Thursday, November 12, 2015

ಆಡುಜೀವನ

ಸ್ವಾತಂತ್ರ್ಯದ ಮಹತ್ವದ ಅರಿವಾಗುವುದು ಅದು ಇಲ್ಲವಾದಾಗಲೇ ಎಂಬ ಮಾತಿದೆ. ನಮ್ಮ ತಲೆಮಾರಿಗೆ ಈ ಮಾತಿನ ಅರ್ಥ ಆಗಿರುವ ಸಂಭವಗಳು ಕಡಿಮೆ. ಇತ್ತೀಚೆಗೆ ಓದಿದ ’ಬೆನ್ಯಾಮೀನ್’ ರ ’ಆಡುಜೀವನ’ (ಅನುವಾದ ಡಾ.ಅಶೋಕ್ ಕುಮಾರ್ ) ಇದರ ಅರ್ಥವ ತಕ್ಕಮಟ್ಟಿಗೆ ಮಾಡಿಸಿತು.ನಮಗೆಲ್ಲ ಒಂದು ಕಲ್ಪನೆಯಿದೆ. ಇಲ್ಲಿಂದ ಅರಬ್ ದೇಶಗಳಿಗೆ ಹೋದವರೆಲ್ಲ ಕೈ ತುಂಬಾ ದುಡಿದು ಝಣ ಝಣ ಎಣಿಸಿಕೊಂಡು ಬರುತ್ತಾರೆ ಎಂದು.ಈ ಕಾದಂಬರಿಯು ಅದೇ ಆಸೆ ಹೊತ್ತು ವಿದೇಶಕ್ಕೆ ತೆರಳುವ ಒಬ್ಬನ ಅನುಭವದ ಕತೆ. ಲೇಖಕರಿಗೆ ಇನ್ನೊಬ್ಬರ ಅನುಭವವಾಗಿ ದಕ್ಕಿದ ಈ ಕತೆ ಪ್ರಥಮ ಪುರುಷ ನಿರೂಪಣೆಯಲ್ಲಿ ನಮ್ಮದೇ ಕತೆಯಾಗಿ ಎದೆ ಹಿಂಡಿಸಿಕೊಳ್ಳುತ್ತದೆ.
ಮನೆಯ ಕಷ್ಟಗಳಿಗೆ ಒಂದೇ ಉತ್ತರವೆಂಬಂತೆ ನಜೀರ್ ವಿದೇಶಕ್ಕೆ ಹೋಗಲು ಅಣಿಯಾಗುತ್ತಾನೆ.ಪತ್ನಿಯ ಬಿಟ್ಟು ಯಾವುದೋ ಕನ್ಸ್ಟ್ರಕ್ಷನ್ ಕಂಪೆನಿಯಲ್ಲಿ ಕೆಲಸ ಹುಡುಕಿ ಹೊರಡುವ ಆತನಿಗೆ ಅಲ್ಲಿ ಎದುರಾಗುವುದು ಕಷ್ಟ ಪರಂಪರೆ.ಏರ್ ಪೋರ್ಟ್ ನಲ್ಲಿ ಕಾದೂ ಕಾದೂ ಸುಸ್ತಾಗುವ ಅವನಿಗೆ, ಕೊನೆಗೊಮ್ಮೆ ಆಶಾಕಿರಣದಂತೆ ಬಂದ ಅರಬಾಬ್ ಅವನನ್ನು ಎಲ್ಲಿಗೋ ಕರೆದೊಯ್ಯುತ್ತಾನೆ. ಅಲ್ಲಿ ತಲುಪುವವರೆಗೂ ತನ್ನ ಕೆಲಸದ ಅರಿವಿರದ ನಜೀರ್ ಗೆ ಅಲ್ಲಿನ ಪರಿಸ್ಥಿತಿ ಕಂಡು ಅಯೋಮಯವಾಗುತ್ತದೆ. ಆಡುಗಳನ್ನು ನೋಡಿಕೊಳ್ಳುವ, ಅವುಗಳ ಚಾಕರಿ ಮಾಡುವ,ಅವಕ್ಕೆ ಹುಲ್ಲು ಹಾಕಿ ನೀರು ಕುಡಿಸುವ, ಅವುಗಳನ್ನು ಕಾಲಾಡಿಸಲು ಕರಕೊಂಡು ಹೋಗುವ ಕೆಲಸ.ಮಲಗಲು ನೆಲವೇ ಗತಿ.ಸ್ನಾನ ಕನಸಿನ ಮಾತು.ತಿನ್ನಲು ಖಾಮೂಸ್ ಎಂಬ ತಿನಿಸು ಮಾತ್ರ. ಬಹಿರ್ದೆಶೆಗೆ ಹೋದರೆ ಸ್ವಚ್ಚಗೊಳಿಸಲೂ ನೀರಿಲ್ಲ. ಅಲ್ಲಿ ಬಂದಿಳಿದವನಿಗೆ ನಿರ್ಭಾವುಕನಾದ ಭೀಕರ ಜೀವಿಯೊಬ್ಬ ಕಾಣ ಸಿಗುತ್ತಾನೆ. ತನ್ನಂತೆ ಅಲ್ಲಿಗೆ ಕೆಲಸ ಹುಡುಕಿಕೊಂಡು ಬಂದವನು ಅವನು ಎಂಬ ಸತ್ಯ ಗೊತ್ತಾದ ನಜೀರ್ ಗೆ ಅವನ ಅಸಹ್ಯ ವೇಷ ಕಂಡು ತನ್ನ ಭವಿಷ್ಯವೂ ಹೀಗೇ ಎಂಬ ಕಟು ಸತ್ಯ ಅರಿವಾಗುತ್ತದೆ.

