ಚಿರಪರಿಚಿತ ರೈಲಿನ 'ಧಡ್,ಧಡ್' ಶಬ್ದ ಹತ್ತಿರವಾದಂತೆ ಏನೋ ತಳಮಳ ಶುರುವಾಯಿತು; ನೆನಪು ತಕ್ಷಣ ಬಾಲ್ಯದತ್ತ ಮಗುಚಿಕೊಂಡಿತು. ಕೇರಳ! ನನ್ನ ತಾಯಿಯ ತಂದೆ ಮನೆ; ನಾನು ಹುಟ್ಟಿದೂರು. ಪ್ರತೀ ವರ್ಷ ಶಾಲೆಯ ರಜಾದಿನಗಳಲ್ಲಿ ಅಮ್ಮನ ಸೆರಗು ಹಿಡಿದುಕೊಂಡೋ, ಅಪ್ಪನ ಹೆಗಲಿಗೆ ಜೋತುಕೊಂಡೋ ಹೋಗಿ ಹತ್ತಿಪ್ಪತ್ತು ದಿವಸ ಅಲ್ಲಿ ಮೆರೆದು, ವಾಪಸ್ ಬರೋವಾಗ 'ಅಯ್ಯಯ್ಯೋ, ಶಾಲೆ ಶುರುವಾಯಿತಲ್ಲ' ಎಂಬ ಗಾಢ ವಿಷಾದವನ್ನೂ, 'ಇನ್ಯಾವಾಗ ನೋಡೋದು' ಎಂಬ ಬೇಜಾರನ್ನೂ ಉಳಿಸುತ್ತಿತ್ತು. ಆಗ ಮಕ್ಕಳಾದ ಕಾರಣ 'ಹೋ...' ಎಂದು ಅಳಲು ಯಾವ ಕಟ್ಟುಪಾಡೂ ಇರಲಿಲ್ಲವಲ್ಲ. ಶಾಲೆಯ ದಿನಗಳಲ್ಲೂ ಆವಾಗೊಮ್ಮೆ,ಈವಾಗೊಮ್ಮೆ ನೆನಪಾಗಿ ಮುಂದಿನ ರಜೆಗೋಸ್ಕರ ಕಾದು ಕೂರುವಂತೆ ಮಾಡುತ್ತಿತ್ತು.
ಸ್ಟೇಷನ್ ಹತ್ತಿರವಾದಂತೆ ರೈಲು ನಿಧಾನವಾಗುತ್ತಾ ಕೊನೆಗೊಮ್ಮೆ 'ಕ್ರೀಚ್...' ಅಂತ ನಿಟ್ಟುಸಿರು ಬಿಡುತ್ತಾ ಸ್ತಬ್ಧವಾಯಿತು; ಬೇಗ ಬೇಗನೇ ನಾನೂ, ಅಮ್ಮನೂ ನಮ್ಮ ಲಗೇಜನ್ನು ಹೊತ್ತುಕೊಂಡು ಅತ್ತಿತ್ತ ಓಡಾಡುತ್ತಾ ಕಂಪಾರ್ಟ್ಮೆಂಟ್ ಹುಡುಕಿ, ಗಡಿಬಿಡಿಯಲ್ಲಿ ಹತ್ತಿ ನಮ್ಮ ಸೀಟ್ ನಂಬರ್ ನೋಡಿಕೊಂಡು, ಎರಡೆರಡು ಸಲ ಕನ್ಫರ್ಮ್ ಮಾಡಿಕೊಂಡು, ನಿರಾಳವಾಗಿ ಸೀಟಲ್ಲಿ ಕೂತು, ಲಗೇಜನ್ನು ಸೀಟಿನಡಿ ನೂಕಿ, 'ಉಸ್ಸಪ್ಪಾ..' ಎಂದು ರೈಲು ಹೊರಡುವುದನ್ನು ಕಾಯತೊಡಗಿದೆವು. ರೈಲು ಸ್ಟೇಷನ್ ಬಿಟ್ಟೊಡಲು ಶುರುವಿಡುತ್ತಿದ್ದಂತೆ, ಕಿಟಕಿಯ ಸರಳಿಗೆ ಮುಖವನ್ನಂಟಿಸಿಕೊಂಡು ಆ ತುಕ್ಕು ಹಿಡಿದ ಕಬ್ಬಿಣದ ವಾಸನೆಯನ್ನು ಆಸ್ವಾದಿಸುತ್ತಾ ನನ್ನೊಳಗೆ ಸಿದ್ಧನಾಗತೊಡಗಿದೆ.
