ತನ್ನ ಬೆನ್ನನ್ನು ಗಟ್ಟಿಯಾಗಿ ಅವಿಚಿಕೊಂಡಿದ್ದ ವೀಣಾಳ ಸ್ಪರ್ಶದ ಪುಳಕವನ್ನು ಅನುಭವಿಸುತ್ತಾ ಪುತ್ತೂರಿಂದ ಮಂಗಳೂರಿಗೆ ಬೈಕಲ್ಲಿ ರಭಸವಾಗಿ ಹೋಗುತ್ತಿದ್ದ ಕರುಣಾಕರ, ಕಲ್ಲಡ್ಕ ಬರುತ್ತಿದ್ದಂತೆ ಯಾಕೋ ಅಸ್ವಸ್ಥನಾದ, ತಾನು ಚಿಕ್ಕವನಿದ್ದಾಗ ಕಾಲುನೋವಿನಿಂದ ನರಳುತ್ತಿದ್ದಾಗ, ಕಡೆಶ್ವಾಲ್ಯದಲ್ಲಿ ಯಾರೋ ದೊಡ್ಡ ಡಾಕ್ಟ್ರಿದ್ದಾರೆ ಅಂತ ತನ್ನನ್ನು ಕರಕೊಂಡು ಅಮ್ಮ ಬಸ್ಸಿಗಾಗಿ ಕಾದ ಜಾಗ ಇದು ಅಂತ ಹೊಳೆದು, ಅದಕ್ಕೂ ಈಗಾಗೋದಕ್ಕೂ ಏನು ಸಂಬಂಧ ಎಂದು ಯೋಚಿಸತೊಡಗಿದ. ಅದು ಅಷ್ಟು ಸ್ಪಷ್ಟವಾಗಿ ಮನದಲ್ಲಿ ಅಚ್ಚೊತ್ತಿರಲು ಕಾರಣ, ಆ ದಿನ ಬಸ್ಸು ಅರ್ಧ ಗಂಟೆ ತಡವಾಗಿ ಬಂದಿತ್ತು ಮತ್ತು ಆ ಅರ್ಧ ಗಂಟೆಯೂ ತಾನು ’ಕುಂಯಿ...’ ಎಂದು ರಾಗ ಎಳೆಯುತ್ತಾ ಅಳುತ್ತಿದ್ದ; ಆಗ ಅಲ್ಲಿದ್ದವರ ಕುತೂಹಲದ ಕಣ್ಣುಗಳಿಗೆ, ತನ್ನನ್ನು ಸಮಾಧಾನ ಮಾಡಲೂ ಆಗದೆ ಅಮ್ಮ ಮುಜುಗರದಿಂದ ನಿಂತದ್ದು ನೆನಪಾಯಿತು. ಅಷ್ಟರಲ್ಲಿ ’ಲಕ್ಷ್ಮೀ ನಿವಾಸ’ ಹೋಟೆಲ್ ಬಂತು. ಕಲ್ಲಡ್ಕ ಟೀ ಕುಡಿಯೋಣ ಅಂತ ಬೈಕ್ ನಿಲ್ಲಿಸಿದವನಿಗೆ ವೀಣಾಗೆ ಇದನ್ನೆಲ್ಲ ಹೇಳೋದೋ, ಬೇಡವೋ ಎಂಬ ಗೊಂದಲಕ್ಕೆ ಬಿದ್ದ; ’ನಮ್ಮ ನಡುವೆ ಯಾವುದೇ ಸೀಕ್ರೆಟ್ಸ್ ಇರಬಾರದು, ನಾವಿಬ್ಬರು ಸೋಲ್ ಮೇಟ್ಸ್ ಅಂತ ಇಬ್ರೂ ಮಾಡಿದ್ದ ಪ್ರಾಮಿಸ್ ಗಳೆಲ್ಲ ನೆನಪಾಯಿತು. ತಾನು ಚಡ್ಡಿ ಹಾಕಿಕೊಂಡು ಶಾಲೆಗೆ ಹೋಗುತ್ತಿದ್ದಾಗ ಎರಡು ಮನೆ ಆಚೆಯ ಹುಡುಗಿಗೆ ಕಾದು ನಿಂತು, ಇದು ಉದ್ದೇಶಪೂರ್ವಕ ಅಂತ ತಿಳಿಯದಂತೆ ಅವಳ ಹಿಂದೆ ಹೋಗುತ್ತಿದ್ದುದು, ಅಪ್ಪನ ಸಹಿ ರಿಪೋರ್ಟ್ ಕಾರ್ಡ್ ನಲ್ಲಿ ಪೋರ್ಜರಿ ಮಾಡಿದ್ದು, ಎಲ್ಲಾ ಹೇಳಿಕೊಂಡು ಅವಳ ಕೀಟಲೆಗೆ, ನಗುವಿಗೆ ವಸ್ತುವಾಗಿದ್ದ; ಆದರೆ ಈಗ ಇದನ್ನು ಹೇಳೋದು ಬೇಡ ಅಂತನಿಸಿತು. ಸುಮ್ಮನೆ ಕೆ.ಟಿ. ಆರ್ಡರ್ ಮಾಡಿ, ಅವಳ ಕಣ್ಣನ್ನೇ ನೋಡುತ್ತಾ ಕುಳಿತವನಿಗೆ, ನನಗೇ ಅಂತ ಕೆಲವು ರಹಸ್ಯಗಳು ಬೇಕು ಅಂತನ್ನಿಸಿತು; ಅಂಥಾ ಭಾರಿ ಅಲ್ಲದ, ಆದರೂ ತನಗೆ ಮಾತ್ರ ಗೊತ್ತಿರುವುದು ಅಂದುಕೊಳ್ಳುವಾಗ ಖುಶಿ ತರುವವು. ಆದರೆ ಪರಿಚಯ ಪ್ರೀತಿಗೆ ತಿರುಗಿದ ಗಳಿಗೆಗಳಲ್ಲಿ, ತನ್ನದೆಲ್ಲವನ್ನೂ ಹೇಳಿಬಿಡಬೇಕು ಅನ್ನುವ ಆತುರಕ್ಕೆ ಸಿಕ್ಕಿ, ಖಾಲಿಯಾಗಿ ಈಗ ಉಳಿದಿರುವುದು ಬರೀ ಇಂಥವೇ ಒಂದೆರಡು ಮರೆತಂಥ ನೆನಪುಗಳು ಮಾತ್ರ; ವೀಣಾಗೆ ಮಾತ್ರ ಅಂಥದ್ದೇನೂ ಅನಿಸಿರಲಿಲ್ಲ, ಅವಳು ಚಿಕ್ಕವಳಿದ್ದಾಗ ಮನೆ ಜಗಲಿಯಿಂದ ಕೆಳಗೆ ಜಿಗಿದು ಆಡುತ್ತಿದ್ದರಿಂದ ಹಿಡಿದು, ಹಾಗೊಮ್ಮೆ ಜಿಗಿದಾಗ ಮನೆ ಪಕ್ಕದ ಚರಂಡಿಗೆ ಬಿದ್ದದ್ದು ಕೂಡ ಯಾವುದೇ ಮುಜುಗರವಿಲ್ಲದೆ ಹೇಳಿದ್ದಳು; ಹೈ ಸ್ಕೂಲ್ ಓದೋವಾಗ ಯಾವನೋ ಉದ್ದ ಕೂದಲ ಹುಡುಗ ತುಂಬಾ ಇಷ್ಟವಾಗಿದ್ದು ಹೇಳಿ ಬಾಯಿ ತುಂಬ ನಕ್ಕಿದ್ದಳು. ಆದರಲ್ಲಿ ಅರಗಿಸಿಕೊಳ್ಳೊದಾದರೆ ಅರಗಿಸಿಕೊ, ನನ್ನ ಭಾರವಂತೂ ಇಳಿಯಿತು ಎಂಬ ನಿರುಮ್ಮಳ ಭಾವ ಕಂಡಿತ್ತು ಕರುಣಾಕರನಿಗೆ. ಇಷ್ಟು