ಬೆಳಗ್ಗೆ ಆಡಿನ ಹಾಲು ಕರೆಯುವುದು. ಸ್ವಲ್ಪ ಅದನ್ನೇ ಕುಡಿಯುವುದು. ಆಮೇಲೆ ಆಡುಗಳಿಗೆ ಹುಲ್ಲು ಹಾಕಿ,ನೀರು ಕುಡಿಸಿ, ಕಾಲಾಡಿಸಲು ಕರಕೊಂಡು ಹೋಗುವುದು,ಅವು ಅಂಕೆ ತಪ್ಪದಂತೆ ನೋಡಿಕೊಳ್ಳುವುದು, ಹೀಗೆ ನಜೀಬ್ ಕೆಲಸ ಮಾಡಿ ಮಾಡಿ ಬಳಲಿ ಬೆಂಡಾಗುತ್ತಾನೆ.ಭಾಷೆಯ ಪರಿಚಯವಿಲ್ಲದೆ ಕಣ್ಣು ಹಾಯಿಸುವವರೆಗಿನ ಮರಳುಗಾಡಿನ ಏಕತಾನತೆಗೆ,ತನ್ನ ಹೊರತು ಇನ್ನೊಂದು ಮನುಷ್ಯ ಜೀವಿಯ ಸಂಗಾತವಿಲ್ಲದೆ ಬಳಲುತ್ತಾನೆ. ಕುರಿಗಳ ಉಣ್ಣೆ ಕತ್ತರಿಸಲು ಬರುವ ಕೆಲಸಗಾರರ ದೇಹ ವಾಸನೆ ಪಡೆಯಲೆಂದು ಹತ್ತಿರ ಹೋಗಿ ನಿಲ್ಲುವಷ್ಟು ವಿಚಲಿನಾಗುತ್ತಾನೆ.
ಒಂದು ರಾತ್ರಿ ಅವನ ಜೊತೆಗಿದ್ದ ಆ ಮನುಷ್ಯ ತಪ್ಪಿಸಿಕೊಳ್ಳುತ್ತಾನೆ.ಆಮೇಲೆ ತಿಳಿದು ಬರುವುದೆಂದರೆ ತಪ್ಪಿಸಿಕೊಳ್ಳಲು ಯತ್ನಿಸಿದ ಅವನನ್ನು ಅರಬಾಬ್ ಕೊಂದಿರುತ್ತಾನೆ. ಹಗಲಿನ ಸೆಕೆ, ರಾತ್ರಿಯ ಮೈ ನಡುಗಿಸುವ ಚಳಿಯಲ್ಲಿ ಮಣ್ಣಿನ ಮೇಲೆ ಮಲಗ ಬೇಕಾದ ಅವಸ್ಥೆಯಲ್ಲಿ ನಜೀಬ್ ಗೆ ತನ್ನೂರಿನ ನೆನಪುಗಳು ಒತ್ತರಿಸಿಕೊಂಡು ಬರುತ್ತವೆ. ಆದರೇನು ಮಾಡುವುದು? ಓಡಿ ಹೋಗಲು ಯತ್ನಿಸಿದರೆ ಅರಬಾಬ್ ನ ಕೋವಿಯ ಭಯ. ಕೊನೆಗೊಂಡು ದಿನ ಹತ್ತಿರ ಅದೇ ರೀತಿ ಕೆಲಸ ಮಾಡುತ್ತಿದ್ದ ಇಬ್ಬರೊಂದಿಗೆ ಪರಾರಿಯಾಗುತ್ತಾನೆ.ಹೀಗೆ ಅದೂ ಒಂದು ರೋಚಕ ಪಯಣವೇ! ಕೊನೆಗೆ ತನ್ನ ಹಾಗೆ ವೀಸಾ ಇಲ್ಲದೆ ಬಂದಿರುವವರಿಗಾಗಿರುವ ಸರಕಾರಿ ಜೈಲಿನಲ್ಲಿ ಬಂಧಿಯಾಗುತ್ತಾನೆ. ಅಲ್ಲಿಗೆ ತನ್ನ ಪರಾರಿ ಕೆಲಸಗಾರರ ಹುಡುಕಿಕೊಂಡು ಬರುವ ಅರಬಾಬ್ ಗಳ ವರ್ತನೆ ನೋಡಿ ಕುಸಿಯುತ್ತಾನೆ. ಕೊನೆಗೊಂದು ದಿನ ತನ್ನ ಅರಬಾಬ್ ನ್ನು ಅಲ್ಲಿ ಕಂಡು ಮತ್ತೆ ತಾನು ತನ್ನ ಅದೇ ಕೆಲಸಕ್ಕೆ ಹೋಗಬೇಕಾಗಿ ಬರುತ್ತದಲ್ಲ ಎಂದು ಭಯಪಡುತ್ತಾನೆ. ಆದರೆ ಅರಬಾಬ್ ಅವನನ್ನು ಕೊಂಡುಹೋಗುವುದಿಲ್ಲ. ಆಮೇಲೆ ತಿಳಿಯುವುದೆಂದರೆ ಅವನ ಬಳಿ ಕೆಲಸ ಮಾಡುವ ಪರವಾನಿಗೆಯಲ್ಲಿ (ಆಡು ಮೇಯಿಸುವ) ನಜೀಬ್ ಬಂದದ್ದಲ್ಲ ಎಂದು.