ಕಾಸರಗೋಡಿನಿಂದ ಸರಿಸುಮಾರು ಮುನ್ನೂರು ಕಿಲೋಮೀಟರ್ ಗಳ ಹಾದಿ ಪಾಲಕ್ಕಾಡ್ ಗೆ; ಏಳರಿಂದ ಎಂಟು ಗಂಟೆಗಳ ಪ್ರಯಾಣ. ಬೆಳಗಿನ ಹಾದಿಯಾದರೆ ಕಿಟಕಿಯಿಂದ ಹೊರಗೆ ನೋಡುತ್ತಾ ಕುಳಿತರೆ, ಕಣ್ಣೆದುರು ಸಿನೆಮಾ ಓಡುವಂತೆ ಮಿಂಚಿ ಮಾಯವಾಗುವ ಜನ ಜೀವನ; ರಾತ್ರಿ ಯಾನವಾದರೆ ರೈಲಿನ ಲಯಬದ್ಧ ತಾಳಕ್ಕೆ ಸಾಥ್ ನೀಡುವ ಹೊರಗಿನ ಕತ್ತಲು,ಮಂದ ದೀಪ, 'ಚಾಯ್,ಕಾಫಿ' ಗಳ ಆಲಾಪ ಎಲ್ಲಾ ಸೇರಿ, ಅತ್ತ ನಿದ್ದೆಯೂ ಅಲ್ಲದ ಇತ್ತ ಎಚ್ಚರಿಕೆಯೂ ಅಲ್ಲದ ನಿಗೂಢ ಮಾಯಾಲೋಕ!
ಚಿಕ್ಕವನಿದ್ದಾಗ ಪ್ರತೀ ಬಾರಿ ಶಾಲೆಗೆ ರಜೆ ಬಂದಾಗಲೆಲ್ಲಾ ನಾನೂ,ತಂಗಿಯೂ,ಅಮ್ಮನೂ ಆಸೆ ಮತ್ತು ಖುಷಿಯಿಂದ ಕಾಯುತ್ತಿದ್ದೆವು; 'ಯಾವಾಗ ಹೋಗೋದು ಅಮ್ಮ, ಅಜ್ಜಿ ಮನೆಗೇ?' ಅಂತ ನಾವು ರಾಗ ಎಳೆದರೆ, 'ಅಪ್ಪಂಗೆ ರಜೆ ಸಿಗ್ಬೇಕಲ್ಲ ಮೋನು...' ಅಂತ ಅಮ್ಮನ ಸಮಾಧಾನ; ಒಂದು ವೇಳೆ ಅಪ್ಪನಿಗೆ ರಜೆ ಸಿಗದಿದ್ದರೆ, ಅಪ್ಪ ಇಲ್ಲಿಂದ ರೈಲು ಹತ್ತಿಸಿಬಿಡುತ್ತಿದ್ದರು, ಅಲ್ಲಿ ರಿಸೀವ್ ಮಾಡಲು ಮಾವನೋ,ದೊಡ್ಡಪ್ಪನೋ ಸಿದ್ಧವಾಗಿರುತ್ತಿದ್ದ್ರ್‍ಅರು. ನನಗದೆಲ್ಲಾ ಯಾಕೆ ಆಗ? ಅಲ್ಲಿದ್ದ ಅಣ್ಣನ ಜೊತೆ ಮನಸೋ ಇಚ್ಛೆ ಆಡುವ ತವಕದಲ್ಲಿ, ಈ ಕ್ಯಾಲುಕುಲೇಷನ್ ಗಳೆಲ್ಲಾ ಅರ್ಥ ಕಳಕೊಳ್ಳುತ್ತಿದ್ದವು. ಬೆಳಗ್ಗೆ ತಿಂಡಿ ತಿಂದು ಬ್ಯಾಟ್,ಬಾಲ್ ಹಿಡಿದು ಹೊರಟರೆ ನಾವೇ ಬೇರೆ, ನಮ್ಮ ಪ್ರಪಂಚವೇ ಬೇರೆ! ಹೇಗೆಲ್ಲಾ ಮತ್ತು ಎಲ್ಲೆಲ್ಲಾ ಆಡಬಹುದು, ಎಂಬೆಲ್ಲ ಕನಸುಗಳೊಂದಿಗೆ ಅಪ್ಪನ ಕೈ ಹಿಡಿದು ರೈಲು ಹತ್ತಿದರೆ, ರೈಲು ಹೊರಡುವಾಗ ಅಪ್ಪ ದೂರಾಗುತ್ತಾ ಕೊನೆಗೆ ಅಪ್ಪನ 'ಟಾ,ಟಾ' ಮಾಡುವ ಕೈ ಮಾತ್ರ ಕಂಡು ಕೊನೆಗೊಮ್ಮೆ ಅದೂ ಮಾಯವಾಗಿ, ಅಪ್ಪ ಬಂದಿದ್ದರೆ ಎಂಬ ಹಳಹಳಿ; ಯಾಕೆಂದರೆ ಅಪ್ಪ ರೈಲು ಪ್ರತೀ ಸ್ಟೇಷನ್ ನಲ್ಲಿ ನಿಂತಾಗಲೆಲ್ಲಾ ಅದು ಬೇಕಾ? ಇದು ಬೇಕಾ? ಎಂದು ಕೇಳುತ್ತಾ ಹಲ್ವಾ, ಪಳಂಪುರಿ, ಪರಿಪ್ಪು ವಡೆ ಇತ್ಯಾದಿಗಳೊಂದಿಗೆ ಅಪ್ಪನ ಜೀವಜಲ ಚಾ ಬೇರೆ! ವಾಹ್! ಆಗೆಲ್ಲಾ ಅಪ್ಪ ಅಂದರೆ ಸರ್ವಶಕ್ತ! ರೈಲಲ್ಲಿ ಅಪ್ಪ,ಅಮ್ಮನ ಮಧ್ಯೆ ಕೂರಲು ನನಗೂ ತಂಗಿಗೂ ಜಗಳ, ಹಾಗೆ ಕೂತಾಗಲೆಲ್ಲ ಅದೆಂಥ ರಕ್ಷಣಾ ಭಾವ! ಹಾಗೆ ಅಪನ ಬಿಟ್ಟು, ಪೆಚ್ಚು ಮೋರೆಯಲ್ಲಿ ಕೂತು ಎರಡು ಸ್ಟೇಷನ್ ಕಳೆಯುವಾಗ ಮನಸು ರೈಲಿನೊಂದಿಗೆ ಟ್ಯೂನ್ ಆಗಿ, ಆ ಬೇಸರವೆಲ್ಲಾ ಮರೆತು, ಯಾವಾಗ ತಲುಪುತ್ತೇವೋ ಎಂದು ಕಾಯುವಂತಾಗುತಿತ್ತು. ರೈಲು ಪಾಲಕ್ಕಾಡ್ ಸ್ಟೇಷನ್ ತಲುಪುತ್ತಿದ್ದಂತೆ ಚಂಗನೆ ನೆಗೆದು ಅಲ್ಲಿ ನಮ್ಮ ದಾರಿ ಕಾಯುತ್ತಿದ್ದ ದೊಡ್ಡಪ್ಪನ, ಮಾವನ ಮೇಲೆ ಹಾರಿದರಾಯ್ತು, ಆಮೇಲೆ ತಲೆಬಿಸಿ ಇಲ್ಲ. ಅಷ್ಟೇನೂ ಅರ್ಥವಾಗದ ಮಲಯಾಳ ಭಾಷೆ, ಅದರ ಎಳೆದು ಮಾತಾದುವ ರೀತಿ, ಕರಿದ ತಿಂಡಿಗಳ ಪರಿಮಳ, ನೋಡಿದಲ್ಲೆಲ್ಲಾ ಮುಂಡು, ವೇಷ್ಟಿಗಳು ಇವೆಲ್ಲಾ ನನ್ನೊಳಗಿನ ಕೇರಳವನ್ನು ರೂಪಿಸುತ್ತಿದ್ದವು.
