಲಿ ’ಲಕ್ಷ್ಮೀ ನಿವಾಸ’ ಹೋಟೆಲ್ ಬಂತು. ಕಲ್ಲಡ್ಕ ಟೀ ಕುಡಿಯೋಣ ಅಂತ ಬೈಕ್ ನಿಲ್ಲಿಸಿದವನಿಗೆ ವೀಣಾಗೆ ಇದನ್ನೆಲ್ಲ ಹೇಳೋದೋ, ಬೇಡವೋ ಎಂಬ ಗೊಂದಲಕ್ಕೆ ಬಿದ್ದ; ’ನಮ್ಮ ನಡುವೆ ಯಾವುದೇ ಸೀಕ್ರೆಟ್ಸ್ ಇರಬಾರದು, ನಾವಿಬ್ಬರು ಸೋಲ್ ಮೇಟ್ಸ್ ಅಂತ ಇಬ್ರೂ ಮಾಡಿದ್ದ ಪ್ರಾಮಿಸ್ ಗಳೆಲ್ಲ ನೆನಪಾಯಿತು. ತಾನು ಚಡ್ಡಿ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದಾಗ ಎರಡು ಮನೆ ಆಚೆಯ ಹುಡುಗಿಗೆ ಕಾದು ನಿಂತು, ಇದು ಉದ್ದೇಶಪೂರ್ವಕ ಅಂತ ತಿಳಿಯದಂತೆ ಅವಳ ಹಿಂದೆ ಹೋಗುತ್ತಿದ್ದುದು, ಅಪ್ಪನ ಸಹಿ ರಿಪೋರ್ಟ್ ಕಾರ್ಡ್ ನಲ್ಲಿ ಪೋರ್ಜರಿ ಮಾಡಿದ್ದು, ಎಲ್ಲಾ ಹೇಳಿಕೊಂಡು ಅವಳ ಕೀಟಲೆಗೆ, ನಗುವಿಗೆ ವಸ್ತುವಾಗಿದ್ದ; ಆದರೆ ಈಗ ಇದನ್ನು ಹೇಳೋದು ಬೇಡ ಅಂತನಿಸಿತು. ಸುಮ್ಮನೆ ಕೆ.ಟಿ. ಆರ್ಡರ್ ಮಾಡಿ, ಅವಳ ಕಣ್ಣನ್ನೇ ನೋಡುತ್ತಾ ಕುಳಿತವನಿಗೆ, ನನಗೇ ಅಂತ ಕೆಲವು ರಹಸ್ಯಗಳು ಬೇಕು ಅಂತನ್ನಿಸಿತು; ಅಂಥಾ ಭಾರಿ ಅಲ್ಲದ, ಆದರೂ ತನಗೆ ಮಾತ್ರ ಗೊತ್ತಿರುವುದು ಅಂದುಕೊಳ್ಳುವಾಗ ಖುಶಿ ತರುವವು. ಆದರೆ ಪರಿಚಯ ಪ್ರೀತಿಗೆ ತಿರುಗಿದ ಗಳಿಗೆಗಳಲ್ಲಿ, ತನ್ನದೆಲ್ಲವನ್ನೂ ಹೇಳಿಬಿಡಬೇಕು ಅನ್ನುವ ಆತುರಕ್ಕೆ ಸಿಕ್ಕಿ, ಖಾಲಿಯಾಗಿ ಈಗ ಉಳಿದಿರುವುದು ಬರೀ ಇಂಥವೇ ಒಂದೆರಡು ಮರೆತಂಥ ನೆನಪುಗಳು ಮಾತ್ರ; ವೀಣಾಗೆ ಮಾತ್ರ ಅಂಥದ್ದೇನೂ ಅನಿಸಿರಲಿಲ್ಲ, ಅವಳು ಚಿಕ್ಕವಳಿದ್ದಾಗ ಮನೆ ಜಗಲಿಯಿಂದ ಕೆಳಗೆ ಜಿಗಿದು ಆಡುತ್ತಿದ್ದರಿಂದ ಹಿಡಿದು, ಹಾಗೊಮ್ಮೆ ಜಿಗಿದಾಗ ಮನೆ ಪಕ್ಕದ ಚರಂಡಿಗೆ ಬಿದ್ದದ್ದು ಕೂಡ ಯಾವುದೇ ಮುಜುಗರವಿಲ್ಲದೆ ಹೇಳಿದ್ದಳು; ಹೈ ಸ್ಕೂಲ್ ಓದೋವಾಗ ಯಾವನೋ ಉದ್ದ ಕೂದಲ ಹುಡುಗ ತುಂಬಾ ಇಷ್ಟವಾಗಿದ್ದು ಹೇಳಿ ಬಾಯಿ ತುಂಬ ನಕ್ಕಿದ್ದಳು. ಆದರಲ್ಲಿ ಅರಗಿಸಿಕೊಳ್ಳೊದಾದರೆ ಅರಗಿಸಿಕೊ, ನನ್ನ ಭಾರವಂತೂ ಇಳಿಯಿತು ಎಂಬ ನಿರುಮ್ಮಳ ಭಾವ ಕಂಡಿತ್ತು ಕರುಣಾಕರನಿಗೆ. ಇಷ್ಟು ವರ್ಷಗಳಿಂದ ತನ್ನ ಅರಿಯದ ಜೀವವೊಂದು ಹಠಾತ್ತಾಗಿ ಎಂಬಂತೆ ಪರಿಚಯವಾಗಿ ಪ್ರೀತಿ ಶುರುವಾದಂತೆ ತನ್ನ ಗುಟ್ಟುಗಳ ಹೇಳುವ ಪರಿ ಅವನಿಗೆ ಆಶ್ಚರ್ಯ ತಂದಿತ್ತು. ಕರುಣಾಕರನಿಗೆ ಏನು ಹೇಳಲೂ ತೋಚದೆ, ಆರ್ಡರ್ ಮಾಡಿದ ಟೀ ಬರುವಷ್ಟು ಹೊತ್ತು, ಕಂಪೆನಿ ಬಗ್ಗೆ, ಅಲ್ಲಿನ ಜಗಳಗಳ ಬಗ್ಗೆ, ಮೇಲಿನವರಿಗೆ ಮಾಡುವ ಬಟರಿಂಗ್ ಬಗ್ಗೆ ಹೇಳುತ್ತಾ ಹೋದ; ವೀಣಾ ಆಸಕ್ತಿಯಿಂದ ಕೇಳುತ್ತಿದ್ದಳು. ಯಾಕೋ ಇದೆಲ್ಲಾ ಸುಮ್ಮನೇ ಅಂತನ್ನಿಸಿ, ತಾನು ಹೇಳುತ್ತಿದ್ದ ಅಸಂಬದ್ದವನ್ನು ಅಲ್ಲಿಗೇ ನಿಲ್ಲಿಸಿ ಕರುಣಾಕರ ಅವಳ ಮುಖವನ್ನು ನೋಡತೊಡಗಿದ; ’ ಇನ್ನೊಂದು ವರ್ಷದೊಳಗೆ ಮನೇಲಿ ಹೇಳ್ಬೇಕು..’ ಕ್ಯಾಶುವಲ್ ಆಗಿ ಎಂಬಂತೆ ಹೇಳಿ, ವೀಣಾ ನಕ್ಕಳು.
