ಪುಸ್ತಕವೊಂದು ಬಿಡುಗಡೆಯಾಗುವ ಮೊದಲೇ ತುದಿಗಾಲಲ್ಲಿ ನಿಂತು, ಖರೀದಿಸಿದ ಕೂಡಲೇ ಬಿಸಿ ಬಿಸಿ ಯಾಗಿ ಓದಿ ಅಭಿಪ್ರಾಯ ದಾಖಲಿಸುವ ಪದ್ಧತಿಯೂ, ಹಾಗೆ ಕಾದು ಕೊಳ್ಳುವಂತೆ ಮಾಡುವ ಲೇಖಕರೂ ಕನ್ನಡಕ್ಕೆ ಹೊಸದು. ನನ್ನ ಅಥವಾ ನನ್ನ ಸಮಕಾಲೀನರಿಗೆಲ್ಲ ಹ್ಯಾರಿ ಪಾಟರ್ ಸರಣಿಯ ಪುಸ್ತಕಗಳ ದಾಖಲೆ ಮಾರಾಟದ ಕಥೆ ನೋಡಿ, ಕೇಳಿ ಗೊತ್ತಷ್ಟೆ. ಕನ್ನಡದ ಇನ್ನೂ ಒಂದು ಪೂರ್ವಾಗ್ರಹ ಪೀಡಿತ ಅಭಿಪ್ರಾಯ ಏನೆಂದರೆ ಅಧಿಕ ಮಾರಾಟವಾಗುವ ಪುಸ್ತಕಗಳು ಸಾಂಸ್ಕೃತಿಕವಾಗಿ ಮಹತ್ವದಲ್ಲ ಎಂದು. ಇದು ಯಾರು ಹುಟ್ಟು ಹಾಕಿದ್ದು ಹೇಗೆ ಬೆಳೆದು ಬಂತು ಅನ್ನುವುದು ಇಲ್ಲೆ ಅನಗತ್ಯ;
ಈಗಷ್ಟೆ ಮುಗಿಸಿದ ನಿಮ್ಮ ಹೊಸ ಕಾದಂಬರಿ 'ಯಾನ'ದ ಕಥಾ ಪ್ರಪಂಚ ನಿಮ್ಮ ಓದುಗ ವರ್ಗಕ್ಕೆ ಅಪರಿಚಿತವೇನಲ್ಲ. ದಶಕಗಳಿಂದ ನಿಮ್ಮ ಕಾದಂಬರಿಗಳ ಪಾತ್ರ ಪ್ರಪಂಚದಲ್ಲಿ ಮುಳುಗೇಳುತ್ತಿದ್ದ ನಮಗೆಲ್ಲಾ ಇವರುಗಳು ಮತ್ತೆ ಮತ್ತೆ ಬೇರೆ ಬೇರೆ ರೂಪದಲ್ಲಿ ಎದುರಾಗುವವರೇ;
ಕಥೆಯನ್ನು ಹೇಳುವುದು ಈಗಂತೂ ತೀರಾ ಅನುಚಿತ, ಅದು ಓದಲು ಕಾಯುವವರ ರಸಭಂಗ ಮಾಡುವ, ವಿಕೃತ ಕೆಲಸ. ಆದರೆ ನಿಮ್ಮ ಅಂಚುವಿನ ಅಮೃತಾ, ದೂರ ಸರಿದರು ವಿನ ನಾಯಕಿ, ದಾಟುವಿನ ಸತ್ಯ ಇಲ್ಲಿ ಬೇರೆ ಬೇರೆ ಘಟ್ಟಗಳಲ್ಲಿ ನಾಯಕಿಯಾಗಿ ಕಾಣುತ್ತಾರೆ, ನಾಯಕ ನು ನಿರಾಕರಣ, ತಂತು, ನೆಲೆ ಯವನೇ ಹಿನ್ನೆಲೆಯ ಕಥಾ ಭಿತ್ತಿ ಮಾತ್ರ ಹೊಸದು. ಅರ್ಥರ್ ಸಿ ಕಾರ್ಕನ ಮಾದರಿಯ ಮೈ ನವಿರೇಳಿಸುವ ವೈಜ್ನಾನಿಕ ಕಥೆಯ ಹುಡುಕಿ ಹೊರಟವರಿಗೆ ಮಾತ್ರ ನಿರಾಶೆ ಕಟ್ಟಿಟ್ಟ ಬುತ್ತಿ. ಎಂದಿನ ಭೈರಪ್ಪರಾಗಿ ಮನುಷ್ಯನ ಅಂತರ್ಮುಖತೆ, ಪ್ರಜ್ನಾ ಪ್ರವಾಹದ ತಂತ್ರ ಬಳಕೆಯಾಗಿದೆ; ಕಾಲವು ಉಯ್ಯಾಲೆಯಂತೆ ಭೂತದಿಂದ ವರ್ತಮಾನಕ್ಕೂ ಮತ್ತೆ ಭೂತಕ್ಕೂ ತುಯ್ಯುತ್ತದೆ. ಸಂಧಿಗ್ದಗಳು ,ಅಂತರ್ಮಥನಗಳು ಅವೇ ,ರೀತಿ ಬೇರೆ.
ಇವೆಲ್ಲಾ ಮೊದಲ ಓದಿಗೆ ದಕ್ಕಿದವು. ತಾಳ್ಮೆಯಿಂದ ಸವಿಯುತ್ತಾ ಇನ್ನೊಮ್ಮೆ ಓದಿದರೆ ( ಅಲ್ಲಿ ಆತುರವಿಲ್ಲ, ನಾಲಿಗೆಯಲ್ಲಿ ಕರಗಿದ ಚಾಕಲೇಟ್ ಉಲಿಸಿಹೋದ ಸ್ವಾದದ ಸಿಹಿ ನೆನಪು)_ ಬಹುಶ ಇನ್ನಷ್ಟು ದಕ್ಕಬಹುದು.
ಆದರೂ ನಿಮ್ಮ ದೊಡ್ಡ ಅಭಿಮಾನಿಯಾಗಿದ್ದರೂ ಕವಲು ವಿನಲ್ಲಿ ಹ್ಯಾಪ್ಪಿ ಎಂಡಿಂಗ್ ಮತ್ತು ಮಹಿಳೆಯರನ್ನ ತೀರಾ ಕೆಟ್ಟದಾಗಿ ಚಿತ್ರಿಸಿದ್ದು ಸರಿ ಕಂಡಿರಲಿಲ್ಲ, ನಿಮ್ಮ ಇತ್ತೀಚಿನ ಕೃತಿಗಳಲ್ಲಿ ನೀವು ಪುರುಷ ಪಕ್ಷಪಾತಿಯೋ ಎಂಬ ಅನುಮಾನ ,ಗೊಂದಲಗಳು ಕಾಡುತ್ತವೆ. ಇವೆಲ್ಲಾ ಚಿಲ್ಲರೆ ಸಂಗತಿಗಳು. ಒಂದೊಳ್ಳೆಯ ಪುಸ್ತಕ ಓದಿದ ಮೇಲೂ ಕಾಡುತ್ತದೆ. ಆ ಅನುಭವಕ್ಕಂತೂ ಮೋಸವಿಲ್ಲ. ನಮಸ್ಕಾರ.