ವರ್ಷಗಳಿಂದ ತನ್ನ ಅರಿಯದ ಜೀವವೊಂದು ಹಠಾತ್ತಾಗಿ ಎಂಬಂತೆ ಪರಿಚಯವಾಗಿ ಪ್ರೀತಿ ಶುರುವಾದಂತೆ ತನ್ನ ಗುಟ್ಟುಗಳ ಹೇಳುವ ಪರಿ ಅವನಿಗೆ ಆಶ್ಚರ್ಯ ತಂದಿತ್ತು. ಕರುಣಾಕರನಿಗೆ ಏನು ಹೇಳಲೂ ತೋಚದೆ, ಆರ್ಡರ್ ಮಾಡಿದ ಟೀ ಬರುವಷ್ಟು ಹೊತ್ತು, ಕಂಪೆನಿ ಬಗ್ಗೆ, ಅಲ್ಲಿನ ಜಗಳಗಳ ಬಗ್ಗೆ, ಮೇಲಿನವರಿಗೆ ಮಾಡುವ ಬಟರಿಂಗ್ ಬಗ್ಗೆ ಹೇಳುತ್ತಾ ಹೋದ; ವೀಣಾ ಆಸಕ್ತಿಯಿಂದ ಕೇಳುತ್ತಿದ್ದಳು. ಯಾಕೋ ಇದೆಲ್ಲಾ ಸುಮ್ಮನೇ ಅಂತನ್ನಿಸಿ, ತಾನು ಹೇಳುತ್ತಿದ್ದ ಅಸಂಬದ್ದವನ್ನು ಅಲ್ಲಿಗೇ ನಿಲ್ಲಿಸಿ ಕರುಣಾಕರ ಅವಳ ಮುಖವನ್ನು ನೋಡತೊಡಗಿದ; ’ ಇನ್ನೊಂದು ವರ್ಷದೊಳಗೆ ಮನೇಲಿ ಹೇಳ್ಬೇಕು..’ ಕ್ಯಾಶುವಲ್ ಆಗಿ ಎಂಬಂತೆ ಹೇಳಿ, ವೀಣಾ ನಕ್ಕಳು.
ಯಾಕೋ ಮತ್ತೆ ಬಾಯಾರಿಕೆ ಜಾಸ್ತಿಯಾದಂತಾಯಿತು ಕರುಣಾಕರನಿಗೆ, ಕಳೆದೊಂದು ವಾರದಿಂದ ಭಯಂಕರ ಹಸಿವು ಬೇರೆ; ವೀಣಾಗೆ ಹೇಳಿದ್ರೆ ತಿಂಡಿಪೋತ ಅಂದು ರೇಗಿಸ್ತಾಳೆ ಅಂತ ಹೇಳಿರಲಿಲ್ಲ, ಟೀ ಕುಡಿದು, ಬಿಲ್ಲು ಕೊಟ್ಟು ಹೊರಬಂದವನಿಗೆ ಯಾಕೋ ಏನೋ ಸರಿ ಇಲ್ಲ ಅನಿಸತೊಡಗಿತು; ಸುಮ್ಮನೆ ಬೈಕನ್ನು ಓಡಿಸಿದ ಮಂಗಳೂರತ್ತ, ವೀಣಾಳನ್ನ ಅವಳ ರೂಮ್ ಹತ್ತಿರ ಇಳಿಸಿ,’ಮೆಸೇಜ್ ಮಾಡ್ತೀನಿ’ ಅಂತಂದು ’ಬಾಯ್’ ಹೇಳಿ, ತನ್ನ ರೂಮಿಗೆ ಬಂದವನಿಗೆ ತೀರ ಸುಸ್ತೆನಿಸತೊಡಗಿತು, ನೈಟ್ ಡ್ಯೂಟಿಗೆ ರಜೆ ಮಾಡಿ ಬಿದ್ದುಕೊಂಡ, ವೀಣಾಳ ಮೆಸೇಜಿಗೆ ಉತ್ತರಿಸಲೂ ಉದಾಸೀನವೆನಿಸಿತು..