ಯಾಕೋ ಮತ್ತೆ ಬಾಯಾರಿಕೆ ಜಾಸ್ತಿಯಾದಂತಾಯಿತು ಕರುಣಾಕರನಿಗೆ, ಕಳೆದೊಂದು ವಾರದಿಂದ ಭಯಂಕರ ಹಸಿವು ಬೇರೆ; ವೀಣಾಗೆ ಹೇಳಿದ್ರೆ ತಿಂಡಿಪೋತ ಅಂದು ರೇಗಿಸ್ತಾಳೆ ಅಂತ ಹೇಳಿರಲಿಲ್ಲ, ಟೀ ಕುಡಿದು, ಬಿಲ್ಲು ಕೊಟ್ಟು ಹೊರಬಂದವನಿಗೆ ಯಾಕೋ ಏನೋ ಸರಿ ಇಲ್ಲ ಅನಿಸತೊಡಗಿತು; ಸುಮ್ಮನೆ ಬೈಕನ್ನು ಓಡಿಸಿದ ಮಂಗಳೂರತ್ತ, ವೀಣಾಳನ್ನ ಅವಳ ರೂಮ್ ಹತ್ತಿರ ಇಳಿಸಿ,’ಮೆಸೇಜ್ ಮಾಡ್ತೀನಿ’ ಅಂತಂದು ’ಬಾಯ್’ ಹೇಳಿ, ತನ್ನ ರೂಮಿಗೆ ಬಂದವನಿಗೆ ತೀರ ಸುಸ್ತೆನಿಸತೊಡಗಿತು, ನೈಟ್ ಡ್ಯೂಟಿಗೆ ರಜೆ ಮಾಡಿ ಬಿದ್ದುಕೊಂಡ, ವೀಣಾಳ ಮೆಸೇಜಿಗೆ ಉತ್ತರಿಸಲೂ ಉದಾಸೀನವೆನಿಸಿತು..
ಮರುದಿನ ಡಾಕ್ಟ್ರ ಶಾಪ್ ಗೆ ಹೋಗಿ ಕಾಯುತ್ತಿದ್ದಾಗ, ತಾನಿನ್ನೂ ಈ ವಿಷಯವನ್ನು ವೀಣಾಗೆ ಹೇಳಿಲ್ಲ ಎಂದು ನೆನಪಾಗಿ, ಆಮೇಲೆ ಹೇಳಿದರಾಯ್ತು ಅಂದುಕೊಂಡ. ಡಾಕ್ಟ್ರು ಕರುಣಾಕರನ ಪರೀಕ್ಷೆ ಮಾಡಿ, ಸಿಮ್ಟಮ್ಸ್ ಕೇಳಿ, ’ ನೀವೊಂದ್ಸಲ ’ಆರ್.ಬಿ.ಯೆಸ್.’ ಮಾಡ್ಸಿ.ಸುಮ್ನೆ ಶುಗರ್ ಲೆವೆಲ್ ಚೆಕ್ ಮಾಡ್ಬಿಡೋಣ’ ಎಂದು ಅವನನ್ನು ಕಳಿಸಿದರು, ಅವರ ಮಾತಿನ ಧಾಟಿ, ಹಾವ ಭಾವ, ಎಲ್ಲಾ ಯಾವುದೋ ಒಂದರತ್ತ ಬೆಟ್ಟು ಮಾಡುತ್ತಿರುವಂತೆ ಅನ್ನಿಸಿ ಕರುಣಾಕರನಿಗೆ ಭಯ ಶುರುವಾಯಿತು; ವೀಣಾ ಬಳಿ ಇದನ್ನೆಲ್ಲ ಹಂಚಿಕೊಳ್ಳಬೇಕು ಎಂದು ಫೋನೆತ್ತಿದವನು ಯಾಕೋ ಸುಮ್ಮನಾದ, ಆತಂಕದಲ್ಲಿದ್ದಾಗ ,’ ಏನೂ ಇಲ್ಲ ಡಿಯರ್, ನೀನು ವರ್ರಿ ಮಾಡ್ಕೋಬೇಡ..’ ಅನ್ನುವ ಅವಳ ಸಮಾಧಾನದ ಮಾತುಗಳು, ಕಿರಿಕಿರಿಯುಂಟು ಮಾಡುತ್ತೆ ಅನಿಸಿತು. ಟೆಸ್ಟಿಗೆ ಬ್ಲಡ್ ಕೊಟ್ಟು ’ ಒಂದು ಗಂಟೆ ವೈಯ್ಟ್ ಮಾಡಿ ಸಾರ್..’ ಎಂಬ ಉತ್ತರ ಪಡೆದು, ಕಾಯುತ್ತಾ ಕುಳಿತವನಿಗೆ, ಈ ಜಗತ್ತಲ್ಲಿ ತನ್ನನ್ನು ಬಿಟ್ಟು ಎಲ್ಲರೂ ಸುಖವಾಗಿದ್ದಾರೆ ಅಂತ ಗಾಢವಾಗಿ ಅನ್ನಿಸಿತು. ಹಾಗೆ ಯೊಚಿಸುತ್ತಿದ್ದಾಗಲೇ ರಿಪೋರ್ಟ್ ಬಂತು; ಅದನ್ನು ಹಿಡಿದುಕೊಂಡು ಡಾಕ್ಟ್ರ್ ಬಳಿ ಹೋದ; ರಿಪೋರ್ಟ್ ಓದಿ ಡಾಕ್ಟ್ರ್ ’ಒಳಗೆ ಬನ್ನಿ’ ಎಂದು ಇನ್ನೊಂದು ಕೋಣೆಗೆ ಕರೆದುಕೊಂಡು ಹೋದಾಗ, ಕರುಣಾಕರನಿಗೆ ಆತಂಕವಾಗತೊಡಗಿತು; ಅವರು ಮೆಲ್ಲನೆ ತಗ್ಗಿದ ದನಿಯಲ್ಲಿ,’ ನೋಡಿ, ನಿಮ್ಮ ಫ಼್ಯಾಮಿಲಿಲಿ ಯಾರಿಗಾದ್ರು ಡಯಾಬಿಟೀಸ್ ಇದ್ಯಾ?’ ಅಂತ ಕೇಳಿದರು, ಅನುಮಾನದಿಂದ ಕರುಣಾಕರ, ’ ಹೌದು, ನನ್ನ ಅಜ್ಜನಿಗಿತ್ತು, ತಂದೆಗೂ ಇದೆ..ಯಾಕೆ?’ ಎಂದು ಕೇಳಿದ. ’ಹಾಗೇನಿಲ್ಲಾ, ಜಸ್ಟ್ ಹೀಗೇ ಕೇಳಿದೆ, ಏನಿಲ್ಲಾ ನಿಮ್ಮ ಶುಗರ್ ಲೆವೆಲ್ ಸ್ವಲ್ಪ ಹೈ ಇದೆ.. ಗಾಬರಿ ಮಾಡುವಂತದ್ದೇನೂ ಇಲ್ಲ, ಏನಕ್ಕೂ ನೀವು ನಾಳೆ ಎಫ಼್.ಬಿ.ಎಸ್. ಒಂದು ಮಾಡಿಸಿಬಿಡಿ.. ಬೇಡಾ ಅಂದ್ರೆ ಬೇಡ ’ ಅಂದರು ಡಾಕ್ಟ್ರ್, ’ಆಯ್ತು’ ಅಂದವನ ದನಿ ನಡುಗುತ್ತಿತ್ತು.. ’ ಚೇ, ಚೇ ವರ್ರಿ ಮಾಡ್ಬೇಡ್ರಿ, ನಾಳೆ ಖಾಲಿ ಹೊಟ್ಟೆಲಿ ಬನ್ನಿ..’ ಅನ್ನುತ್ತಾ, ಅವರು ಬೆನ್ನು ತಟ್ಟಿದರು, ಮುಖದ ಮೇಲೆ ನಗು ಬರಿಸುತ್ತಾ ಹೊರಬಂದವನಿಗೆ, ಫ಼ುಲ್ ಟೆನ್ ಷನ್; ಹಸಿವಾಗುತ್ತದೆ ಅಂತ ಹೋಟೆಲ್ ಗೆ ಹೋದ್ರೆ ’ ಅದು ತಿನ್ನಬಹುದಾ? ಇದು ತಿನ್ನಬಹುದಾ?’ ಎಂಬ ಅನುಮಾನ; ಏನು ಮಾಡಲೂ ತೋಚದೆ ಎರಡು ದಿನ ರಜೆ ಹಾಕಿದ, ಸಂಜೆ ವೀಣಾ ಜೊತೆ ಮಾತಾಡೋವಾಗ, ’ ನಂಗೇನಾದ್ರೂ ಖಾಯಿಲೆ ಇದ್ರೆ ನನ್ನ ಒಪ್ಕೋತೀಯಾ?’ ಎಂದು ಕೇಳಿದ, ’ ಏನು ಮಾತಾಡ್ತಿದಿಯ? ಏನಾಯ್ತು ಹೇಳು? ’ ಎಂಬ ಅವಳ ಅನುನಯದ ಮಾತುಗಳ, ’ಸುಮ್ಮನೆ ಕೇಳಿದೆ..’ ಎಂದು ಹಾರಿಸಿದ. ’ಇನ್ನು ಹೀಗೆಲ್ಲಾ ಮಾತಾಡಿದ್ರೆ ನೋಡು..’ ಅಂದದಕ್ಕೆ, ಸುಮ್ಮನೆ ’ಹೂಂ’ಗುಟ್ಟಿದ.
