Wednesday, September 18, 2013

into the wild ಮತ್ತು ನಿಜದ ಪೊಳ್ಳು

ಬೆಸ್ಟ್ ಸೆಲ್ಲರ್ ಥ್ರಿಲ್ಲರ್ಗಳ ನಂತರವೇನಾದರು ಸಾವಧಾನದ ಕತೆಗೆ ಮರಳಿದರೆ ಮನಸು ಪುಟ ಹಾರಿಸುತ್ತದೆ. ಅಬ್ದುಲ್ ರಶೀದರ ಬರಹವೊಂದನ್ನ ಪಟ್ಟಾಗಿ ಓದಕೂತಾಗಲೇ ಇದರಲ್ಲಿ ಅಡ್ರಿನಾಲಿನ್ ರಶ್ ಇಲ್ಲವೆನಿಸಿ ಪಿಚ್ಚೆನಿಸಿತು. ಕಮಟು ವಾಸನೆಯ axe ಮೂಸಿ ಅಭ್ಯಾಸವಾದವರಿಗೆ ಮಲ್ಲಿಗೆ ವಾಸನೆಯೇ!!
ಹಾಗೆ ಲಂಗುಲಗಾಮಿಲ್ಲದೆ ಅಲೆಯುತ್ತಿದ್ದಾಗಲೇ ಬಹಳದಿನಗಳಿಂದ ನೋಡಬಯಸಿದರೂ ಸತ್ಯ ಇದುರಿಸಲು ಹೆದರಿ ಅಥವಾ ಆಫ್ಟರ್ ಇಫೆಕ್ಟಿಗೋ , ಫೋಲ್ಡರ್ ಗಳೊಳಗೆ ಅವಿತಿದ್ದ into the wild ಶುರುಮಾಡಿದೆ.ಒಂಥರಾ ಭವಬಂಧಗಳ ಕಳಚುತ್ತಾ ಹಣ , ಕ್ರೆಡಿಟ್ ಕಾರ್ಡ್ ಎಲ್ಲಾ ಸುಟ್ಟು ಕೊರೆವ ಚಳಿಯಲ್ಲಿ ಸುಳ್ಳು ಬದುಕಿನ ಸುಳ್ಳನ್ನು ತೊರೆದು ಹೋಗುವ ಮೆಕೆಂಡ್ಲಿಸ್ ನ ಕತೆ.ನಿಜವಾದ ಘಟನೆ.
ಯಾಕೋ ಗೊತ್ತಿಲ್ಲ ಈ ಚಿತ್ರ ಚೆನ್ನಾಗಿದ್ದರೂ ನನ್ನೊಳಗೆ ಇಳಿಯಲಿಲ್ಲ.ಕಾರಣ ಗೊತ್ತು ಗುರಿಯಿಲ್ಲದೆ ಒಬ್ಬ ಅಲೆದಾಡಿ ಅನಾಥ ಶವವಾಗುವ ದುರಂತ.ಅಥವಾ  ನಮ್ಮ ಸಿನಿಮಾಗಳಂತೆ ಕತೆಗೊಂದು ಹೀರೋ ,ಹೀರೋಯಿನ್ ಬೇಕೇ ಎಂಬ ಮನಸ್ಥಿತಿ. ಸುಮ್ಮನೆ ಹೀಗೆ ಸಾಗಿದರೆ ಗುರಿಯಿಲ್ಲದೆ 'ಇದೆಂಥದ್ದಪ್ಪಾ, ಕರ್ಮ..' ಅನಿಸತೊಡಗಿ ಪಾರಾಗುವ ದಾರಿ ಅರಸುತ್ತದೆ.
ನನಗೆ ಅನಿಸಿದ್ದು ಈತ ಏಕೆ ಹಿಪ್ಪಿ ಸಂಸ್ಕತಿ ಅನುಸರಿಸಿಲ್ಲ ಅಂತ.ಬಹುಶ  ಅದರ ಏರುಕಾಲ ಕಳೆದು ಹೋಗಿತ್ತಾದ್ದರಿಂದ ಇರಬಹುದು.
ಏನಾದರೂ ಈ ಚಿತ್ರ ನನ್ನನ್ನ ತುಂಬ ದುಃಖಿತನನ್ನಾಗಿಸಿತು.ನಾವು ನೋಡುವ ಬಹುತೇಕ ಸಿನಿಮಾಗಳಲ್ಲಿ ಎಷ್ಟೇ ಕಷ್ಟ ಬಂದರೂ ಆಮೇಲೆ ಸರಿಯಾಗ್ತದೆ ಬಿಡು ಯಾಕೆಂದರೆ ಅವ ಹೀರೋ ಎಂಬ ಹೋಪ್ ಇರುತ್ತೆ.ಇದರಲ್ಲಿ  ಎದುರಿಸಲೇಬೇಕಾದ ಸೋಲು ಸಾವಿನ ರೂಪದಲ್ಲಿ ಕಾದು ಕೂತಿದೆ ಅದೂ ನಮಗೂ ಗೊತ್ತಿದೆ ಅನ್ನುವಾಗಿನ ವಿಷಾದ ಕೊರೆಯುತ್ತದೆ.
ಮರೀಚಿಕೆ ಸುಳ್ಳಾದರೂ ಹಿತವೇ, ಉರಿವ ಸತ್ಯಕಿಂತ!

No comments:

Post a Comment