ಮರುದಿನ ಡಾಕ್ಟ್ರ ಶಾಪ್ ಗೆ ಹೋಗಿ ಕಾಯುತ್ತಿದ್ದಾಗ, ತಾನಿನ್ನೂ ಈ ವಿಷಯವನ್ನು ವೀಣಾಗೆ ಹೇಳಿಲ್ಲ ಎಂದು ನೆನಪಾಗಿ, ಆಮೇಲೆ ಹೇಳಿದರಾಯ್ತು ಅಂದುಕೊಂಡ. ಡಾಕ್ಟ್ರು ಕರುಣಾಕರನ ಪರೀಕ್ಷೆ ಮಾಡಿ, ಸಿಮ್ಟಮ್ಸ್ ಕೇಳಿ, ’ ನೀವೊಂದ್ಸಲ ’ಆರ್.ಬಿ.ಯೆಸ್.’ ಮಾಡ್ಸಿ.ಸುಮ್ನೆ ಶುಗರ್ ಲೆವೆಲ್ ಚೆಕ್ ಮಾಡ್ಬಿಡೋಣ’ ಎಂದು ಅವನನ್ನು ಕಳಿಸಿದರು, ಅವರ ಮಾತಿನ ಧಾಟಿ, ಹಾವ ಭಾವ, ಎಲ್ಲಾ ಯಾವುದೋ ಒಂದರತ್ತ ಬೆಟ್ಟು ಮಾಡುತ್ತಿರುವಂತೆ ಅನ್ನಿಸಿ ಕರುಣಾಕರನಿಗೆ ಭಯ ಶುರುವಾಯಿತು; ವೀಣಾ ಬಳಿ ಇದನ್ನೆಲ್ಲ ಹಂಚಿಕೊಳ್ಳಬೇಕು ಎಂದು ಫೋನೆತ್ತಿದವನು ಯಾಕೋ ಸುಮ್ಮನಾದ, ಆತಂಕದಲ್ಲಿದ್ದಾಗ ,’ ಏನೂ ಇಲ್ಲ ಡಿಯರ್, ನೀನು ವರ್ರಿ ಮಾಡ್ಕೋಬೇಡ..’ ಅನ್ನುವ ಅವಳ ಸಮಾಧಾನದ ಮಾತುಗಳು, ಕಿರಿಕಿರಿಯುಂಟು ಮಾಡುತ್ತೆ ಅನಿಸಿತು. ಟೆಸ್ಟಿಗೆ ಬ್ಲಡ್ ಕೊಟ್ಟು ’ ಒಂದು ಗಂಟೆ ವೈಯ್ಟ್ ಮಾಡಿ ಸಾರ್..’ ಎಂಬ ಉತ್ತರ ಪಡೆದು, ಕಾಯುತ್ತಾ ಕುಳಿತವನಿಗೆ, ಈ ಜಗತ್ತಲ್ಲಿ ತನ್ನನ್ನು ಬಿಟ್ಟು ಎಲ್ಲರೂ ಸುಖವಾಗಿದ್ದಾರೆ ಅಂತ ಗಾಢವಾಗಿ ಅನ್ನಿಸಿತು. ಹಾಗೆ ಯೊಚಿಸುತ್ತಿದ್ದಾಗಲೇ ರಿಪೋರ್ಟ್ ಬಂತು; ಅದನ್ನು ಹಿಡಿದುಕೊಂಡು ಡಾಕ್ಟ್ರ್ ಬಳಿ ಹೋದ; ರಿಪೋರ್ಟ್ ಓದಿ ಡಾಕ್ಟ್ರ್ ’ಒಳಗೆ ಬನ್ನಿ’ ಎಂದು ಇನ್ನೊಂದು ಕೋಣೆಗೆ ಕರೆದುಕೊಂಡು ಹೋದಾಗ, ಕರುಣಾಕರನಿಗೆ ಆತಂಕವಾಗತೊಡಗಿತು; ಅವರು ಮೆಲ್ಲನೆ ತಗ್ಗಿದ ದನಿಯಲ್ಲಿ,’ ನೋಡಿ, ನಿಮ್ಮ ಫ಼್ಯಾಮಿಲಿಲಿ ಯಾರಿಗಾದ್ರು ಡಯಾಬಿಟೀಸ್ ಇದ್ಯಾ?’ ಅಂತ ಕೇಳಿದರು, ಅನುಮಾನದಿಂದ ಕರುಣಾಕರ, ’ ಹೌದು, ನನ್ನ ಅಜ್ಜನಿಗಿತ್ತು, ತಂದೆಗೂ ಇದೆ..