ಕರುಣಾಕರ ರಾತ್ರಿಯಿಡೀ ನಿದ್ದೆ ಬಾರದೆ ಹೊರಳಾಡಿದ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ಲಡ್ ಕೊಟ್ಟು ಬಂದವನಿಗೆ, ರಿಪೋರ್ಟ್ ಬರುವವರೆಗೆ ’ಅಯ್ಯಯ್ಯೋ’ ಎಂದು ಮೈ ಪರಚಿಕೊಳ್ಳುವಂತಾಗಿತ್ತು; ರಿಪೋರ್ಟ್ ಹಿಡಿದು ಡಾಕ್ಟ್ರ್ ಬಳಿ ಹೋಗಿ ತೋರಿಸಿದ, ’ ’ವಾಹ್! ಯೂ ಆರ್ ಪರ್ಫ಼ೇಕ್ಟ್ಲೀ ಆಲ್ ರೈಟ್ ಯಂಗ್ ಮ್ಯಾನ್...’ ಅನ್ನುತ್ತಾ ಡಾಕ್ಟ್ರು ಕರುಣಾಕರನ ಬೆನ್ನು ತಟ್ಟಿದರು.
ನಿರಾಳವಾಗಿ ಹೊರ ಬಂದವನಿಗೆ, ಈ ವಿಷಯವನ್ನು ವೀಣಾಗೆ ಹೇಳೋದು ಬೇಡ, ಅಟ್ ಲೀಸ್ಟ್ ಇದೊಂದಾದರು ಗುಟ್ಟು ತನ್ನಲ್ಲಿರಲಿ ಅನಿಸಿತು; ಆಗ ತಾನು ಇನ್ನೂ ಜೀವಂತವಾಗಿರಬಹುದು ಅಂತನಿಸಿತು, ವೀಣಾಗೆ ’ಹಾಯ್..’ ಎಂದು ಮೆಸೇಜು ಮಾಡಿದರೆ ಅವಳ ಕಾಲ್! ’ನಿನ್ನೆ ರಾತ್ರಿ ಪೂರಾ ನಂಗೆ ನಿದ್ದೆ ಇಲ್ಲ ಗೊತ್ತಾ? ನಿಂಗೇನಾಗಿದೆ? ಯಾಕೆ ಹೀಗೆ ಬಿಹೇವ್ ಮಾಡ್ತಾ ಇದೀಯಾ?’ ಅಂದವಳ ಧಾವಂತಕ್ಕೆ, ಏನು ಹೇಳಲೂ ತೋಚದೆ, ’ ಅದೂ ನಿನ್ನೆ ಬ್ಲಡ್ ಟೆಸ್ಟ್ ಮಾಡ್ಸಿದ್ದೆ, ಶುಗರ್ ಹೈ ಬಂತು. ಈಗ ಪುನಃ ಚೆಕ್ ಮಾಡ್ಸಿದೆ, ನಾರ್ಮಲ್ ಅಂತ ಗೊತ್ತಾಯ್ತು’ ಅಂದ. ವೀಣಾನ ’ ನಂಗ್ಯಾಕೆ ಮೊದಲೇ ಹೇಳ್ಲಿಲ್ಲ? ನಾನು ಅಷ್ಟೂ ಬೇಡವಾದ್ನಾ ನಿಂಗೆ?’ ಇತ್ಯಾದಿಗಳಿಗೆ ಸಮಾಧಾನ ಹೇಳಿ, ವಾಪಾಸ್ ರೂಮಿಗೆ ಹೊರಟ ಕರುಣಾಕರನಿಗೆ, ಕಮಿಟ್ ಆದ ಮೇಲೆ ತನ್ನದೂ ಅನ್ನೋದು ಏನೂ ಒಳಗೆ ಉಳಿಯೊಲ್ವಾ? ಅಂತ ಪ್ರಶ್ನೆ ಉಧ್ಭವಿಸಿತು; ಬಹುಶ ಇನ್ಯಾವತ್ತೊ ತಾನು ಕಲ್ಲಡ್ಕದ ಆ ನೆನಪನ್ನೂ ಹೇಳಿಬಿಡ್ತೀನಿ ಎಂದು ಖಾತರಿಯಾಯ್ತು, ’ಅದೆಲ್ಲಾ ಯಾಕೆ ಈಗ’ ಎಂಬ ಭಾವವೂ ಮೂಡಿ, ವೀಣಾ ಕಳಿಸಿದ್ದ,’ಲವ್ ಯು’ ಮೆಸೇಜ್ ನೋಡಿ, ಸುಮ್ಮನೆ ’ ಲವ್ ಯು, ಟೇಕ್ ಕೇರ್ ’ ಅಂತ ಟೈಪ್ ಮಾಡಿ ಸೆಂಡ್ ಒತ್ತಿದ.

ಣತಲ್ಲ

Thursday, June 2, 2011

ನನ್ನೊಳಗಿನ ಕೇರಳ...