ಎಲ್ಲವೂ ತನ್ನ ವಿಧಿ ಎಂದುಕೊಳ್ಳುವ ನಜೀಬ್ ಗೆ ಕೊನೆಗೆ ಗಡೀಪಾರಿನ ಅದೃಷ್ಟ ಒದಗಿ ತನ್ನ ದೇಶಕ್ಕೆ ಮರಳುತ್ತಾನೆ.ಅಲ್ಲಲ್ಲಿ ಸ್ಲಾವೋಮೀರ್ ರಾವೀಸ್ ನ ’ದ ಲಾಂಗ್ ವಾಕ್’ ನ್ನೂ, ಚಾಂಗ್ ಶನ್ ಲಿಯಾನ ರ ’ಹುಲ್ಲಿನ ಸಾರು’ (ಅನುವಾದ ಬೇಳೂರು ಸುದರ್ಶನ) ವನ್ನೂ ನೆನಪಿಸುವ ಈ ಕೃತಿ ಮನುಷ್ಯನೊಬ್ಬನಿಗೆ ಬರುವ ಕಷ್ಟಗಳ ಬೆಟ್ಟದಲ್ಲೂ ಅವನ ಬದುಕಿನ ಬಗೆಗಿನ ಆಸೆ ಅವನ ದಡ ಸೇರಿಸುವುದರ ಮನೋಜ್ಞವಾಗಿ ಕಟ್ಟಿ ಕೊಡುತ್ತದೆ. ೨೦೦೯ ರಲ್ಲಿ ಮಲಯಾಳಮ್ ನಲ್ಲಿ ಬಂದ ಈ ಕಾದಂಬರಿ ಇದುವರೆಗೂ ೩೨ ಮುದ್ರಣ ಕಂಡಿದೆ. ಅಲ್ಲಿನ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಗೆದ್ದ ಈ ಪುಸ್ತಕವನ್ನು ಸಮರ್ಥವಾಗಿ ಡಾ.ಅಶೋಕ್ ಕುಮಾರ್ ಅನುವಾದಿಸಿದ್ದಾರೆ. ’ಕೆಂಡ ಸಂಪಿಗೆ ’ ಅಂರ್ತರ್ಜಾಲ ತಾಣದಲ್ಲಿ ಧಾರಾವಾಹಿಯಾಗಿ ಬಂದ ಕೃತಿ ಈಗ ಪುಸ್ತಕ ರೂಪದಲ್ಲಿ ಬೆಳಕು ಕಂಡಿದೆ. ಅರಬ್ ದೇಶಗಳ ಬಗೆಗಿನ ಮಿಥ್ ಅನ್ನು ಒಂದೇಟಿಗೇ ತುಂಡು ಮಾಡಿದ ಈ ಕಾದಂಬರಿ ಬದುಕ ಪ್ರೀತಿಸುವ ಎಲ್ಲರೂ ಓದಲೇ ಬೇಕಾದ್ದು.

Wednesday, November 4, 2015

ತೂಗುದೀಪ

ನಮ್ಮದೆಲ್ಲ ಇಷ್ಟೇ. ಏನೋ ಫ಼ೀಲಿಂಗು ಆದಾಗ ನಾಲ್ಕು ಸಾಲು ಗೀಚುವುದು. ಅದನ್ನು ಫ಼ೇಸ್ ಬುಕ್ಕಲ್ಲಿ ಅಪ್ ಲೋಡ್ ಮಾಡಿ ಬರುವ ಲೈಕುಗಳ(ನಾಲ್ಕಾರು) ಎಣಿಸುವುದು. ಅಂತೆಲ್ಲ ಅಂದುಕೊಂಡಿದ್ದವನ ಬಳಿ ನಂದೊಂದು ಕವನ ಸಂಕಲನ ಬರ್ತಾ ಇದೆ ;ಮುಸುಕು ತೆರೆದು’ ಅಂತ  ಗೆಳೆಯ,ಹಿರಿಯ ರವೀಂದ್ರ ಅಂದಾಗ , ನನಗನಿಸಿದ್ದು " ಯಾರು ಓದ್ತಾರೆ ಮಾರ್ರೆ? ಕೈ ಸುಟ್ಟುಕೊಳ್ಳುವ ವ್ಯವಹಾರ. ಅದಲ್ಲದೆ ಕವಿತೆ ಯಪ್ಪಾ ಥೂ.ಕವಿತೆಗಳ ಬರೆಯುವ ಮುಖ್ಯ ಉದ್ದೇಶ ಒಂದು ಹೆಣ್ಣು ಜೀವದ ಎದೆಯಲ್ಲಿ ಇಂಬೆಲಾ ಒಂಜಿ ನರಮಾನಿ" ಅನ್ನೋ ಫ಼ೀಲಿಂಗ್ ಹುಟ್ಟುಹಾಕುವುದು.ಇವರಿಗೆ ಮದ್ವೆ ಆಗಿದೆ.ಸುಮ್ನೆ ಇರೋದು ಬಿಟ್ಟು" ಇತ್ಯಾದಿ. ಇ

ವರೂ , ಗೆಳೆಯ ಗುರುಪ್ರಸಾದರೂ ತಲಾ ಒಂದೊಂದು ಕವಿತಾ ಸಂಕಲನ ತಂದ ಮೇಲೂ, ನನ್ನ ಅಭಿಪ್ರಾಯವೇನು ಬದಲಾಗಿರಲಿಲ್ಲ. ಆದರೆ ಅವರ ಬಗ್ಗೆ ಮತ್ತು ಇಂತಹ ಕೆಲಸಗಳಿಗೆ ಒತ್ತಾಸೆಯಾಗಿ ನಿಂತ ಕರುಣಾಕರರ ಮೇಲೂ ಭಯಂಕರ ರೆಸ್ಪೆಕ್ಟು ಬೆಳೆಯಿತು.  ನಗುವವರ ಮುಂದೆ ’ದೆತೊಣು ಕುಡೊಂಜಿ ವಿಷಯ ತೆಲಿಪ್ಪೆರ ’ ಅಂತಾನೋ, ’ ಮುಕ್ಲೇಗ್ ಮರ್ಲಿಯಾ" ಅಂತಾನೋ ಬಂದ ವ್ಯಂಗ್ಯಗಳಿಗೆ ತಲೆಕೆಡಿಸಿಕೊಳ್ಳದೆ ಪ್ರಕಟನೆಗೆ ಹೊರಟರಲ್ಲ ಅದು ಸಾಧನೆ. ಆಮೇಲೆ ನಮ್ಮಂತಹ ನಾಲ್ಕಾರು ಹಣೆಪಟ್ಟಿಯವರ ಒಟ್ಟು ಹಾಕಿ ಒಂದು ಸಂಕಲನವೂ ತಂದಿದ್ದಾಯ್ತು.
ಇವೆಲ್ಲ ನೆನಪಾದದ್ದು ಮೊನ್ನೆ ರವೀಂದ್ರ ಎರಡನೇ ಕವನ ಸಂಕಲನ ’ತೂಗುದೀಪ’ ಬಿಡುಗಡೆಯಾದಾಗ! ವೈಯಕ್ತಿಕವಾಗಿ ನನಗೆ ಇಷ್ಟವಾದ ಕವಿತೆಗಳಿರುವ ಈ ಸಂಕಲನ ನಿಮಗೂ ಇಷ್ಟವಾದೀತು

