ಮೊದಲೆಲ್ಲ ಒಂದಿಡೀ ಮಗ್ ;
ಈಗ ಕಪ್ಪಿನರ್ಧ
ಸಾಕು ಚಾ,
ಎಲ್ಲೆಲ್ಲ ಜೊತೆಗಿದ್ದೆ ,
ಸುರಿವ ಮಳೆಯ ಮುಂಜಾವುಗಳಲ್ಲಿ
ಮಾಡಿನ ಅಂಚಿನಿಂದ ಜಾರುವ ಹನಿಗಳ ಎಣಿಸಲು ,
ಬಿರು ಬಿಸಿಲಲ್ಲಿ ಮಧ್ಯಾಹ್ನದ ನಿದ್ದೆ ಮುಗಿಸಿ ಎದ್ದಾಗ ,
ಸ್ಟೈಲ್ ಹೊಡೆಯಲು ಎಳೆದ ಸಿಗರೇಟು ಧಮ್ಮಿನ ಜೊತೆ,
ನಿನ್ನ ಪರಿಮಳ,
ಎಷ್ಟು ವೆರೈಟಿಯ ರುಚಿ ;
ಗುಟುಕಿಗೊಂದು ಕನಸು ,
ಸಾವಿನ ಎಕ್ಸಾಮಲ್ಲಿ ಹೋಪ್ಸ್ ಹೋದಾಗ,
ತಲೆಕೆಟ್ಟ ಲೆಕ್ಚರ್ ಕೇಳಿ ಮಂಡೆ ಬಿಸಿಯಾದಾಗ ,
ನನ್ನ ಚಾ ,
ನನ್ನದು ಮಾತ್ರ;
ಕಪ್ಪ ತಳದಲಿ ಸಕ್ಕರೆ ಕಂಡಾಗ
ನಿರಾಸೆ,
ಹಾಗಂತ ಇಷ್ಟಪಟ್ಟು ಕುಡಿದದ್ದು ಸುಳ್ಳೇ?
ಆಸ್ವಾದಿಸಿದೆ,
ಚಾ ವೋ, ತೋಡ ನೀರೋ!
ಅದೊಂದು ಧ್ಯಾನ,
ಬದುಕಂತೆ;
ಈಗಲೂ ಅನಿಸುತ್ತೆ ,
ಒಂದೊಂದು ಸಲವೂ ಚಾ
ಮತ್ತೆ ಹಳೆಯ ನೆನಪುಗಳ
ತಾಜಾಗೊಳಿಸಿದಂತೆ ,
ಹೆಚ್ಚು ಮನುಷ್ಯನೂ ಆಗಿಸುತ್ತೆ ;
ಮತ್ತದೇ ದಾರಿಯಲಿ
ಮತ್ತೆ ದಾರಿ ತಪ್ಪಿ ಅಲೆದಾಡಲು ಇಷ್ಟಪಟ್ಟಂತೆ ,
ನೆನಪ ನೇವರಿಸಲು ಇದೂ ಒಂದು ಸಾಧನ;
ಮತ್ತೊಂದು ಗುಟುಕು ,
ಕಳೆದ ಕೊಟಡಿಯ ಬೀಗದ ಕೀ ದೊರೆತಂತೆ ,
ಕಪ್ಪು ಖಾಲಿ;
ಇನ್ನೊಮ್ಮೆ ಸಿಗಲು ಕಾತರ;
ನಮಸ್ಕಾರ !
ಸಿಗುವ ಆಸೆಯಲ್ಲಿ ...
No comments:
Post a Comment