ಚಿರಪರಿಚಿತ ರೈಲಿನ 'ಧಡ್,ಧಡ್' ಶಬ್ದ ಹತ್ತಿರವಾದಂತೆ ಏನೋ ತಳಮಳ ಶುರುವಾಯಿತು; ನೆನಪು ತಕ್ಷಣ ಬಾಲ್ಯದತ್ತ ಮಗುಚಿಕೊಂಡಿತು. ಕೇರಳ! ನನ್ನ ತಾಯಿಯ ತಂದೆ ಮನೆ; ನಾನು ಹುಟ್ಟಿದೂರು. ಪ್ರತೀ ವರ್ಷ ಶಾಲೆಯ ರಜಾದಿನಗಳಲ್ಲಿ ಅಮ್ಮನ ಸೆರಗು ಹಿಡಿದುಕೊಂಡೋ, ಅಪ್ಪನ ಹೆಗಲಿಗೆ ಜೋತುಕೊಂಡೋ ಹೋಗಿ ಹತ್ತಿಪ್ಪತ್ತು ದಿವಸ ಅಲ್ಲಿ ಮೆರೆದು, ವಾಪಸ್ ಬರೋವಾಗ 'ಅಯ್ಯಯ್ಯೋ, ಶಾಲೆ ಶುರುವಾಯಿತಲ್ಲ' ಎಂಬ ಗಾಢ ವಿಷಾದವನ್ನೂ, 'ಇನ್ಯಾವಾಗ ನೋಡೋದು' ಎಂಬ ಬೇಜಾರನ್ನೂ ಉಳಿಸುತ್ತಿತ್ತು. ಆಗ ಮಕ್ಕಳಾದ ಕಾರಣ 'ಹೋ...' ಎಂದು ಅಳಲು ಯಾವ ಕಟ್ಟುಪಾಡೂ ಇರಲಿಲ್ಲವಲ್ಲ. ಶಾಲೆಯ ದಿನಗಳಲ್ಲೂ ಆವಾಗೊಮ್ಮೆ,ಈವಾಗೊಮ್ಮೆ ನೆನಪಾಗಿ ಮುಂದಿನ ರಜೆಗೋಸ್ಕರ ಕಾದು ಕೂರುವಂತೆ ಮಾಡುತ್ತಿತ್ತು.
ಸ್ಟೇಷನ್ ಹತ್ತಿರವಾದಂತೆ ರೈಲು ನಿಧಾನವಾಗುತ್ತಾ ಕೊನೆಗೊಮ್ಮೆ 'ಕ್ರೀಚ್...' ಅಂತ ನಿಟ್ಟುಸಿರು ಬಿಡುತ್ತಾ ಸ್ತಬ್ಧವಾಯಿತು; ಬೇಗ ಬೇಗನೇ ನಾನೂ, ಅಮ್ಮನೂ ನಮ್ಮ ಲಗೇಜನ್ನು ಹೊತ್ತುಕೊಂಡು ಅತ್ತಿತ್ತ ಓಡಾಡುತ್ತಾ ಕಂಪಾರ್ಟ್ಮೆಂಟ್ ಹುಡುಕಿ, ಗಡಿಬಿಡಿಯಲ್ಲಿ ಹತ್ತಿ ನಮ್ಮ ಸೀಟ್ ನಂಬರ್ ನೋಡಿಕೊಂಡು, ಎರಡೆರಡು ಸಲ ಕನ್ಫರ್ಮ್ ಮಾಡಿಕೊಂಡು, ನಿರಾಳವಾಗಿ ಸೀಟಲ್ಲಿ ಕೂತು, ಲಗೇಜನ್ನು ಸೀಟಿನಡಿ ನೂಕಿ, 'ಉಸ್ಸಪ್ಪಾ..' ಎಂದು ರೈಲು ಹೊರಡುವುದನ್ನು ಕಾಯತೊಡಗಿದೆವು. ರೈಲು ಸ್ಟೇಷನ್ ಬಿಟ್ಟೊಡಲು ಶುರುವಿಡುತ್ತಿದ್ದಂತೆ, ಕಿಟಕಿಯ ಸರಳಿಗೆ ಮುಖವನ್ನಂಟಿಸಿಕೊಂಡು ಆ ತುಕ್ಕು ಹಿಡಿದ ಕಬ್ಬಿಣದ ವಾಸನೆಯನ್ನು ಆಸ್ವಾದಿಸುತ್ತಾ ನನ್ನೊಳಗೆ ಸಿದ್ಧನಾಗತೊಡಗಿದೆ.
ಕಾಸರಗೋಡಿನಿಂದ ಸರಿಸುಮಾರು ಮುನ್ನೂರು ಕಿಲೋಮೀಟರ್ ಗಳ ಹಾದಿ ಪಾಲಕ್ಕಾಡ್ ಗೆ; ಏಳರಿಂದ ಎಂಟು ಗಂಟೆಗಳ ಪ್ರಯಾಣ. ಬೆಳಗಿನ ಹಾದಿಯಾದರೆ ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತರೆ, ಕಣ್ಣೆದುರು ಸಿನೆಮಾ ಓಡುವಂತೆ ಮಿಂಚಿ ಮಾಯವಾಗುವ ಜನ ಜೀವನ; ರಾತ್ರಿ ಯಾನವಾದರೆ ರೈಲಿನ ಲಯಬದ್ಧ ತಾಳಕ್ಕೆ ಸಾಥ್ ನೀಡುವ ಹೊರಗಿನ ಕತ್ತಲು,ಮಂದ ದೀಪ, 'ಚಾಯ್,ಕಾಫಿ' ಗಳ ಆಲಾಪ ಎಲ್ಲಾ ಸೇರಿ, ಅತ್ತ ನಿದ್ದೆಯೂ ಅಲ್ಲದ ಇತ್ತ ಎಚ್ಚರಿಕೆಯೂ ಅಲ್ಲದ ನಿಗೂಢ ಮಾಯಾಲೋಕ!