Tuesday, June 30, 2015

book review: 'a report on the lost soul'

ಒಬ್ಬ ಲೇಖಕ ಬರೆಯತೊಡಗುವಾಗ ಅವನ ಮುಂದೆ ಮೂಡುವ ಪ್ರಶ್ನೆಗಳು ಹಲವು. ಅದರಲ್ಲಿ ಮುಖ್ಯವಾದವು ಯಾಕಾಗಿ ಬರೆಯಬೇಕು? ಮತ್ತು ಯಾರಿಗಾಗಿ ಬರೆಯಬೇಕು? ಹೊಟ್ಟೆಪಾಡು ಇತ್ಯಾದಿಗಳಿಗೆ ಬರೆಯಹೊರಟವರ ಮಾತು ಬೇಡ.ಸೃಜನಾತ್ಮಕವಾಗಿ ಏನಾದರೂ ಬರೆವವರ ಮುಂದಿನ ಬಹುಮುಖ್ಯ ಸವಾಲುಗಳು ಇವು. ಇವೆಲ್ಲ ಗೊಂದಲಗಳಲ್ಲೇ 'ಅದು ಅವರು ಹೇಗೆ ಸ್ವೀಕರಿಸಬಹುದು? ಇದು ಅವರಿಗೆ ಹಿಡಿಸಲಿಕ್ಕಿಲ್ಲ" ಎಂಬಿತ್ಯಾದಿ ಹಿಂಜರಿಕೆಯಿಂದ ಬರೆದರೆ ಯಾರ ಮೆಚ್ಚಿಸಲೂ ಆಗದೆ, ನಮಗೆ ತೃಪ್ತಿಯೂ ಆಗದೆ ತೊಳಲಾಡುವುದೇ ಹೆಚ್ಚು.
ಈ ಮೇಲಿನ ಪ್ರಶ್ನೆಗಳು ಈಗ ತಾನೇ ಓದಿದ ಗಿರೀಶ್ ರಾಮಚಂದ್ರರ ಚೊಚ್ಚಲ ಕಾದಂಬರಿ ' ಎ ರಿಪೋರ್ಟ್ ಆನ್ ಲೋಸ್ಟ್ ಸೋಲ್' ಓದುವಾಗ ಕಾಡಿತು. ಕಥಾ ನಾಯಕನ ಪ್ರಥಮ ಪುರುಷ ನಿರೂಪಣೆಯಲ್ಲಿ ಸಾಗುವ ಕತೆ ರೈಲು ಪ್ರಯಾಣದ ಅನುಭವ (ನನಗೆ) ಕೊಟ್ಟಿತು. ಐ.ಟಿ. ಜಗತ್ತಿನಲ್ಲಿ ಯಶಸ್ವಿ ಉದ್ಯಮಿಯಾಗಿ ಹೆಸರು ಮಾಡಿ ತನ್ನದೇ ಕಂಪೆನಿಯ ಒಡೆಯನಾದ ನಾಯಕನಿಗೆ ಆ ಯಶಸ್ಸಿನ , ಒತ್ತಡವ ಮತ್ತು ವೈಯಕ್ತಿಕ ಬದುಕನ್ನು ತೂಗಲಾರದೆ ಕಳೆದು ಹೋಗಿದ್ದಾನೆ. ಎಷ್ಟರಮಟ್ಟಿಗೆ ಎಂದರೆ ತನ್ನ ಪತ್ನಿಯನ್ನು ಕೊಲ್ಲಬೇಕೆಂದು ಯೋಚಿಸುವ ಮಟ್ಟಿಗೆ. ಅವನ ಗೆಳೆಯನದ್ದೂ ಅದೇ ಕತೆ.ಕಾರಣ ಬೇರೆ. ಒಬ್ಬ ಯಶಸ್ವೀ ಉದ್ಯಮಿಯಾದರೂ ತನ್ನೊಳಗಿನ ಹುಡುಕಾಟದಲ್ಲಿ ಕಳೆದು ಸೋತುಹೋದ ನಾಯಕ ಮತ್ತೆ ತನ್ನ ಹುಡುಕುವ ಯಾನದಂತೆ ಈ ಕಾದಂಬರಿ ಭಾಸವಾಯಿತು. ಇಲ್ಲಿ ಅವನ ಬಾಲ್ಯದ, ಕಾಲೇಜಿನ ನೆನಪುಗಳಿವೆ. ಆಡಿದ ಆಟಗಳು,ಗೆಳೆಯರಿದ್ದಾರೆ. ಗೆಳತಿಯರ ಸಂಖ್ಯೆಯೂ ಸಾಕಷ್ಟಿದೆ. ಆದರೆ ಇಲ್ಲೆಲ್ಲೋ ನಡುವೆ ಅವನು ಕಳೆದು ಹೋಗಿದ್ದಾನೆ. ನಾನು ಆಶಯವ ಸರಿಯಾಗಿ ಗ್ರಹಿಸಿದ್ದೇ ಆದರೆ ಈ ಹುಡುಕುವ ಗೊಂದಲವೇ ಇದೆಲ್ಲಕ್ಕೂ ಕಾರಣ.
ಕೊನೆಗವನು ಯಶಸ್ವಿಯಾದನೋ ಇಲ್ಲವೋ ಓದಿ ನೋಡಿ.
ಮೊದಲ ಯತ್ನದಲ್ಲಿ ಕತೆ ಇರುವ ಪುಸ್ತಕ ಕೊಟ್ಟದ್ದಕ್ಕೆ ಲೇಖಕರಿಗೆ ಅಭಿನಂದನೆ.