ಯಾಕೆ?’ ಎಂದು ಕೇಳಿದ. ’ಹಾಗೇನಿಲ್ಲಾ, ಜಸ್ಟ್ ಹೀಗೇ ಕೇಳಿದೆ, ಏನಿಲ್ಲಾ ನಿಮ್ಮ ಶುಗರ್ ಲೆವೆಲ್ ಸ್ವಲ್ಪ ಹೈ ಇದೆ.. ಗಾಬರಿ ಮಾಡುವಂತದ್ದೇನೂ ಇಲ್ಲ, ಏನಕ್ಕೂ ನೀವು ನಾಳೆ ಎಫ಼್.ಬಿ.ಎಸ್. ಒಂದು ಮಾಡಿಸಿಬಿಡಿ.. ಬೇಡಾ ಅಂದ್ರೆ ಬೇಡ ’ ಅಂದರು ಡಾಕ್ಟ್ರ್, ’ಆಯ್ತು’ ಅಂದವನ ದನಿ ನಡುಗುತ್ತಿತ್ತು.. ’ ಚೇ, ಚೇ ವರ್ರಿ ಮಾಡ್ಬೇಡ್ರಿ, ನಾಳೆ ಖಾಲಿ ಹೊಟ್ಟೆಲಿ ಬನ್ನಿ..’ ಅನ್ನುತ್ತಾ, ಅವರು ಬೆನ್ನು ತಟ್ಟಿದರು, ಮುಖದ ಮೇಲೆ ನಗು ಬರಿಸುತ್ತಾ ಹೊರಬಂದವನಿಗೆ, ಫ಼ುಲ್ ಟೆನ್ ಷನ್; ಹಸಿವಾಗುತ್ತದೆ ಅಂತ ಹೋಟೆಲ್ ಗೆ ಹೋದ್ರೆ ’ ಅದು ತಿನ್ನಬಹುದಾ? ಇದು ತಿನ್ನಬಹುದಾ?’ ಎಂಬ ಅನುಮಾನ; ಏನು ಮಾಡಲೂ ತೋಚದೆ ಎರಡು ದಿನ ರಜೆ ಹಾಕಿದ, ಸಂಜೆ ವೀಣಾ ಜೊತೆ ಮಾತಾಡೋವಾಗ, ’ ನಂಗೇನಾದ್ರೂ ಖಾಯಿಲೆ ಇದ್ರೆ ನನ್ನ ಒಪ್ಕೋತೀಯಾ?’ ಎಂದು ಕೇಳಿದ, ’ ಏನು ಮಾತಾಡ್ತಿದಿಯ? ಏನಾಯ್ತು ಹೇಳು? ’ ಎಂಬ ಅವಳ ಅನುನಯದ ಮಾತುಗಳ, ’ಸುಮ್ಮನೆ ಕೇಳಿದೆ..’ ಎಂದು ಹಾರಿಸಿದ. ’ಇನ್ನು ಹೀಗೆಲ್ಲಾ ಮಾತಾಡಿದ್ರೆ ನೋಡು..’ ಅಂದದಕ್ಕೆ, ಸುಮ್ಮನೆ ’ಹೂಂ’ಗುಟ್ಟಿದ.
ಕರುಣಾಕರ ರಾತ್ರಿಯಿಡೀ ನಿದ್ದೆ ಬಾರದೆ ಹೊರಳಾಡಿದ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ಲಡ್ ಕೊಟ್ಟು ಬಂದವನಿಗೆ, ರಿಪೋರ್ಟ್ ಬರುವವರೆಗೆ ’ಅಯ್ಯಯ್ಯೋ’ ಎಂದು ಮೈ ಪರಚಿಕೊಳ್ಳುವಂತಾಗಿತ್ತು; ರಿಪೋರ್ಟ್ ಹಿಡಿದು ಡಾಕ್ಟ್ರ್ ಬಳಿ ಹೋಗಿ ತೋರಿಸಿದ, ’ ’ವಾಹ್! ಯೂ ಆರ್ ಪರ್ಫ಼ೇಕ್ಟ್ಲೀ ಆಲ್ ರೈಟ್ ಯಂಗ್ ಮ್ಯಾನ್...’ ಅನ್ನುತ್ತಾ ಡಾಕ್ಟ್ರು ಕರುಣಾಕರನ ಬೆನ್ನು ತಟ್ಟಿದರು.