ಚಿಕ್ಕವನಿದ್ದಾಗ ಪ್ರತೀ ಬಾರಿ ಶಾಲೆಗೆ ರಜೆ ಬಂದಾಗಲೆಲ್ಲಾ ನಾನೂ,ತಂಗಿಯೂ,ಅಮ್ಮನೂ ಆಸೆ ಮತ್ತು ಖುಷಿಯಿಂದ ಕಾಯುತ್ತಿದ್ದೆವು; 'ಯಾವಾಗ ಹೋಗೋದು ಅಮ್ಮ, ಅಜ್ಜಿ ಮನೆಗೇ?' ಅಂತ ನಾವು ರಾಗ ಎಳೆದರೆ, 'ಅಪ್ಪಂಗೆ ರಜೆ ಸಿಗ್ಬೇಕಲ್ಲ ಮೋನು...' ಅಂತ ಅಮ್ಮನ ಸಮಾಧಾನ; ಒಂದು ವೇಳೆ ಅಪ್ಪನಿಗೆ ರಜೆ ಸಿಗದಿದ್ದರೆ, ಅಪ್ಪ ಇಲ್ಲಿಂದ ರೈಲು ಹತ್ತಿಸಿಬಿಡುತ್ತಿದ್ದರು, ಅಲ್ಲಿ ರಿಸೀವ್ ಮಾಡಲು ಮಾವನೋ,ದೊಡ್ಡಪ್ಪನೋ ಸಿದ್ಧವಾಗಿರುತ್ತಿದ್ದ್ರ್‍ಅರು. ನನಗದೆಲ್ಲಾ ಯಾಕೆ ಆಗ? ಅಲ್ಲಿದ್ದ ಅಣ್ಣನ ಜೊತೆ ಮನಸೋ ಇಚ್ಛೆ ಆಡುವ ತವಕದಲ್ಲಿ, ಈ ಕ್ಯಾಲುಕುಲೇಷನ್ ಗಳೆಲ್ಲಾ ಅರ್ಥ ಕಳಕೊಳ್ಳುತ್ತಿದ್ದವು. ಬೆಳಗ್ಗೆ ತಿಂಡಿ ತಿಂದು ಬ್ಯಾಟ್,ಬಾಲ್ ಹಿಡಿದು ಹೊರಟರೆ ನಾವೇ ಬೇರೆ, ನಮ್ಮ ಪ್ರಪಂಚವೇ ಬೇರೆ! ಹೇಗೆಲ್ಲಾ ಮತ್ತು ಎಲ್ಲೆಲ್ಲಾ ಆಡಬಹುದು, ಎಂಬೆಲ್ಲ ಕನಸುಗಳೊಂದಿಗೆ ಅಪ್ಪನ ಕೈ ಹಿಡಿದು ರೈಲು ಹತ್ತಿದರೆ, ರೈಲು ಹೊರಡುವಾಗ ಅಪ್ಪ ದೂರಾಗುತ್ತಾ ಕೊನೆಗೆ ಅಪ್ಪನ 'ಟಾ,ಟಾ' ಮಾಡುವ ಕೈ ಮಾತ್ರ ಕಂಡು ಕೊನೆಗೊಮ್ಮೆ ಅದೂ ಮಾಯವಾಗಿ, ಅಪ್ಪ ಬಂದಿದ್ದರೆ ಎಂಬ ಹಳಹಳಿ; ಯಾಕೆಂದರೆ ಅಪ್ಪ ರೈಲು ಪ್ರತೀ ಸ್ಟೇಷನ್ ನಲ್ಲಿ ನಿಂತಾಗಲೆಲ್ಲಾ ಅದು ಬೇಕಾ? ಇದು ಬೇಕಾ? ಎಂದು ಕೇಳುತ್ತಾ ಹಲ್ವಾ, ಪಳಂಪುರಿ, ಪರಿಪ್ಪು ವಡೆ ಇತ್ಯಾದಿಗಳೊಂದಿಗೆ ಅಪ್ಪನ ಜೀವಜಲ ಚಾ ಬೇರೆ! ವಾಹ್! ಆಗೆಲ್ಲಾ ಅಪ್ಪ ಅಂದರೆ ಸರ್ವಶಕ್ತ! ರೈಲಲ್ಲಿ ಅಪ್ಪ,ಅಮ್ಮನ ಮಧ್ಯೆ ಕೂರಲು ನನಗೂ ತಂಗಿಗೂ ಜಗಳ, ಹಾಗೆ ಕೂತಾಗಲೆಲ್ಲ ಅದೆಂಥ ರಕ್ಷಣಾ ಭಾವ! ಹಾಗೆ ಅಪನ ಬಿಟ್ಟು, ಪೆಚ್ಚು ಮೋರೆಯಲ್ಲಿ ಕೂತು ಎರಡು ಸ್ಟೇಷನ್ ಕಳೆಯುವಾಗ ಮನಸು ರೈಲಿನೊಂದಿಗೆ ಟ್ಯೂನ್ ಆಗಿ, ಆ ಬೇಸರವೆಲ್ಲಾ ಮರೆತು, ಯಾವಾಗ ತಲುಪುತ್ತೇವೋ ಎಂದು ಕಾಯುವಂತಾಗುತಿತ್ತು. ರೈಲು ಪಾಲಕ್ಕಾಡ್ ಸ್ಟೇಷನ್ ತಲುಪುತ್ತಿದ್ದಂತೆ ಚಂಗನೆ ನೆಗೆದು ಅಲ್ಲಿ ನಮ್ಮ ದಾರಿ ಕಾಯುತ್ತಿದ್ದ ದೊಡ್ಡಪ್ಪನ, ಮಾವನ ಮೇಲೆ ಹಾರಿದರಾಯ್ತು, ಆಮೇಲೆ ತಲೆಬಿಸಿ ಇಲ್ಲ. ಅಷ್ಟೇನೂ ಅರ್ಥವಾಗದ ಮಲಯಾಳ ಭಾಷೆ, ಅದರ ಎಳೆದು ಮಾತಾದುವ ರೀತಿ, ಕರಿದ ತಿಂಡಿಗಳ ಪರಿಮಳ, ನೋಡಿದಲ್ಲೆಲ್ಲಾ ಮುಂಡು, ವೇಷ್ಟಿಗಳು ಇವೆಲ್ಲಾ ನನ್ನೊಳಗಿನ ಕೇರಳವನ್ನು ರೂಪಿಸುತ್ತಿದ್ದವು.