ಅಜ್ಜನ ಮನೆಗೆ ತಾಗಿಕೊಂಡಿರುವ ಕೃಷ್ಣ ದೇವಸ್ತಾನ,ಅಲ್ಲಿನ ಕೆರೆ, ದೊಡ್ಡ ದೊಡ್ಡ ಆನೆಗಳು ಎಲ್ಲೋ ದೇವರ ಮೇಲೆ ಭಕ್ತಿಯ ಜೊತೆ ಭಯವನ್ನೂ ತಂದಿತ್ತು; ದಿನಾ ಬೆಳಿಗ್ಗೆ ಎದ್ದ ಕೂಡಲೆ ಸ್ನಾನ ಮಾಡಿ ದೇವಸ್ತಾನಕ್ಕೆ ಸುತ್ತು ಹಾಕಿ ಅಡ್ಡ ಬಿದ್ದು 'ಒಳ್ಳೆ ಬುದ್ಧಿ ಕೊಡು ದೇವರೇ' ಅಂತ ಬೇಡಿಕೊಡು, ತಿಂಡಿ ತಿಂದು, ಸ್ವಲ್ಪ ದೂರದಲ್ಲಿದ್ದ ಅಣ್ಣನ ಫೋನ್ ಮೂಲಕ ಕರೆಸಿ, ನಾವಿಬ್ಬರು ಹೊರಟರೆ ಮುಗಿಯಿತು; ಪ್ರಪಂಚವೇ ಗ್ರೌಂಡ್,ನಾವಿಬ್ಬರು ರೈವಲ್ ಟೀಮ್ಸ್. ಅಲ್ಲಿ ತಾಗಿದರೆ ಎರಡು ರನ್, ಇಲ್ಲಿ ತಾಗಿದರೆ ಫ಼ೋರ್, ಹೊರಗೆ ಕಂಪೌಂಡ್ ದಾಟಿ ಹೋದರೆ ಔಟ್ ಎಂಬಿತ್ಯಾದಿ ಲೆಕ್ಕಾಚಾರ ಮಧ್ಯೆ, ಆಟ ಶುರು ಮಾಡಿ ಯಾಕೋ ಸೋಲುತ್ತಿದ್ದೇನೆ ಅನ್ನಿಸಿದಾಗ ಊಟದ ನೆನಪು; ಮಧ್ಯಾಹ್ನದ ಬಿಸಿಲಿಗೆ ಆಡೋದು ಬೇಡ ಅಂತ ಹುಕುಮ್ ಕೇಳಿಕೊಂಡು ಟಿ.ವಿ. ಆನ್ ಮಾಡಿ ಸುಮ್ಮನೆ ಮ್ಯಾಟಿನಿ ಷೋ ಮೂವ್ ಯಲ್ಲಿಈ ಮಮ್ಮೂಟ್ಟಿ, ಮೋಹನ್ ಲಾಲ್ ರ ನೋಡುತ್ತಾ ಅವರೆಡೆಗೆ ಮುಗಿಯದ ಆಕರ್ಷಣೆ ಶುರುವಾಯ್ತು ಅನ್ನಿಸುತ್ತದೆ; ಹಾಗೇ ಊರಲ್ಲಿ ಅಪರಿಚಿತವಾಗಿದ್ದ ಥೀಯೇಟರ್ ಗಳು ಇಲ್ಲಿ ವಾರಕ್ಕೊಮ್ದು ಸಲ ಅಮ್ಮ,ಮಾವಂದಿರ ಜೊತೆ ದರ್ಶನ ಭಾಗ್ಯ ಕರುಣಿಸುತ್ತಿದ್ದವು.