Friday, June 26, 2015

ಸಲೇಮ್ಸ್ ಲಾಟ್ ಮತ್ತು ಡ್ರಾಕುಲ

ಹೈಸ್ಕೂಲಿನ ಕೊನೆಯ ವರ್ಷದಲ್ಲಂತೂ ವಾರಕ್ಕೆರಡು ಸಲ ವಿಟ್ಲದ ಲೈಬ್ರರಿಗೆ ಓಡುವುದು.ಸಿಕ್ಕ ಸಿಕ್ಕ ಪುಸ್ತಕಗಳ ಬಾಚಿ ರಪ ರಪ ಓದಿ ಮುಗಿಸುವುದು ಇದೇ ಗೀಳಾಗಿ ಹೋಗಿತ್ತು. ಹಾಗೆ ತಡಕಾಡುವಾಗ ಹಳೆಯ ರಟ್ಟಿನ ಬೈಂಡಿನಲ್ಲಿದ್ದ ದಪ್ಪ ಪುಸ್ತಕವೊಂದು ಕಣ್ಣಿಗೆ ಬಿತ್ತು. 'ಡ್ರಾಕುಲ' ಎಂಬ ಹೆಸರೂ, ಓದಿದರೆ ಮೈ ನವಿರೇಳುವಂತ ಅನುಭವ ಅಂತ ಮುನ್ನುಡಿಯೂ ನೋಡಿ ಓಹೋ ಇದು ಆ ತರಹದ ಪುಸ್ತಕ ಅಂತ ತಂದು ರಾತ್ರಿ ಓದಲು ಶುರು ಮಾಡಿದವನಿಗೆ 'ಯಾಕಪ್ಪಾ ಹಿಡಕೊಂಡೆ?' ಅನ್ನುವಷ್ಟು ಭಯವಾಗಿತ್ತು. ಅಮ್ಮನೆದುರು ಪಠ್ಯ ಪುಸ್ತಕ ಓದುವ ಪೋಸ್ ಕೊಟ್ಟು ರೂಮು ಸೇರಿದವನಿಗೆ ಈ ವ್ಯಾಂಪೈರ್ ಕತೆ ಬೇಕಿತ್ತಾ ಅನಿಸಿತು. ಮುಚ್ಚಿಡಲು ಕುತೂಹಲ ಬಿಡುತ್ತಿಲ್ಲ್ಲ. ಕನ್ನಡ ಅನುವಾದವೂ ಬಹಳ ಚೆನ್ನಾಗೇ ಇದ್ದುದರಿಂದ ಓದು ಸರಾಗ. ಪತ್ರಗಳ,ದಿನಪತ್ರಿಕೆಗಳ ಸುದ್ದಿಗಳ,ಡೈಯರಿ ಎಂಟ್ರಿಗಳ ಮೂಲಕ ಕತೆ ಸಾಗುವ ತಂತ್ರ ಹಿಡಿಸಿತು. ಕುತ್ತಿಗೆಯ ಬಳಿ ಕಚ್ಚಿ ಎರಡು ಹಲ್ಲಿನ ಗುರುತು ಮಾಡುವ ಡ್ರಾಕುಲವೂ, ಅದು ಹೀರುವ ರಕ್ತವೂ, ಅದರ ಕೋಟೆಯೂ ಆಮೇಲೆ ಬಹಳ ದಿನ ಕಾಡಿದ್ದವು. ಬ್ರಾಮ್ ಸ್ಟೋಕರನ ವಿಶ್ವವಿಖ್ಯಾತ ಕಾದಂಬರಿ ನನಗೆ ಪರಿಚಯವಾದದ್ದು ಹೀಗೆ.
ಇತ್ತ್ತೀಚೆಗಷ್ಟೆ ಅದರ ಮೂಲ ಪುಸ್ತಕ ಓದಿದೆ. ಅದೂ ಬಹಳ ಇಷ್ಟವಾಯ್ತು. ಸ್ಟೀಫ಼ನ್ ಕಿಂಗ್ ನ ಅತ್ಯುತ್ತಮ ಪುಸ್ತಕಗಳ ಅಂತರ್ಜಾಲ ಪಟ್ಟಿ ಹುಡುಕುವಾಗ ಈ 'ಸಲೇಮ್ಸ್ ಲಾಟ್' ಹೆಸರು ಕಣ್ಣಿಗೆ ಬಿದ್ದು ತರಿಸಿದ್ದೆ. ಓದುತ್ತಾ ಹೋದಂತೆ ಮತ್ತೆ ಹಳೆಯ ನೆನಪುಗಳೆಲ್ಲಾ ಒತ್ತರಿಸಿ ಬಂತು. ಕಿಂಗ್ ತನಗೆ ಮಾತ್ರ ಸಾಧ್ಯವಿರುವ ದಟ್ಟ ಶೈಲಿಯಲ್ಲಿ ಡ್ರಾಕುಲದ ಕತೆಯ ನಿರೂಪಿಸಿದ್ದಾನೆ. ಅವನ ಪುಸ್ತಕಗಳ ಪರಿಚಯವಿರುವವರಿಗೆ ಇದೇನು ಹೊಸದಲ್ಲ. ಕಣ್ಣಿಗೆ ಕಟ್ಟುವ ವರ್ಣನೆಗಳಿಂದ ಕಾಲ್ಪನಿಕ ಊರನ್ನೂ, ಅಲ್ಲಿನ ಜನರ ಒಳಹೊರಗನ್ನೂ ನಮ್ಮೆದುರು ತಂದು ನಿಲ್ಲಿಸುವಲ್ಲಿ ಕಿಂಗ್ ಸೋತದ್ದೇ ಇಲ್ಲ. ದೆವ್ವ ಭೂತದ ಕತೆಯಲ್ಲಿ ಆಸಕ್ತಿ ಇರುವವರು ಓದಲೇಬೇಕಾದ ಕಾದಂಬರಿ

Saturday, January 17, 2015

ಮಿಸ್ಕಿನ್ ನ 'ಪಿಸಾಸು'