ಅಜ್ಜನ ಮನೆಗೆ ತಾಗಿಕೊಂಡಿರುವ ಕೃಷ್ಣ ದೇವಸ್ತಾನ,ಅಲ್ಲಿನ ಕೆರೆ, ದೊಡ್ಡ ದೊಡ್ಡ ಆನೆಗಳು ಎಲ್ಲೋ ದೇವರ ಮೇಲೆ ಭಕ್ತಿಯ ಜೊತೆ ಭಯವನ್ನೂ ತಂದಿತ್ತು; ದಿನಾ ಬೆಳಿಗ್ಗೆ ಎದ್ದ ಕೂಡಲೆ ಸ್ನಾನ ಮಾಡಿ ದೇವಸ್ತಾನಕ್ಕೆ ಸುತ್ತು ಹಾಕಿ ಅಡ್ಡ ಬಿದ್ದು 'ಒಳ್ಳೆ ಬುದ್ಧಿ ಕೊಡು ದೇವರೇ' ಅಂತ ಬೇಡಿಕೊಡು, ತಿಂಡಿ ತಿಂದು, ಸ್ವಲ್ಪ ದೂರದಲ್ಲಿದ್ದ ಅಣ್ಣನ ಫೋನ್ ಮೂಲಕ ಕರೆಸಿ, ನಾವಿಬ್ಬರು ಹೊರಟರೆ ಮುಗಿಯಿತು; ಪ್ರಪಂಚವೇ ಗ್ರೌಂಡ್,ನಾವಿಬ್ಬರು ರೈವಲ್ ಟೀಮ್ಸ್. ಅಲ್ಲಿ ತಾಗಿದರೆ ಎರಡು ರನ್, ಇಲ್ಲಿ ತಾಗಿದರೆ ಫ಼ೋರ್, ಹೊರಗೆ ಕಂಪೌಂಡ್ ದಾಟಿ ಹೋದರೆ ಔಟ್ ಎಂಬಿತ್ಯಾದಿ ಲೆಕ್ಕಾಚಾರ ಮಧ್ಯೆ, ಆಟ ಶುರು ಮಾಡಿ ಯಾಕೋ ಸೋಲುತ್ತಿದ್ದೇನೆ ಅನ್ನಿಸಿದಾಗ ಊಟದ ನೆನಪು; ಮಧ್ಯಾಹ್ನದ ಬಿಸಿಲಿಗೆ ಆಡೋದು ಬೇಡ ಅಂತ ಹುಕುಮ್ ಕೇಳಿಕೊಂಡು ಟಿ.ವಿ. ಆನ್ ಮಾಡಿ ಸುಮ್ಮನೆ ಮ್ಯಾಟಿನಿ ಷೋ ಮೂವ್ ಯಲ್ಲಿಈ  ಮಮ್ಮೂಟ್ಟಿ, ಮೋಹನ್ ಲಾಲ್ ರ ನೋಡುತ್ತಾ ಅವರೆಡೆಗೆ ಮುಗಿಯದ ಆಕರ್ಷಣೆ ಶುರುವಾಯ್ತು ಅನ್ನಿಸುತ್ತದೆ; ಹಾಗೇ ಊರಲ್ಲಿ ಅಪರಿಚಿತವಾಗಿದ್ದ ಥೀಯೇಟರ್ ಗಳು ಇಲ್ಲಿ ವಾರಕ್ಕೊಮ್ದು ಸಲ ಅಮ್ಮ,ಮಾವಂದಿರ ಜೊತೆ ದರ್ಶನ ಭಾಗ್ಯ ಕರುಣಿಸುತ್ತಿದ್ದವು. 
ಸುಮ್ಮನೆ ಅಮ್ಮನ ನಿಟ್ಟಿಸಿದೆ. ಕತ್ತಲಲ್ಲಿ ಮುಖದ ಭಾವ ತಿಳಿಯಲಿಲ್ಲ. ಏನಾಗ್ತಾ ಇರಬಹುದು ಈಗ ಅಮ್ಮನ ಮನಸ್ಸೊಳಗೆ? ನಂಗೆ ಆಗ್ತಾ ಇರೋ ತರಾ ಅಮ್ಮಂಗೂ ಹಳೇ ನೆನಪು ಕಾಡ್ತಾ ಇರಬಹುದಾ? ಮೂರು ದಿನ ಮೊದಲು ವಾರದ ರಜೆ ಅಂತ ಹಾಯಾಗಿ ಮನೇಲಿ ಕಾಲು ಚಾಚಿ ಮಲಗಿರುವಾಗ ಅಮ್ಮ 'ತನ್ನೊಳಗೇ ' ಇನ್ನು ನಾಲ್ಕು ದಿನ ಇದೆ ಊರಿನ ವೇಲೆಗೆ...' ಅಂತಂದಿದ್ದು, ಅಕಸ್ಮಾತ್ ಆಗಿ ಕೇಳಿಸಿ ನನ್ನೊಳಗೆ ಅಪರಾಧಿ ಭಾವ ಹುಟ್ಟು ಹಾಕಿತ್ತು. ನಮಗೆ ಶಾಲೆ ಇರುವ ದಿನಗಳಲ್ಲೇ ಅಲ್ಲಿ ಜಾತ್ರೆ ಇರುತ್ತಿದ್ದ ಕಾರಣ ನನಗೆ ಅಜ್ಜಿ ಮನೆ ಜಾತ್ರೆ ಅಂದರೆ ಅಸ್ಪಷ್ಟ ನೆನಪು ಮಾತ್ರ; ಮತ್ತೇನೂ ಯೋಚಿಸದೆ, ಅಮ್ಮನ ' ಸುಮ್ಮನೆ ಹೇಳಿದೆ.. ಇಲ್ಯಾರು ನೋಡ್ಕೋತಾರೆ...' ಗಳನ್ನೆಲ್ಲಾ ಲೆಕ್ಕಿಸದೆ, ಹೊರಡಿಸಿದೆ. ರಾತ್ರಿಯ ಪ್ರಯಾಣವಾದ್ದರಿಂದ ಹೊರಗೆ ಏನೂ ಕಾಣುತ್ತಿರಲಿಲ್ಲ, ಮಲಗೆ ಸುಮ್ಮನೆ ಕೂತಿದ್ದ ಅಮ್ಮನ ನೋಡುತ್ತಾ ಇಡೀ ಹಾದಿ ಕಳೆಯಿತು.