ನಿರಾಳವಾಗಿ ಹೊರ ಬಂದವನಿಗೆ, ಈ ವಿಷಯವನ್ನು ವೀಣಾಗೆ ಹೇಳೋದು ಬೇಡ, ಅಟ್ ಲೀಸ್ಟ್ ಇದೊಂದಾದರು ಗುಟ್ಟು ತನ್ನಲ್ಲಿರಲಿ ಅನಿಸಿತು; ಆಗ ತಾನು ಇನ್ನೂ ಜೀವಂತವಾಗಿರಬಹುದು ಅಂತನಿಸಿತು, ವೀಣಾಗೆ ’ಹಾಯ್..’ ಎಂದು ಮೆಸೇಜು ಮಾಡಿದರೆ ಅವಳ ಕಾಲ್! ’ನಿನ್ನೆ ರಾತ್ರಿ ಪೂರಾ ನಂಗೆ ನಿದ್ದೆ ಇಲ್ಲ ಗೊತ್ತಾ? ನಿಂಗೇನಾಗಿದೆ? ಯಾಕೆ ಹೀಗೆ ಬಿಹೇವ್ ಮಾಡ್ತಾ ಇದೀಯಾ?’ ಅಂದವಳ ಧಾವಂತಕ್ಕೆ, ಏನು ಹೇಳಲೂ ತೋಚದೆ, ’ ಅದೂ ನಿನ್ನೆ ಬ್ಲಡ್ ಟೆಸ್ಟ್ ಮಾಡ್ಸಿದ್ದೆ, ಶುಗರ್ ಹೈ ಬಂತು. ಈಗ ಪುನಃ ಚೆಕ್ ಮಾಡ್ಸಿದೆ, ನಾರ್ಮಲ್ ಅಂತ ಗೊತ್ತಾಯ್ತು’ ಅಂದ. ವೀಣಾನ ’ ನಂಗ್ಯಾಕೆ ಮೊದಲೇ ಹೇಳ್ಲಿಲ್ಲ? ನಾನು ಅಷ್ಟೂ ಬೇಡವಾದ್ನಾ ನಿಂಗೆ?’ ಇತ್ಯಾದಿಗಳಿಗೆ ಸಮಾಧಾನ ಹೇಳಿ, ವಾಪಾಸ್ ರೂಮಿಗೆ ಹೊರಟ ಕರುಣಾಕರನಿಗೆ, ಕಮಿಟ್ ಆದ ಮೇಲೆ ತನ್ನದೂ ಅನ್ನೋದು ಏನೂ ಒಳಗೆ ಉಳಿಯೊಲ್ವಾ? ಅಂತ ಪ್ರಶ್ನೆ ಉಧ್ಭವಿಸಿತು; ಬಹುಶ ಇನ್ಯಾವತ್ತೊ ತಾನು ಕಲ್ಲಡ್ಕದ ಆ ನೆನಪನ್ನೂ ಹೇಳಿಬಿಡ್ತೀನಿ ಎಂದು ಖಾತರಿಯಾಯ್ತು, ’ಅದೆಲ್ಲಾ ಯಾಕೆ ಈಗ’ ಎಂಬ ಭಾವವೂ ಮೂಡಿ, ವೀಣಾ ಕಳಿಸಿದ್ದ,’ಲವ್ ಯು’ ಮೆಸೇಜ್ ನೋಡಿ, ಸುಮ್ಮನೆ ’ ಲವ್ ಯು, ಟೇಕ್ ಕೇರ್ ’ ಅಂತ ಟೈಪ್ ಮಾಡಿ ಸೆಂಡ್ ಒತ್ತಿದ.
@Prash: I know from whr you distilled VEENA to this article.But nanage thumba niraaseyaagide.. yaake gottha..? ninna katheyalliruva KARUNAKARA Naanu (BAILA VAMANA KARUNAKARA PRABHU) agabaraditthe..? No:9 kaata bere.
ReplyDeleteAny how i like this too much...
good one bhatre
ReplyDeletekaru..thattane holeda hesaru nimmadu..besara madbedi
ReplyDeleteಲಾಯ್ಕ ಉಂಟು ಭಟ್ರೆ ಕಥೆ :P
ReplyDelete