ಮಿಸ್ಕಿನ್ ನನ್ನ ಇಷ್ಟದ ನಿರ್ದೇಶಕರಲ್ಲೊಬ್ಬರು. ಕಮರ್ಷಿಯಲ್ ಚೌಕಟ್ಟಿನ ಒಳಗೇ ನಾಟಕವಾಗಿ, ಕಲೆಯಾಗಿ, ಪ್ರತಿಮೆಗಳಾಗಿ ಕಾಡುವ ಚಿತ್ರಗಳ ಕೊಟ್ಟದ್ದರಿಂದ ಇಷ್ಟವಾದವರು.
ಬಹಳ ಹಿಂದೆಯೇ ಚಿತ್ರಂ ಪೇಸುದಡಿ ನೋಡಿದ್ದೆ. ವಿಚಿತ್ರ ಅನಿಸಿತ್ತು.
ಆಮೇಲಿನ ಅಂಜಾದೇ,ಮುಗಮೂಡಿ,ಒಮ್ಮಾನುಂ ಆಟ್ಟುಕುಟ್ಟಿಯುಂ, ಯುದ್ದಂ ಸೆಯಿ,ನಂದಲಾಲ ದಂತಹ ಯತ್ನಗಳಿಂದ ಹತ್ತಿರವಾದರು.
ಕಪ್ಪು ಬಿಳುಪು ಪಾತ್ರಗಳು, ನಾಟಕೀಯ ಹೊಡೆದಾಟ(ಪೆಟ್ಟು ತಿನ್ನುವವರೆಲ್ಲ ಒಬ್ಬೊಬ್ಬರಾಗಿ ಬಂದು ಹಿಂದೆ ಸರಿದು ಮರೆಯಾಗುವುದು ರಂಗದಲ್ಲಿದ್ದಂತೆ)
ಎದೆಯಾಳಕ್ಕೆ ಇಳಿವ ಹಾಡುಗಳು ಅದರಲ್ಲೂ ಅಂಜಾದೆಯ ಕಣ್ಣದಾಸನ್ , ಅಚ್ಚಂ ತವಿಯ ನನ್ನ ಇಷ್ಟದವು.
ಪ್ರತಿ ಸಲ ಇವರ ಸಿನಿಮಾ ಮನುಷ್ಯ ಸಂಬಂಧದ ಮಗ್ಗುಲುಗಳ ಶೋಧಿಸುವ ಪರಿ, ತಾಕಲಾಟವ ಮುಟ್ಟಿಸುವ ವಿಧಾನ ಕಾಡುತ್ತದೆ.
ಈಗಷ್ಟೆ ನೋಡಿದ ಮಿಸ್ಕಿನ್ ಹೊಸ ಸಿನಿಮಾ 'ಪಿಸಾಸು'(ಪಿಶಾಚಿ) ಕೂಡ ಅಷ್ಟೆ.
ಚಿತ್ರದ ಆರಂಭವೇ ನಮ್ಮನ್ನ ಹಠಾತ್ತಾಗಿ ಯಾರೋ ಬಾವಿಗೆ ತಳ್ಳಿಬಿಟ್ಟಂತಾಗಿ ನೋಡುವುದೇ ಬಿಡುಗಡೆಯ ಹಾದಿಯಾಗುತ್ತದೆ.
ಅವಳ ಕಣ್ಣುಗಳು ಅದರಲ್ಲಿ ಆರುತ್ತಿರುವ ನಗೆ ಚಿತ್ರ ತೆರೆದುಕೊಂಡಂತೆ ಅವಳು ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದಾಳೆ.
ಹೊಡೆದವ ಕಾರು ಓಡಿಸಿಕೊಂಡು ಹೋಗಿದ್ದಾನೆ. ಇಬ್ಬರು ಮೂವರು ಎಲ್ಲಿಂದಲೋ ಬಂದು ಅವಳನ್ನೆತ್ತಿ ಆಟೋಗೆ ಹಾಕಿದ್ದಾರೆ. ಅಯ್ಯೋ ಗಡಿಬಿಡಿಯಲ್ಲಿ ಅವಳ ಒಂದು ಚಪ್ಪಲಿ ರಸ್ತೆಯಲ್ಲಿ ಬಿದ್ದಿದೆ. ಹೋಗುತ್ತಿರುವಆಟೋದಿಂದ ಹೊರಚಾಚಿದ ಕಾಲಲ್ಲಿ ಇನ್ನೊಂದು ಚಪ್ಪಲಿ ವಿದಾಯ ಹೇಳುತ್ತಿರುವಂತಿದೆ.
ಅವಳ ಆಸ್ಪತ್ರೆಗೆ ತಂದವರಲ್ಲಿ ಅವನೊಬ್ಬ ಜೊಂಪೆಗೂದಲಿನ ಹುಡುಗ. ಎಮರ್ಜೆನ್ಸಿ ರೂಮಿಗೆ ತೆರಳುವ ಮುನ್ನ ಅವಳ ಕೈ ಅವನದನ್ನ ಗಟ್ಟಿಯಾಗಿ ಹಿಡಿದಿದೆ. ಬಿಡಿಸಲು ನರ್ಸ್ ಸಹಾಯ ಮಾಡಿದಂತೆ ಅವಳೂ ಹೋಗುತ್ತಾಳೆ. ಡಾಕ್ಟರ್ ಬಂದವರೇ ಇವಳ ಸಂಬಂಧಿಕರಿಗೆ ಹೇಳಿ she is dead ಅನ್ನುತ್ತಾರೆ. ಹೊರಬಂದ ಹುಡುಗ ಸತ್ತವಳಿಗೆ ಏನೂ ಅಲ್ಲ. ಅಲ್ಲೇ ಅವಳ ಚಪ್ಪಲಿ ಒಂಟಿಯಾಗಿ ಬಿದ್ದಿದೆ. ಹಿಂದಿನಿಂದ ಅವಳ ತಂದೆಯ ಅಳು ಕೇಳಿಸಿಕೊಳ್ಳುತ್ತಾ ಅವನು ಆ ಚಪ್ಪಲಿ ತೆಗೆದುಕೊಂಡು ಹೋಗುತ್ತಾನೆ. 
ಅಲ್ಲಿಂದ ಅವನಿಗೆ ಶುರುವಾಗುತ್ತದೆ ದೆವ್ವದ ಕಾಟ. ಎಂಥಹ ಕತೆ ಇದ್ದರೂ ಅದನ್ನ ತನ್ನ ಶೈಲಿಗೆ ಬಗ್ಗಿಸಿಕೊಳ್ಳುವ ತಾಕತ್ತು ಇರುವ ಮಿಸ್ಕಿನ್ ಇಲ್ಲೂ ತನ್ನ ಕೈಚಳಕ ತೋರಿದ್ದಾರೆ. ಈ ಹಿಂದೆ ಮುಗಮೂಡಿಯಲ್ಲಿ ಸೂಪರ್ ಹೀರೋ ಕತೆಯ ತೋರಿದ ಬಗೆ ಹೊಸದಾಗಿತ್ತು. ಈಗ ಈ ಹಾರರ್ ಕತೆ.
ಸಂಬಂಧಗಳು, ನಂಬಿಕೆ,ಭಯಗಳ ಮೇಲಾಟ ಕೊನೆಗೊಂದು ಹ್ರದಯ ಭೇದಕ ಸತ್ಯ. ಮಿಸ್ಕಿನ್ ಮತ್ತೆ ಗೆದ್ದಿದ್ದಾರೆ. 