ಬೆಳಗಿನ ಐದು ಗಂಟೆಗೆ ರೈಲು ಪಾಲಕ್ಕಾಡ್ ಸ್ಟೇಷನ್ ಮುಟ್ಟಿದಾಗ, ಚುಮು ಚುಮು ಚಳಿ; ಬಸ್ ಹಿಡಿದು ಅಜ್ಜನ ಮನೆ ತಲುಪುವಾಗ ಗಂಟೆ ಏಳಾಗಿದ್ದ ಕಾರಣ, ಎಲ್ಲರೂ ದೇವಸ್ತಾನಕ್ಕೆ ಹೋಗಿದ್ದರು, ಲಗುಬಗನೆ ಸ್ನಾನ ಮುಗಿಸಿ ಹೋದರೆ ಏನೋ ಅಪರಿಚಿತ ಭಾವ; ಕಳೆದ ಬಾರಿ ಬಂದಾಗ ನಾನು ಆಗಷ್ಟೆ ಹೈಸ್ಕೂಲ್ ಮುಗಿಸಿದ್ದೆ, ನಾನು ಓಡಿಯಾಡಿದ ನೆಲದಲ್ಲಿ ಮಾವಂದಿರ, ಅಣ್ಣಂದಿರ ಮಕ್ಕಳ ಕೇ ಕೇ.. ಯಾಕೋ ನನ್ನನ್ನು ಯಾರೂ ಗಮನಿಸುತ್ತಿಲ್ಲ ಎಂಬ ಅನಾಥ ಭಾವ; ಅಡ್ಜಸ್ಟ್ ಮಾಡೋಕೆ ಕೊಂಚ ಕಾಲ ಹಿಡಿದಿದ್ದರು ಆ ಖಾಲಿತನ ಹಾಗೇ ಉಳಿದಿತ್ತು. ಆಮೇಲಿನ ಕಾಲೇಜಿನ ಗಡಿಬಿಡಿಗಳಲ್ಲಿ ಈ ಕಡೆ ಬರಲು ಸಮಯ ಸಿಕ್ಕಿರಲಿಲ್ಲ, ಸಿಕ್ಕಿದರೂ ಮನಸಿಗೆ ಬೇಡ ಅನ್ನಿಸಿತ್ತು.. ಹಾಗೆ ಎಷ್ಟೋ ವರ್ಷಗಳ ಬಳಿಕ ಈಗ.
ಈಗಲೂ ಅದೇ ಹಿಂಜರಿಕೆಯಿಂದಲೇ ಸುಮ್ಮನೆ ನಿಂತಿದ್ದೆ, ಆದರೆ ಅದೇ ಹಳೆಯ ನಗೆಯೊಂದಿಗೆ, ಅಪ್ಪುಗೆಯಿಂದ ಉಸಿರುಗಟ್ಟಿಸಿ, ಕೇರಳಿಯರಿಗೇ ವಿಶಿಷ್ಟವಾದ 'ವೆಲಿಯ ಉಮ್ಮ' ಕೊಟ್ಟ ದೊಡ್ಡಮ್ಮ, ' ಮೋನು, ಹೇಗಿದ್ದಿಯ, ಅಂತ ಅಜ್ಜಿ, ' ಎಷ್ಟು ಉದ್ದ ಆಗಿದ್ದೀಯಾ! ದೇವರೇ, ನೀನು ಈ ಎರಡು ಕೈ ಮೇಲೆ ಮಲಗಿದ್ದು ನೆನಪಿದೆ' ಅಂತ ನಕ್ಕ ದೊಡ್ಡಪ್ಪ, ನನ್ನ ಆತಂಕವೆಲ್ಲ ಕರಗಿಸಿದರು.
ಅಮ್ಮನ ಅವರ ಜೊತೆ ಮಾತಾಡಲು ಬಿಟ್ಟು ಹೊರ ಬಂದು, ಜಾತ್ರೆಗೆ ತಯಾರಿ ನಡೆಯುತ್ತಿದ್ದದ್ದು ನೋಡುತ್ತಿದ್ದವನಿಗೆ, ದುಬೈಗೆ ಹಾರಿದ್ದ ಅಣ್ಣ ಈ ಸಲ ಸಿಗೊಲ್ಲ ಎಂದು ಹೊಳೆದು ಸ್ವಲ್ಪ ಬೇಜಾರಾಯ್ತು, ಎದುರಿನ ಕಂಪೌಂಡ್ ಗೋಡೆಯಲ್ಲಿ ಮೋಹನ್ ಲಾಲ್ ನ  ಯಾವುದೋ ಸಿನೆಮಾ ಪೋಸ್ಟರ್ ನಲ್ಲಿ ಕಂಡೆ; ಮತ್ತೆಲ್ಲ ಬದಲಾದರೂ  ಅವತ್ತಿನಂತೆ ಈಗಲೂ ಮೋಹನ್ ಲಾಲ್ ನಗುತ್ತಲೇ ಇದ್ದದ್ದು ನೋಡಿ, ಬಾಲ್ಯದ ಯಾವುದೋ ಕಳೆದ ಕೊಂಡಿ ಸಿಕ್ಕಂತಾಗಿ, ಖುಷಿಯಾಯಿತು.  .