ಸುಮ್ಮನೆ ಅಮ್ಮನ ನಿಟ್ಟಿಸಿದೆ. ಕತ್ತಲಲ್ಲಿ ಮುಖದ ಭಾವ ತಿಳಿಯಲಿಲ್ಲ. ಏನಾಗ್ತಾ ಇರಬಹುದು ಈಗ ಅಮ್ಮನ ಮನಸ್ಸೊಳಗೆ? ನಂಗೆ ಆಗ್ತಾ ಇರೋ ತರಾ ಅಮ್ಮಂಗೂ ಹಳೇ ನೆನಪು ಕಾಡ್ತಾ ಇರಬಹುದಾ? ಮೂರು ದಿನ ಮೊದಲು ವಾರದ ರಜೆ ಅಂತ ಹಾಯಾಗಿ ಮನೇಲಿ ಕಾಲು ಚಾಚಿ ಮಲಗಿರುವಾಗ ಅಮ್ಮ 'ತನ್ನೊಳಗೇ ' ಇನ್ನು ನಾಲ್ಕು ದಿನ ಇದೆ ಊರಿನ ವೇಲೆಗೆ...' ಅಂತಂದಿದ್ದು, ಅಕಸ್ಮಾತ್ ಆಗಿ ಕೇಳಿಸಿ ನನ್ನೊಳಗೆ ಅಪರಾಧಿ ಭಾವ ಹುಟ್ಟು ಹಾಕಿತ್ತು. ನಮಗೆ ಶಾಲೆ ಇರುವ ದಿನಗಳಲ್ಲೇ ಅಲ್ಲಿ ಜಾತ್ರೆ ಇರುತ್ತಿದ್ದ ಕಾರಣ ನನಗೆ ಅಜ್ಜಿ ಮನೆ ಜಾತ್ರೆ ಅಂದರೆ ಅಸ್ಪಷ್ಟ ನೆನಪು ಮಾತ್ರ; ಮತ್ತೇನೂ ಯೋಚಿಸದೆ, ಅಮ್ಮನ ' ಸುಮ್ಮನೆ ಹೇಳಿದೆ.. ಇಲ್ಯಾರು ನೋಡ್ಕೋತಾರೆ...' ಗಳನ್ನೆಲ್ಲಾ ಲೆಕ್ಕಿಸದೆ, ಹೊರಡಿಸಿದೆ. ರಾತ್ರಿಯ ಪ್ರಯಾಣವಾದ್ದರಿಂದ ಹೊರಗೆ ಏನೂ ಕಾಣುತ್ತಿರಲಿಲ್ಲ, ಮಲಗೆ ಸುಮ್ಮನೆ ಕೂತಿದ್ದ ಅಮ್ಮನ ನೋಡುತ್ತಾ ಇಡೀ ಹಾದಿ ಕಳೆಯಿತು.
ಬೆಳಗಿನ ಐದು ಗಂಟೆಗೆ ರೈಲು ಪಾಲಕ್ಕಾಡ್ ಸ್ಟೇಷನ್ ಮುಟ್ಟಿದಾಗ, ಚುಮು ಚುಮು ಚಳಿ; ಬಸ್ ಹಿಡಿದು ಅಜ್ಜನ ಮನೆ ತಲುಪುವಾಗ ಗಂಟೆ ಏಳಾಗಿದ್ದ ಕಾರಣ, ಎಲ್ಲರೂ ದೇವಸ್ತಾನಕ್ಕೆ ಹೋಗಿದ್ದರು, ಲಗುಬಗನೆ ಸ್ನಾನ ಮುಗಿಸಿ ಹೋದರೆ ಏನೋ ಅಪರಿಚಿತ ಭಾವ; ಕಳೆದ ಬಾರಿ ಬಂದಾಗ ನಾನು ಆಗಷ್ಟೆ ಹೈಸ್ಕೂಲ್ ಮುಗಿಸಿದ್ದೆ, ನಾನು ಓಡಿಯಾಡಿದ ನೆಲದಲ್ಲಿ ಮಾವಂದಿರ, ಅಣ್ಣಂದಿರ ಮಕ್ಕಳ ಕೇ ಕೇ.. ಯಾಕೋ ನನ್ನನ್ನು ಯಾರೂ ಗಮನಿಸುತ್ತಿಲ್ಲ ಎಂಬ ಅನಾಥ ಭಾವ; ಅಡ್ಜಸ್ಟ್ ಮಾಡೋಕೆ ಕೊಂಚ ಕಾಲ ಹಿಡಿದಿದ್ದರು ಆ ಖಾಲಿತನ ಹಾಗೇ ಉಳಿದಿತ್ತು. ಆಮೇಲಿನ ಕಾಲೇಜಿನ ಗಡಿಬಿಡಿಗಳಲ್ಲಿ ಈ ಕಡೆ ಬರಲು ಸಮಯ ಸಿಕ್ಕಿರಲಿಲ್ಲ, ಸಿಕ್ಕಿದರೂ ಮನಸಿಗೆ ಬೇಡ ಅನ್ನಿಸಿತ್ತು.. ಹಾಗೆ ಎಷ್ಟೋ ವರ್ಷಗಳ ಬಳಿಕ ಈಗ.