Saturday, January 10, 2015

ಇದು ಕನಸೇ?!

 ಅರೆ ಎಚ್ಚರದ, ಅತ್ತ ನಿದ್ದೆಯೂ ಅಲ್ಲದ ಮಂಪರು. ಈ ಬಿರುಬಿಸಿಲಲ್ಲಿ ಅವನೊಬ್ಬ ಅಲ್ಲಿ ರಸ್ತೆ ಬದಿಯಲ್ಲಿ ಪಾನೀಪೂರಿ ಮಾರುತ್ತಿದ್ದಾನೆ.ಅವನಿಗೆ ಒತ್ತಾಗಿ ಇನ್ನೊಬ್ಬ ಚಿಕ್ಕ ಹುಡುಗನ ಶಾಪು. ನಾನು " ಡ್ರೈ ಪಾನೀಪೂರಿ ಇದೆಯೇ?" ಅಂತ ಕೇಳಿದ್ದೇ ಮಹಾಪರಾಧವಾಯಿತೋ ಎಂಬಂತೆ, " ಏನಣ್ಣಾ ಅದೆಲ್ಲ ಇಲ್ಲೆಲ್ಲಿ ಸಿಗತ್ತೆ?" ಅಂದ. "ಸರಿ ಹಂಗಾರೆ ಒಂದು ಪ್ಲೇಟ್ ನಾರ್ಮಲ್ ಪಾನೀಪೂರಿ ಕೊಡು" ಅಂದೆ. "ನಾರ್ಮಲ್, ನಾರ್ಮಲ್" ಅಂತ ಮಣ ಮಣಿಸುತ್ತಾ ಅವನು ಪೂರಿಗಳ ತಟ್ಟೆಗೆ ತುಂಬತೊಡಗಿದ. ಪಾನಿಗೆ ಉಪ್ಪು ಕಮ್ಮಿಯೋ ಅಂತ ನನ್ನೆದುರಿಗೇ ಟೇಸ್ಟ್ ನೋಡಿ, ಉಪ್ಪಿನ ಚೀಲದಲ್ಲಿ ಅದನ್ನು ಮುಳುಗಿಸಿದ. ನಾನ್ಯಾವುದೋ ವಿಚಿತ್ರ ಪ್ರದೇಶದಲ್ಲಿದ್ದೇನೆ ಅಂದುಕೊಂಡೆ. ತಲೆ ನೆಟ್ಟಗಿರುವ ಯಾವನಾದರೂ ತನ್ನ ಗಿರಾಕಿಯ ಎದುರೇ ಇಂತಹ ಮೂರ್ಖ ಕೆಲಸ ಮಾಡ್ತಾನಾ? ಆದರೂ ಆಸೆ ನಂಗೆ. ಇವನ ಪಕ್ಕದ ಶಾಪಿನವನಿಗೆ ಗಿರಾಕಿ ಇಲ್ಲದೆ ಅವನು ಸುಮ್ಮನೆ ಮನೆಗೆ ಹೋಗೊದು ನೆನೆಸಿ ಬೇಜಾರಾಯ್ತು. ನಾನೇನು ಮಾಡ್ಲಿ? ನನ್ನ ಕೆಲಸ ಇಲ್ಲಿಂದ ಪಾನೀಪೂರಿ ತಗೊಂಡು ತಿನ್ನೋದಷ್ಟೆ. ಇದೆಲ್ಲಾ ಒಳಗೆ ಟೊಳ್ಳಿನ ವ್ಯವಹಾರ ಅನಿಸಿತ್ತು. ಈಗಷ್ಟೆ ನನ್ನ ಚಾರ್ಜರ್ ಕಿತ್ತು ಒಳಗಡೆ ನೋಡಿದ್ದೆ. ಯು.ಎಸ್.ಬಿ. ಪೋರ್‍ಟ್ ಇರಬೇಕಾದ ಕಡೆ ಖಾಲಿ. ಇದ್ಯಾಕೋ ಸರಿ ಇಲ್ಲ. ಅಂತ ಅನಿಸುವಾಗಲೇ ,ಈ ಪಾನೀಪೂರಿಯೋನು ನಂಗೆ ವಿಷ ಹಾಕಿದ್ರೆ ಅಂತ ಗಾಢವಾಗಿ ಅನ್ನಿಸತೊಡಗಿತು. ಅಯ್ಯೋ ,ಇಲ್ಲಿವನಿಗೆ ಬರೋದೇ ನಾನೊಬ್ಬ ಗಿರಾಕಿ.ನನ್ನನ್ನೂ ಕಳಕೊಂಡ್ರೆ ಇವನ ಬದುಕಿನ ಅರ್ಥವೇ ಇಲ್ಲ್ದಾಗಿಬಿಡುತ್ತಲ್ಲಾ ಅಂತ ಸಮಧಾನಿಸಿಕೊಂಡೆ.
ಆದರೂ ಯಾರಿಗೆ ಯಾವಾಗ ಗಡಿ ಹಾರುವ ಹಂಬಲ ಬರುತ್ತೋ ಯಾರಿಗೆ ಗೊತ್ತು? ಇವನ ಕ್ಷಣದ ಹುಚ್ಚಿಗೆ ನಾನು ಇಲ್ಲವಾಗೋದು ನೆನೆಸಿ ಕಿರಿಕಿರಿಯಾಗತೊಡಗಿತು. ಯಾರೋ ಕಿವಿಯಲ್ಲಿ 'ಕರ್ಮಣ್ಯೇ ವಾದಿಕಾರಸ್ತೇ...' ಅಂತ ಊದಿಹೋದಂತಾಗಿ, ನಾನು ಅವನು ಕೊಟ್ಟ ಪ್ಲೇಟಿನಿಂದ ನಿರ್ಯೋಚನೆಯಿಂದ ,ಚಪ್ಪರಿಸುತ್ತಾ ಒಂದೊಂದಾಗಿ ಪಾನೀಪೂರಿ ತಿನ್ನತೊಡಗಿದೆ.

