Tuesday, June 25, 2013

ಜನಾರ್ದನ ಭಟ್ಟರ 'ಅನಿಕೇತನ'

ಇತ್ತೀಚೆಗಷ್ಟೇ ಮುಗಿಸಿದ ಬಿ. ಜನಾರ್ದನ ಭಟ್ ರ 'ಅನಿಕೇತನ' ಕಾದಂಬರಿ ಹಲವಾರು ಕಾರಣಗಳಿಗೆ ಇಷ್ಟವಾಯ್ತು. ಮೊದಲನೇಯದಾಗಿ ಇದು ನನ್ನ ಮಣ್ಣಿನ ಕತೆ; ನಾನು ಕಂಡ ,ಕಾಣುತ್ತಿರುವ, ನನ್ನ ಭಾವಕೋಶದೊಳಗೆ ಇಳಿದ ಪರಿಸರದ ಜನರ ಹಳೇ ಕತೆ. ಮನೆ ಬಿಟ್ಟು ಬೊಂಬಾಯಿಗೆ ಓಡಿ ಹೋಗಿದ್ದ ಕೇಶವ ೧೯೭೫ ರಲ್ಲಿ ತನ್ನ ಊರಿಗೆ ವಾಪಾಸ್ ಬರುವಾಗ ಅವನ ನೆನಪುಗಳ ಕತೆ. ನಿಜವಾದ ಕತೆ ನಡೆಯುವುದು ೧೯೬೧ ರಿಂದ; ಅವನ ತಂದೆ ಮಧು ಭಟ್ಟರು ನಡುಕಣಿಯಲ್ಲಿ ಹೋಟೆಲ್ ಇಡುವುದರಿಂದ.  ಪೇಟೆಯಾದ ಮಂಗಳೂರಿಂದ ವಲಸೆ ಬಂದ ಕುಟುಂಬವೊಂದು ಅಸ್ತಿತ್ವಕಾಗಿ ಹೋರಾಟ ಮಾಡುವ, ಆ ಮೂಲಕ ಗೊತ್ತೋ ಗೊತ್ತಿಲ್ಲದೆಯೋ ಊರಿನ ಆಗುಹೋಗುಗಳಲ್ಲಿ ಪಾತ್ರ ವಹಿಸುವ ಕತೆ. ಇದರ ನಡುವೆ ಊರಿನ ದೊಡ್ಡ ಕುಳಗಳ ಹೊಡೆದಾಟ, ಪರಿಸರ ನಾಶ ಇತ್ಯಾದಿಗಳು ಕತೆಯ ಭಾಗವಾಗಿ ವಿಷಾದ ಹುಟ್ಟಿಸುತ್ತವೆ;  ಕಾರಂತರ ಮರಳಿ ಮಣ್ಣಿಗೆಯ ಮುಂದುವರಿದ ಭಾಗದಂತೆ ಕಾಣುವ ಈ ಕಾದಂಬರಿ , ಸದ್ಯದ ಕನ್ನಡ ಸಾಹಿತ್ಯಿಕ ವಾತಾವರಣದ ನಗರ ಕೇಂದ್ರಿತ ಕಥಾನಕಗಳಿಗೆ ಉತ್ತರವಾಗಿ ನಿಲ್ಲುತ್ತದೆ. ಕೊನೆಗೆ ಕೇಶವ ತನ್ನೂರಿಗೆ ಬಂದಾಗ ಅವನ ನೆನಪಲ್ಲಿದ್ದ ಯಾವುದೂ ಮೊದಲಿನಂತಿರದೆ ತನ್ನ ಕಲ್ಪನೆಯ ಊರಿಗೂ, ಈಗಿನ ನಿಜಕ್ಕೂ ಹೊಂದಿಯಾಗದೆ ಕೇಶವ ಗೊಂದಲಕ್ಕೀಡಾಗಿ ನಿಲ್ಲುತ್ತಾನೆ.
ಜನಾರ್ದನ ಭಟ್ ರ ನಡುಕಣಿ ಕಾದಂಬರಿ ತ್ರಿವಳಿಗಳಲ್ಲಿ ಕೊನೆಯದಾದ ಇದು (ಉಳಿದೆರಡು 'ಉತ್ತರಾಧಿಕಾರ' ಮತ್ತು 'ಹಸ್ತಾಂತರ' ) ಒಂದು ಕಾಲಗಟ್ಟದ ಜನಜೀವನದ ಚಿತ್ರಣವನ್ನು ಯಶಸ್ವಿಯಾಗಿ ತೆರೆದಿಡುವುದರ ಮೂಲಕ ಗೆಲ್ಲುತ್ತದೆ.

No comments:

Post a Comment