ಈಗಲೂ ಅದೇ ಹಿಂಜರಿಕೆಯಿಂದಲೇ ಸುಮ್ಮನೆ ನಿಂತಿದ್ದೆ, ಆದರೆ ಅದೇ ಹಳೆಯ ನಗೆಯೊಂದಿಗೆ, ಅಪ್ಪುಗೆಯಿಂದ ಉಸಿರುಗಟ್ಟಿಸಿ, ಕೇರಳಿಯರಿಗೇ ವಿಶಿಷ್ಟವಾದ 'ವೆಲಿಯ ಉಮ್ಮ' ಕೊಟ್ಟ ದೊಡ್ಡಮ್ಮ, ' ಮೋನು, ಹೇಗಿದ್ದಿಯ, ಅಂತ ಅಜ್ಜಿ, ' ಎಷ್ಟು ಉದ್ದ ಆಗಿದ್ದೀಯಾ! ದೇವರೇ, ನೀನು ಈ ಎರಡು ಕೈ ಮೇಲೆ ಮಲಗಿದ್ದು ನೆನಪಿದೆ' ಅಂತ ನಕ್ಕ ದೊಡ್ಡಪ್ಪ, ನನ್ನ ಆತಂಕವೆಲ್ಲ ಕರಗಿಸಿದರು.
ಅಮ್ಮನ ಅವರ ಜೊತೆ ಮಾತಾಡಲು ಬಿಟ್ಟು ಹೊರ ಬಂದು, ಜಾತ್ರೆಗೆ ತಯಾರಿ ನಡೆಯುತ್ತಿದ್ದದ್ದು ನೋಡುತ್ತಿದ್ದವನಿಗೆ, ದುಬೈಗೆ ಹಾರಿದ್ದ ಅಣ್ಣ ಈ ಸಲ ಸಿಗೊಲ್ಲ ಎಂದು ಹೊಳೆದು ಸ್ವಲ್ಪ ಬೇಜಾರಾಯ್ತು, ಎದುರಿನ ಕಂಪೌಂಡ್ ಗೋಡೆಯಲ್ಲಿ ಮೋಹನ್ ಲಾಲ್ ನ ಯಾವುದೋ ಸಿನೆಮಾ ಪೋಸ್ಟರ್ ನಲ್ಲಿ ಕಂಡೆ; ಮತ್ತೆಲ್ಲ ಬದಲಾದರೂ ಅವತ್ತಿನಂತೆ ಈಗಲೂ ಮೋಹನ್ ಲಾಲ್ ನಗುತ್ತಲೇ ಇದ್ದದ್ದು ನೋಡಿ, ಬಾಲ್ಯದ ಯಾವುದೋ ಕಳೆದ ಕೊಂಡಿ ಸಿಕ್ಕಂತಾಗಿ, ಖುಷಿಯಾಯಿತು. .
esto thingala balika lahariya odetha
ReplyDeletegaali beesidatta chitta..
thanks to gods own country....
good one batre..
ReplyDeleteಅಜ್ಜನ ಮನೆಗೆ ಹೋಗುವ ಸಂಭ್ರಮವೇ ಬೇರೆ... :) ಆಗ ಬೇರೆ ಈಗ ಬೇರೆ ಅಜ್ಜನ ಮನೆ ಮಾತ್ರ ಅದೇ :)
ReplyDelete