Saturday, January 3, 2015

'ಸುಮ್ಮನೆ' ಓದಿದ ಗುಂಗು

ಬಿ.ಸಿ.ರೋಡಲ್ಲಿ ಓದುತ್ತಿದ್ದಾಗ ಹಳೆಯ 'ತರಂಗ' ಸಂಚಿಕೆಗಳ ತಿರುವಿ ಹಾಕುತ್ತಿದ್ದಾಗ ಅನಿರೀಕ್ಷಿತ ಎಂಬಂತೆ ಕಣ್ಣಿಗೆ ಬಿದ್ದದ್ದೇ ಈ ' ಅಶ್ವಘೋಷ' ಅನ್ನುವ ಹೆಸರು. ಬರೆದವರಾರು ನೋಡಿದರೆ 'ಸತ್ಯಕಾಮ' ಎಂದಿತ್ತು. ಎರಡೂ ವಿಚಿತ್ರವಾಗಿದೆಯಲ್ಲ ಅಂದುಕೊಳ್ಳುತ್ತಾ ಆ ಧಾರಾವಾಹಿಯ ಮೊದಲ ಭಾಗ ಓದುವಾಗಲೇ ತಲೆ ಗಿರ್ರೆಂದಿತ್ತು. ಅದರಲ್ಲಿದ್ದ ಗಂಜೀಫ಼ಾ ರಘುಪತಿ ಭಟ್ಟರ ಕಲೆ ಹೊಸತೆನ್ನಿಸಿತ್ತು. ಬಿಡಿ ಬಿಡಿ ವಾಕ್ಯಗಳು ನನಗೆ ಹೊರೆಯಾಗಿತ್ತು. ಆಗ ಸಿಕ್ಕಿದ್ದೆಲ್ಲ ಓದುತ್ತಿದ್ದ ಕಾರಣ ಪಟ್ಟಾಗಿ ಕೂತು ಓದಿ ಮುಗಿಸಿದರೂ , ಎಲ್ಲೋ ಇದು ಈ ತನಕ ಓದಿದ್ದಕ್ಕಿಂತ ಭಿನ್ನವಾಗಿದೆ ಎಂಬ ಭಾವ.
ಆಮೇಲೆ ಹೈಸ್ಕೂಲಿನ ದಿನಗಳಲ್ಲಿ ಸತ್ಯಕಾಮರ ನಾಯಿ ಮೂಗು, ರಾಜ ಕ್ರೀಡೆ, ಶೃಂಗಾರ ತೀರ್ಥ ಹೀಗೆ ಹಲವಾರು ಪುಸ್ತಕ ಓದಿದೆ. ಬಿಟ್ಟ ಸ್ಥಳಗಳ ತುಂಬಿರಿ ತರಹದ ಅವರ ಬರಹ ಮನಸಿಗೆ ಭಾರವಾಗಿತ್ತು. ಓದಿದರೆ ಏನೋ ಅತೃಪ್ತಿ: (ಎಮ್.ವ್ಯಾಸರ ಓದಿದರೂ ಹಾಗೇ, ಖಾಲಿಯಾಗುವ ಭಯ) ಉಲ್ಲಾಸವಿಲ್ಲ.
ಮತ್ತೆ ಸಿಕ್ಕಿದ್ದು ಅವರ 'ತಂತ್ರಯೋನಿ' ಪಂಚ'ಮ''ಗಳ ನಡುವೆ' ಇವೆರಡು,ಜೊತೆಗೆ ಸುರೇಶ ಸೋಮಪುರರ 'ಅಘೋರಿಗಳ ನಡುವೆ' ಹೊಸ ಜಗತ್ತಿಗೆ ಕಿಂಡಿಯಾಗಿತ್ತು. ಆದರೂ ನನಗೆ ಅಷ್ಟಾಗಿ ಖುಶಿ ಕೊಡದ ಲೇಖಕ ಸತ್ಯಕಾಮ.
ಇತ್ತೀಗಷ್ಟೇ ಅವರ ನೆನಪಿನ ಗ್ರಂಥ 'ಸುಮ್ಮನೆ' ಓದಿದೆ. ವೀಣಾ ಬನ್ನಂಜೆ ಸಂಪಾದಿಸಿರುವ ಇದನ್ನು ಅಭಿನವ ಪ್ರಕಟಿಸಿದೆ. ಒಳ್ಳೆಯ ಸಂಕಲನ. ಸತ್ಯಕಾಮವರ ಬಲ್ಲವರು, ಹಾಗೆಂದು ಭ್ರಮಿಸಿಕೊಂಡವರು ಬರೆದ ಅವರ ಚಿತ್ರಣಗಳ ಸಂಕಲನ. ಕೆಲವರಿಗೆ ಅವರು ಧೂರ್ತ(ಲಂಕೇಶ್..) ಮತ್ತೆ ಕೆಲವರಿಗೆ ಅವಧೂತ..ಹೀಗೆ.
ಇದೊಂತರಾ ಅವರಿವರು ದಯಮಾಡಿದ ತಮ್ಮ ತಮ್ಮ ನೆನಪಿನ ಆಲ್ಬಮ್ ನಿಂದ , ನಾವು ಇಡಿಯ ಚಿತ್ರ ರೂಪಿಸುವ ಯತ್ನ.ಖಾಲಿ ಬಿಟ್ಟದ್ದು ಹಾಗಿದ್ದರೇ  ಚೆಂದ ಮತ್ತು ಪರಿಪೂರ್ಣ!